ಬಿಜೆಪಿ ಟಿಕೆಟ್ ಕೊಡಿಸುವ ಹೆಸರಿನಲ್ಲಿ ಸಾಕಷ್ಟು ವಂಚನೆಗಳು ನಡೆದಿವೆ ಎಂಬುದನ್ನು ಇತ್ತೀಚಿನ ಬೆಳವಣಿಗೆಗಳು ಸೂಚಿಸುತ್ತಿವೆ. ಇತ್ತೀಚೆಗೆ, ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ ಆರೋಪದ ಮೇಲೆ ಹಿಂದುತ್ವವಾದಿ ಮುಖಂಡೆ, ಕುಂದಾಪುರದ ಚೈತ್ರ ಜೈಲು ಸೇರಿದ್ದಾರೆ. ಇದೀಗ, ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೆಸರು ಹೇಳಿಕೊಂಡು ತಮಗೆ 2.5 ಕೋಟಿ ರೂ. ವಂಚಿಸಲಾಗಿದೆ ಎಂದು ನಿವೃತ್ತ ಎಂಜಿನಿಯರ್ ಒಬ್ಬರು ಆರೋಪಿಸಿದ್ದಾರೆ.
ಹಗರಿ ಬೊಮ್ಮನಹಳ್ಳಿ ಮೂಲದ ನಿವೃತ್ತ ಎಂಜಿನಿಯರ್, ಬಿಜೆಪಿ ಮುಖಂಡ ಶಿವಮೂರ್ತಿ ಎಂಬವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ವಿಜಯನಗರದ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ತಮಗೆ ವಿಜಯಪುರದ ಬಿಜೆಪಿ ಮುಖಂಡರ ರೇವಣ್ಣ ಸಿದ್ದಪ್ಪ ಮತ್ತು ಪುತ್ತೂರಿನ ಎನ್.ಪಿ ಶೇಖರ್ ಎಂಬವರು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಕಟೀಲ್ ಕೂಡ ತಮಗೆ ಕರೆ ಮಾಡಿ, ಟಿಕೆಟ್ ವಿಚಾರವಾಗಿ ಶೇಖರ್ ಕೊತೆ ಮಾತನಾಡಿ ಎಂದು ಹೇಳಿದ್ದರು ಎಂದೂ ಆರೋಪ ಮಾಡಿದ್ದಾರೆ.
“ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ನನಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ರೇವಣ್ಣ ಸಿದ್ದಪ್ಪ ಹಾಗೂ ಶೇಖರ್ ಹೇಳಿದ್ದರು. 2022ರ ಅಕ್ಟೋಬರ್ 23ರಂದಯ ರೇವಣ್ಣ ಸಿದ್ದಪ್ಪ ನನ್ನನ್ನು ಬೆಂಗಳೂರಿಗೆ ಕರೆದೊಯ್ದಿದ್ದರು. ಅಲ್ಲಿ, ರೇವಣ್ಣ ಸಿದ್ದಪ್ಪ ಮತ್ತು ಶೇಖರ್ ನನ್ನೊಂದಿಗೆ ಮಾತನಾಡಿದ್ದರು. ಬಳಿಕ, ಶೇಖರ್ ಅವರು ನಳಿನ್ ಕುಮಾರ್ ಕಟೀಲ್ ಅವರ ಬೆಂಗಳೂರಿನ ಕಚೇರಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದರು. ಆ ನಂತರ, ಟಿಕೆಟ್ ವಿಚಾರವಾಗಿ ಎಲ್ಲ ವ್ಯವಹಾರವನ್ನು ಶೇಖರ್ ಜೊತೆ ಮಾತನಾಡಿಯೆಂದು ಕಟೀಲ್ ನನಗೆ ತಿಳಿಸಿದ್ದರು” ಎಂದು ಶಿವಮೂರ್ತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಟಿಕೆಟ್ ಕೊಡಿಸಲು ಹಣ ಕೊಡಬೇಕೆಂದು ಶೇಖರ್ ಕೇಳಿದ್ದರು. ಟಿಕೆಟ್ ಸಿಗದಿದ್ದಲ್ಲಿ ಹಣ ವಾಪಸ್ ಕೊಡುತ್ತೇವೆಂದು ತಿಳಿಸಿದ್ದರು. 2022 ಅಕ್ಟೋಬರ್ 09ರಿಂದ 2023ರ ಏಪ್ರಿಲ್‌ವರೆಗೆ ನನ್ನಿಂದ 2.55 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ. ನನಗೆ ಟಿಕೆಟ್ ನೀಡಲಿಲ್ಲ. ಹಣವನ್ನೂ ಹಿಂದಿರುಗಿಸಿಲ್ಲ” ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಕೊಟ್ಟೂರು ಪೊಲೀಸ್ ಠಾಣೆಯ ಅಧಿಕಾರಿ, “ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.