ಭ್ರಷ್ಟಾಚಾರದ ಬೇಟೆಯಾಡುತ್ತೇನೆ, ಕಪ್ಪುಹಣ ಮರಳಿ ತರುತ್ತೇನೆ ಎಂದು ಪಣ ತೊಟ್ಟಿದ್ದ ಮೋದಿ ಸರ್ಕಾರದಲ್ಲಿ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅದಕ್ಕೆ ಬಿಜೆಪಿಯೇ ಕಾರಣ ಎಂದು ರಾಜ್ಯದ ಶೇ.34ಕ್ಕೂ ಹೆಚ್ಚು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.
ನ ಖಾವೂಂಗಾ, ನ ಖಾನೇ ದೂಂಗಾ (ನಾನು ಖುದ್ದು ಲಂಚ ತಿನ್ನಲ್ಲ, ಬೇರೆಯವರು ತಿನ್ನಲೂ ಬಿಡುವುದಿಲ್ಲ) ಎಂದು ಎದೆಯುಬ್ಬಿಸಿ ಹೇಳುತ್ತಾರೆ ಮೋದಿ. ಆದರೆ ಕಳೆದ ಹತ್ತು ವರ್ಷಗಳ ಅವರ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಅದಕ್ಕೆ ಬಿಜೆಪಿಯೇ ಕಾರಣ ಎಂಬುದು ರಾಜ್ಯದ 36.4% ರಷ್ಟು ಮತದಾರರ ಸ್ಪಷ್ಟ ಅಭಿಪ್ರಾಯ.
ʼಭ್ರಷ್ಟಾಚಾರ ನಿರ್ಮೂಲನೆʼ ಮಾಡುವುದಾಗಿ ಹೇಳಿಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪುಲ್ವಾಮಾ ದುರಂತದ ಬೆನ್ನೇರಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಈ ಬಾರಿ ಮತ್ತೊಮ್ಮೆ ಅಧಿಕಾರ ಉಳಿಸಿಕೊಂಡು, ಮೂರನೇ ಅವಧಿಗೆ ಮುಂದುವರೆಯಲು ದ್ವೇಷ, ಭಯ, ಭ್ರಮೆ, ಜಾತಿ, ಧರ್ಮ, ಕುಟುಂಬ ರಾಜಕಾರಣಗಳನ್ನು ಮುಂದೆ ತಂದು ಒಡೆದಾಳುವ ಹುನ್ನಾರ ಹೂಡಿದೆ..
ರಫೇಲ್ ಯುದ್ಧವಿಮಾನ, ಕೋವ್ಯಾಕ್ಸಿನ್, ಚುನಾವಣಾ ಬಾಂಡ್ ಸೇರಿದಂತೆ ಬೃಹತ್ ಭ್ರಷ್ಟಾಚಾರದ ಹತ್ತಾರು ಹಗರಣಗಳು ಮೋದಿಯವರ ಮುಖದ ಮೇಲೆ ಸಿಡಿದಿವೆ. ಆದರೂ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸುಳ್ಳುಗಳೇ ತುಂಬಿದ ಹಳೆಯ ಮುಖವಾಡಗಳನ್ನು ಹೊಸದಾಗಿ ಧರಿಸಲು ಆರಂಭಿಸಿದ್ದಾರೆ.
ಹಿಂದುತ್ವ, ಉಗ್ರ ರಾಷ್ಟ್ರವಾದ, ಹಿಂದೂರಾಷ್ಟ್ರದಂತಹ ಸಿದ್ಧಮಾದರಿಗಳ ಜತೆಗೆ ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಮತಬೇಟೆಯ ಹತಾರುಗಳನ್ನು ಹೂಡತೊಡಗಿದ್ದಾರೆ.
ತಮಿಳುನಾಡಿನಲ್ಲಿ ಭಾವನಾತ್ಮಕ ವಿಷಯಗಳನ್ನು ಹರಿಯಬಿಟ್ಟಿದ್ದರೆ, ಕೇರಳದಲ್ಲಿ ಸಿಪಿಎಂ ನೇತೃತ್ವದ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ದೆಹಲಿಯಲ್ಲಿ ಚುನಾಯಿತ ಸರ್ಕಾರದ ನೇತಾರರನ್ನೆಲ್ಲ ಜೈಲಿಗೆ ತಳ್ಳಿ, ಆಮ್ ಆದ್ಮೀ ಪಾರ್ಟಿಯ ಚುನಾವಣಾ ಪ್ರಚಾರದ ಕೈಕಾಲು ಕಟ್ಟಿ ಹಾಕಿದ್ದಾರೆ. ಉತ್ತರದ ರಾಜ್ಯಗಳಲ್ಲಿ ರಾಮಮಂದಿರ, ರಾಮಾಯಣದ ಸಂಕಥನವನ್ನೇ ಮುಂದುವರಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಸದ್ಯದ ಮಟ್ಟಿಗೆ ಭದ್ರ ನೆಲೆ ಇರುವ ಕರ್ನಾಟಕದಲ್ಲಿಯೂ ಬಿಜೆಪಿ ಅಥವಾ ಮೋದಿಯವರ ರಣತಂತ್ರ ಅಲ್ಪಸಂಖ್ಯಾತರನ್ನು ಹಣಿದು ಬಹುಸಂಖ್ಯಾತರನ್ನು ಒಲಿಸಿಕೊಳ್ಳುವುದೇ ಆಗಿದೆ.
ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಗೆ ಮುನ್ನ, ‘ಹಿಂದುತ್ವ’ದ ಹೆಸರಿನಲ್ಲಿ ಬಿಜೆಪಿ ಪಡೆ ಭಾವನಾತ್ಮಕ ಯುದ್ಧವನ್ನೇ ಸಾರಿತ್ತು. ಮೋದಿಯವರು ಎಬ್ಬಿಸಿದ ದ್ವೇಷ ಭ್ರಮೆಗಳ ಸುಂಟರಗಾಳಿಯಲ್ಲಿ ಕಾಂಗ್ರೆಸ್ ಕಣ್ಮರೆಯಾಗಿ, ಬಿಜೆಪಿ ಮತ್ತೊಮ್ಮೆ ಭಾರೀ ಬಹುಮತದಲ್ಲಿ ಅಧಿಕಾರ ಹಿಡಿಯಲಿದೆ ಎಂದೇ ಬಿಂಬಿಸಲಾಗಿತ್ತು. ಮೋದಿಯವರ ಗಾಢಾಂಧ ಅಭಿಮಾನಿಗಳೂ ಕೂಡಾ ಇದನ್ನೇ ಸತ್ಯವೆಂದು ನಂಬಿದ್ದರು. ಮತದಾರರು ಮೋದಿ ಭ್ರಮೆಯ ಮೈಮರೆವಿನಿಂದ ಎಚ್ಚೆತ್ತರು. ತಮ್ಮ ದಿನನಿತ್ಯದ ಕಷ್ಟನಷ್ಟಗಳಿಗೆ ಸ್ಪಂದಿಸಿದ, ಅನುವು ಆಪತ್ತುಗಳಲ್ಲಿ ಕೈ ಹಿಡಿಯುವ ಭರವಸೆ ನೀಡಿದ ಪಕ್ಷವನ್ನು ಆರಿಸಿಕೊಂಡರು. ಬಿಜೆಪಿ ಲೆಕ್ಕಾಚಾರ ಬುಡಮೇಲಾಯಿತು. ಕಾಂಗ್ರೆಸ್ ಭಾರೀ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಇದೀಗ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತನ್ನು ಮರುಹಂಚಿಕೆ ಮಾಡಿ ಹೆಚ್ಚು ಮಕ್ಕಳನ್ನು ಹುಟ್ಟಿಸಿದವರಿಗೆ ಧಾರೆ ಎರೆಯಲು ಹೊರಟಿದೆ ಕಾಂಗ್ರೆಸ್ಸು. ನೇಹಾ ಕೊಲೆಯು ಲವ್ ಜಿಹಾದ್ ಅಲ್ಲದೆ ಮತ್ತೇನೂ ಅಲ್ಲ ಮುಂತಾದ ಕಟ್ಟರ್ ಕೋಮುವಾದಿ ಭಾಷೆಯ ಮೂಲಕ ಪ್ರಧಾನಿ ಮೋದಿ ಸಮುದಾಯಗಳಲ್ಲಿ ಕೋಮು ದ್ವೇಷ ಬಿತ್ತುತ್ತಿದ್ದಾರೆ.
ಕಟ್ಟರ್ ಹಿಂದುತ್ವ, ಮುಸ್ಲಿಮರ ಮೇಲಿನ ದ್ವೇಷ, ಉಗ್ರ ರಾಷ್ಟ್ರವಾದ, ರಾಮಮಂದಿರ ಇವೆಲ್ಲದರ ಜತೆಗೆ ಕಾಂಗ್ರೆಸ್ ‘ಗ್ಯಾರಂಟಿ’ಗಳಿಗೆ ಪರ್ಯಾಯವಾಗಿ ʼಮೋದಿ ಗ್ಯಾರಂಟಿʼ ಆರಂಭಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯವೆಂದು ಹೀಯಾಳಿಸಿಕೊಂಡು ಬಂದಿದ್ದವರು ಗ್ಯಾರಂಟಿಗೆ ಶರಣಾಗಿದ್ದಾರೆ. ತಾವು ವಿರೋಧಿಸಿಕೊಂಡು ಬಂದಿದ್ದ ಕುಟುಂಬ ರಾಜಕಾರಣಕ್ಕೇ ತಮ್ಮ ಪಕ್ಷದಲ್ಲಿ ಮಣೆ ಹಾಕಿ ಸತ್ಕರಿಸಿದ್ದಾರೆ.
ಭ್ರಷ್ಟಾಚಾರದ ಬೇಟೆಯಾಡುತ್ತೇನೆ, ಕಪ್ಪುಹಣ ಮರಳಿ ತರುತ್ತೇನೆ ಎಂದು ಪಣ ತೊಟ್ಟಿದ್ದ ಮೋದಿ ಸರ್ಕಾರದಲ್ಲಿ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅದಕ್ಕೆ ಬಿಜೆಪಿಯೇ ಕಾರಣ ಎಂದು ರಾಜ್ಯದ ಶೇ.34ಕ್ಕೂ ಹೆಚ್ಚು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.
ರೈತರು, ಕೃಷಿ ಕೂಲಿಗಳು, ದೊಡ್ಡ ವ್ಯಾಪಾರಸ್ಥರು, ಪದವೀಧರರು, ಸ್ನಾತಕೋತ್ತರ ಪದವೀಧರರು, ನಿರುದ್ಯೋಗಿಗಳು, ಶಾಲೆ ಬಿಟ್ಟವರು, ಮಹಿಳೆಯರು, ಪುರುಷರು ಹಾಗೂ ಭಿನ್ನ ವಯೋಮಾನದವರೆಲ್ಲರ ಪ್ರಕಾರವೂ ಬಿಜೆಪಿಯೇ ಅತಿ ಹೆಚ್ಚು ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ.
ಕೇವಲ ಹತ್ತು ವರ್ಷಗಳ ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಜಗಜ್ಜಾಹೀರಾದ ಬಳಿಕ ಬಿಜೆಪಿಯ ಚುನಾವಣಾ ಅಜೆಂಡಾವು ‘ಹಿಂದುತ್ವ’, ಕುಟುಂಬ ರಾಜಕಾರಣ, ಕೋಮು ದ್ವೇಷ ಬಿತ್ತುವ ಭಾಷಣಗಳ ಕಡೆ ಹೆಚ್ಚಿನ ಒಲವು ತೋರಿ ದೇಶದ ಜನರಲ್ಲಿ ವಿಷ ಬೀಜಗಳನ್ನು ಬಿತ್ತುತ್ತಿದೆ. ಧರ್ಮವನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣೆ ಗೆಲ್ಲಲು ಮುಂದಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯಿಂದ ಸೃಷ್ಟಿಯಾದ ಉತ್ಸಾಹವನ್ನೂ ಕೂಡಾ ಚುನಾವಣೆಯ ಮತಗಳಿಕೆಗೆ ಬಳಸಿಕೊಳ್ಳಲು ಮುಂದಾಗಿದೆ.
ಮೋದಿ ಸರ್ಕಾರದ ಯಾವುದೇ ಪ್ರಮುಖ ಭರವಸೆಗಳು ಈಡೇರಿಲ್ಲ. ನಿರುದ್ಯೋಗ ಬೆಟ್ಟದಂತೆ ಬೆಳೆಯುತ್ತಿದೆ. ರೈತರ ಆದಾಯ ದುಪ್ಪಟ್ಟಾಗುವುದಿರಲಿ, ಕೃಷಿ ಉತ್ಪನ್ನಗಳಿಗೆ ನ್ಯಾಯವಾದ ದರ ಕೂಡ ಸಿಗುತ್ತಿಲ್ಲ. ದಿನನಿತ್ಯ ಬಳಕೆಯ ಸಾಮಗ್ರಿಗಳ ಬೆಲೆಗಳು ಮುಗಿಲು ಮುಟ್ಟಿವೆ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ದರಗಳನ್ನು ತಗ್ಗಿಸುವ ತಮ್ಮದೇ ಭರವಸೆಯನ್ನು ಮೋದಿಯವರು ಮರೆತು ವರ್ಷಗಳೇ ಆಗಿವೆ. ದೇಶದ ಸಾಲಭಾರ ಹಿಂದೆಂದೂ ಕಾಣದ ದೈತ್ಯಗಾತ್ರಕ್ಕೆ ಬೆಳೆದು ನಿಂತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಮೀಕ್ಷೆ | ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳು ನಡೆದಿವೆಯೇ?
ನಿತ್ಯಬದುಕುಗಳು ಭಾರವಾಗಿದ್ದು ಜನತೆ ಹೈರಾಣಾಗಿ ಹೋಗಿದ್ದಾರೆ. ಮತದಾರರು ಹಿಂದುತ್ವದ ಅಮಲಿನಿಂದ ಮೈ ಕೊಡವಿ ಮೇಲೇಳುವರೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಜೆಂಡಾ ಬುಡಮೇಲಾಗುವುದೇ ಕಾದು ನೋಡಬೇಕಿದೆ.