‘ಸಬ್ಕಾ ಸಾಥ್ – ಸಬ್ಕಾ ವಿಕಾಸ್’ (ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ) ಬಿಜೆಪಿಯ ಘೋಷವಾಕ್ಯವಾಗಿದೆ. ಆದರೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ಗೆ ಬಿಜೆಪಿಯೇ ವಿರುದ್ಧವಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ. ಇದು ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಅಸಮಾಧಾನದಿಂದ ಬಂದಿದ್ದಾದರೂ, ಬಿಜೆಪಿ ವಿರುದ್ಧ ಬಿಜೆಪಿ ಸಿಡಿದೆದ್ದಿರುವುದು ಕುತೂಹಲ ಕೆರಳಿಸಿದೆ.
ಇತ್ತೀಚೆಗೆ, ಮಾತನಾಡಿದ್ದ ಸುವೇಂದು ಅಧಿಕಾರಿ, ”ಬಿಜೆಪಿ ಈಗ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಅನ್ನು ನಿಲ್ಲಿಸಬೇಕು. ಪಕ್ಷವು ‘ಜೋ ಹುಮಾರೆ ಸಾಥ್, ಹಮ್ ಉಂಕೆ ಸಾಥ್’ (ಯಾರು ನಮ್ಮೊಂದಿಗಿದ್ದಾರೋ, ನಾವು ಅವರೊಂದಿಗಿದ್ದೇವೆ) ಎಂದು ಹೇಳುವ ಸಮಯ ಬಂದಿದೆ. ಪಕ್ಷಕ್ಕೆ ಈಗ ಅಲ್ಪಸಂಖ್ಯಾತ ಮೋರ್ಚಾದ ಅಗತ್ಯವಿಲ್ಲ” ಎಂದು ಹೇಳಿದ್ದರು. ಅವರ ಹೇಳಿಕೆಗೆ ಸಿದ್ದಿಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸುವೇಂದು ಅಧಿಕಾರಿ ಬಿಜೆಪಿಗೆ ಹೊಸಬರು, ಕೆಲವು ವರ್ಷಗಳ ಹಿಂದೆಯಷ್ಟೇ ಪಕ್ಷಕ್ಕೆ ಸೇರಿದ್ದಾರೆ. ಅವರು ಇನ್ನೂ ತಮ್ಮ ಹಿಂದಿನ ಪಕ್ಷ ಟಿಎಂಸಿಯ ರಾಜಕೀಯ ಗ್ರಹಿಕೆಗಳಿಂದ ಹೊರಬಂದಿಲ್ಲ. ಅಲ್ಲಿ (ಟಿಎಂಸಿ) ಅಧಿಕಾರವನ್ನು ಗಳಿಸುವುದರ ಮೇಲೆ ಮಾತ್ರ ಗಮನ ಹರಿಸಲಾಗಿದೆ. ಭಾರತೀಯ ಜನತಾ ಪಕ್ಷವು ವಿಭಿನ್ನವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸುವೇಂದು ಅಧಿಕಾರಿ ಅರ್ಥ ಮಾಡಿಕೊಳ್ಳುವುದು ಉತ್ತಮ” ಎಂದು ಕಿಡಿಕಾರಿದ್ದಾರೆ.
“ಸುವೇಂದು ಅಧಿಕಾರಿಯವರ ಹೇಳಿಕೆಯು ಭಾವನಾತ್ಮಕ ದ್ವೇಷ ಮತ್ತು ನಿರಾಶೆಯಿಂದ ಕೂಡಿದೆ. ಆದರೆ, ಬಿಜೆಪಿ ಅಂತಹ ಭಾವನಾತ್ಮಕ ಪ್ರಚೋದನೆಗಳ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದರ ಮೇಲೆ ಕೆಲಸ ಮಾಡುತ್ತದೆ” ಎಂದು ಸಿದ್ದಿಕಿ ಪ್ರತಿಪಾದಿಸಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಕನಸುಗಳನ್ನು ನನಸು ಮಾಡಲು ಪಕ್ಷವನ್ನು ರಚಿಸಲಾಗಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಬಿಜೆಪಿಯ ಆತ್ಮ. ಆತ್ಮವಿಲ್ಲದ ದೇಹ ನಿಷ್ಟ್ರಯೋಜಕ. ಕೇವಲ ಅಧಿಕಾರವನ್ನು ಗಳಿಸುವುದಷ್ಟೇ ಬಿಜೆಪಿಯ ಗುರಿಯಲ್ಲ. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಕನಸುಗಳನ್ನು ನನಸಾಗಿಸುವುದು ಮತ್ತು ಅವರ ‘ಅಂತ್ಯೋದಯ’ದ ಕನಸನ್ನು ಜಾರಿಗೊಳಿಸುವುದು ಬಿಜೆಪಿಯ ಉದ್ದೇಶವಾಗಿದೆ” ಎಂದು ಸಿದ್ದಿಕಿ ಹೇಳಿದ್ದಾರೆ.
”ಕಳೆದ 10 ವರ್ಷಗಳಲ್ಲಿ ಕೇಂದ್ರದ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ಮುಸ್ಲಿಮರು. ಅಧಿಕಾರವು ಬಿಜೆಪಿಗೆ ಸೇವೆಯ ಸಾಧನವಾಗಿದೆ, ನಾವು ಮತ ಬ್ಯಾಂಕ್ ರಾಜಕೀಯದಲ್ಲಿ ತೊಡಗಬಾರದೆಂದು ನಮಗೆ ಕಲಿಸಲಾಗಿದೆ. ನಾವು ಚುನಾವಣೆಯಲ್ಲಿ ಮತಗಳನ್ನು ಗೆಲ್ಲಬೇಕು. ಏಕೆಂದರೆ, ಮತಗಳ ಮೂಲಕ ನಾವು ಅಧಿಕಾರಕ್ಕೆ ಬರುತ್ತೇವೆ. ಆದರೆ, ನಮಗೆ ಮತ ನೀಡದ ಮತ್ತು ನಮ್ಮನ್ನು ಶತ್ರುಗಳೆಂದು ಪರಿಗಣಿಸುವವರಿಗೆ ನಾವು ಉತ್ತಮ ಸೇವೆ ಸಲ್ಲಿಸಬೇಕು, ಎಲ್ಲರನ್ನೂ ಆಲಂಗಿಸಬೇಕು, ಎಲ್ಲರಿಗೂ ಸೇವೆ ಸಲ್ಲಿಸಬೇಕು, ಎಲ್ಲರಿಗೂ ನ್ಯಾಯ ನೀಡಬೇಕು ಎಂದೇ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಘೋಷಣೆಯನ್ನು ಅಳವಡಿಸಿಕೊಳ್ಳಲಾಗಿದೆ” ಎಂದು ಅವರು ವಾದಿಸಿದ್ದಾರೆ.
ಈ ವರದಿ ಓದಿದ್ದೀರಾ?: ಆತ್ಮವಿಶ್ವಾಸ v/s ಸಂಘಟನೆ | ಯುಪಿ ಬಿಜೆಪಿ ಆಂತರಿಕ ಬೇಗುದಿಗೆ ಯೋಗಿ ತಲೆದಂಡವಾಗಲಿದೆಯೇ?
ಸುವೇಂದು ಅಧಿಕಾರಿ ಹೇಳಿಕೆ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಮಾತಿಗೆ ಉಲ್ಟಾ ಹೊಡೆದಿರುವ ಸುವೇಂದು ಅಧಿಕಾರಿ, ”’ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಪ್ರಧಾನಿ ಮೋದಿಯವರ ಘೋಷಣೆಯಾಗಿದೆ. ಮತ್ತು ಅದು ನನ್ನ ಮಾತಿನಿಂದ ಬದಲಾಗುವುದಿಲ್ಲ. ಬಿಜೆಪಿಯ ರಾಜ್ಯ ಘಟಕವು ಪಕ್ಷದ ಕಾರ್ಯಕರ್ತರೊಂದಿಗೆ ನಿಲ್ಲಬೇಕು ಮತ್ತು ಬಿಜೆಪಿಯೊಂದಿಗೆ ನಿಲ್ಲದವರ ಜೊತೆ ಅಲ್ಲ ಎಂದು ನಾನು ಪಕ್ಷದ ಕಾರ್ಯಾಧ್ಯಕ್ಷನಾಗಿ ತೀವ್ರ ನೋವಿನಿಂದ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಇದು ರಾಜಕೀಯ ಹೇಳಿಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್ – ಸಬ್ಕಾ ವಿಕಾಸ್’ ಘೋಷಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ. ತಮ್ಮ ಹೇಳಿಕೆಯನ್ನು ತಾವೇ ತಿರುಚುವ ಪ್ರಯತ್ನ ಮಾಡಿದ್ದಾರೆ.
ಅಂದಹಾಗೆ, ‘ಸಬ್ಕಾ ಸಾಥ್ – ಸಬ್ಕಾ ವಿಕಾಸ್’ ಬಿಜೆಪಿ ಘೋಷವಾಕ್ಯವಾಗಿದ್ದರೂ, ಬಿಜೆಪಿಯ ನೀತಿ, ನಿರೂಪಣೆ, ಸಿದ್ದಾಂತಗಳೆಲ್ಲವೂ ಅದಕ್ಕೆ ವಿರುದ್ಧವಾಗಿಯೇ ಇದೆ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಮತ ಕ್ರೋಡೀಕರಣದಲ್ಲಿಯೇ ತೊಡಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿಗರು ಮುಸ್ಲಿಂ ಸಮುದಾಯದ ವಿರುದ್ಧ ತೀವ್ರವಾಗಿ ಕೆಳಮಟ್ಟದ ಹೇಳಿಕೆಗಳನ್ನು ಬಳಸುವ ಮೂಲಕ ದ್ವೇಷ ಭಾಷಣ ಮಾಡಿದ್ದಾರೆ. ಅವರ ಭಾಷಣಗಳು ಕೋಮು ದ್ವೇಷವನ್ನು ಹೆಚ್ಚಿಸುವ, ಪ್ರಚೋದಿಸುವುದನ್ನೇ ಮಾಡಿತ್ತು. ಇಂತಹ ಸಮಯದಲ್ಲಿ ಸಿದ್ದಿಕಿ ಅವರ ಹೇಳಿಕೆಗಳೂ ಆಶ್ಚರ್ಯ ಉಂಟುಮಾಡುತ್ತವೆ. ಬಿಜೆಪಿಯಲ್ಲಿರುವ ಕಾರಣಕ್ಕೆ, ಬಿಜೆಪಿಯ ಒಂದು ಘಟಕದ ಮುಖ್ಯಸ್ಥರಾಗಿರುವ ಕಾರಣಕ್ಕೆ ಅವರು ಬಿಜೆಪಿಯನ್ನು ಅಗತ್ಯ ಮೀರಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನಿಸುತ್ತದೆ.
ಅದಷ್ಟೇ ಅಲ್ಲ, ಬಿಜೆಪಿ ‘ಸಬ್ಕಾ ಸಾಥ್ – ಸಬ್ಕಾ ವಿಕಾಸ್’ ಕೇವಲ ‘ಅಂಬಾನಿ-ಅದಾನಿಕಾ ಸಾಥ್ – ಅಂಬಾನಿ-ಅದಾನಿಕಾ ವಿಕಾಸ್’ ಆಗಿದೆ ಎಂದು ಬಿಜೆಪಿಯ ವಿರೋಧಿಗಳು ಹೇಳುತ್ತಲೇ ಇದ್ದಾರೆ. ಬಿಜೆಪಿ ಕೂಡ ಕಾರ್ಪೋರೇಟ್ ಪರವಾದ ನೀತಿಗಳನ್ನೇ ರೂಪಿಸಿದೆ. ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನೇ ಜಾರಿ ಮಾಡಿ, ಅಂಬಾನಿ-ಅದಾನಿಯರನ್ನು ಪೋಷಿಸಿದೆ. ಸಿಎಎಯಲ್ಲಿ ಮುಸ್ಲಿಮರನ್ನು ಹೊರಗಿಟ್ಟು, ತನ್ನ ಮುಸ್ಲಿಂ ವಿರೋಧಿ ಸಿದ್ದಾಂತವನ್ನು ಸ್ಪಷ್ಟವಾಗಿ ದೇಶದ ಮೇಲೆ ಹೇರಿದೆ. ಇದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ.