‘ಬಿಜೆಪಿ ವೇಷ ಮರೆಸಿ ಮಾತನಾಡುತ್ತದೆ’ ಎಂದು ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ ಹೇಳಿಲ್ಲ. ಹಿಂದಿನ ಘಟನೆಗಳನ್ನು ಉದ್ದೇಶಿಸಿ ನಾನು ಹೇಳಿಕೆ ನೀಡಿದ್ದೇನೆ. ಶಿವಮೊಗ್ಗ ಘಟನೆಗೂ ನನ್ನ ಹೇಳಿಕೆಗೂ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಬಿಜೆಪಿ ಯಾವ ರೀತಿ ವರ್ತಿಸುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದೇನೆ. ಶಿವಮೊಗ್ಗ ಘಟನೆ ಆಧಾರಿಸಿ ಆ ಹೇಳಿಕೆ ನೀಡಿಲ್ಲ” ಎಂದು ಹೇಳಿದ್ದಾರೆ.
“ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಯಾರೇ ತಪ್ಪು ಮಾಡಿದ್ದರೂ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಪುಲಿಕೇಶಿನಗರ ಗಲಾಟೆಯಲ್ಲೂ ನಾನು ಅದನ್ನೇ ಹೇಳಿದ್ದೆ” ಎಂದು ಹೇಳಿದ್ದಾರೆ.
ಸಂಕ್ರಾಂತಿ ವೇಳೆಗೆ ರಾಜಕೀಯ ಪಥ ಬದಲಾಗುತ್ತದೆ ಎಂದಿರುವ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಯೋಗೇಶ್ವರ್ ಅವರು ಬಹಳ ಪಕ್ಷ ಬದಲಾಯಿಸಿ ಬಿಟ್ಟಿದ್ದಾರೆ. ಅದಕ್ಕೇ ಅವರ ಹೇಳಿಕೆಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರ ಐದು ವರ್ಷಗಳ ಅಧಿಕಾರವನ್ನು ಪೂರೈಸುತ್ತದೆ. ಅವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಸಲಹೆ ಸೂಚನೆಗಳನ್ನು ಕೊಡಲಿ” ಎಂದಿದ್ದಾರೆ.