ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬಣ, ಸಂತೋಷ್ ಬಣ, ಬಂಡಾಯ ಬಣ, ತಟಸ್ಥ ಬಣ- ಬಣಗಳ ಬಡಿದಾಟ ಜೋರಾಗಿದೆ. ಇದರಿಂದ ಹೈರಾಣಾಗಿರುವ ಬಿಜೆಪಿ ವರಿಷ್ಠರು ಹಿರಿಯರಾದ ಯಡಿಯೂರಪ್ಪನವರಿಗೆ ತಾತ್ಕಾಲಿಕ ಉಸ್ತುವಾರಿ ಹೊಣೆ ಹೊರಿಸಿದ್ದಾರೆ. ಅದೀಗ ಸಾಮೂಹಿ ನಾಯಕತ್ವದ ಮಂತ್ರ ಜಪಿಸುತ್ತಿದೆ...
ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ಆಂತರಿಕ ರಾಜಕಾರಣದ ಗುಟ್ಟುಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತಿವೆ. ಸದ್ಯ ಸಾಮೂಹಿಕ ನಾಯಕತ್ವದ ಜಪ ಹೌದು ಎಂದರೂ, ನಿಜಕ್ಕೂ ಯಾರ ಕೈಗೆ ನಾಯಕತ್ವ ನೀಡಿದರೆ ಉತ್ತಮ ಎಂಬ ಪ್ರಶ್ನೆಗೆ ಹೈಕಮಾಂಡ್ ನಾಯಕರಲ್ಲಿ ಸ್ಪಷ್ಟ ಉತ್ತರವಿಲ್ಲ. ಹಲವು ವರ್ಷಗಳಿಂದ ಬಿ.ಎಸ್ ಯಡಿಯೂರಪ್ಪನವರನ್ನು ಪ್ರಮುಖವಾಗಿ ನಂಬಿಕೊಂಡು ಬಂದಿದ್ದ ಕೇಂದ್ರ ಹಾಗೂ ರಾಜ್ಯದ ನಾಯಕರು ಒಳ ಜಗಳಗಳು ಹೆಚ್ಚಾದ ಕಾರಣ, ತಾತ್ಕಾಲಿಕ ಶಮನಕ್ಕಾಗಿ ಮತ್ತೆ ಯಡಿಯೂರಪ್ಪನವರನ್ನೇ ಆಶ್ರಯಿಸಿರುವಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಯಡಿಯೂರಪ್ಪನವರನ್ನು ಭೇಟಿಯಾಗಿರುವುದು. ಈ ಭೇಟಿಯ ಹಿಂದೆ ಕೇವಲ ಶಿಷ್ಟಾಚಾರದ ನೆಪವಿರಲಿಲ್ಲ, ಅದರ ಹಿಂದೆ ಪಕ್ಷದಲ್ಲಿ ನಡೆಯುತ್ತಿರುವ ಹಲವು ಭಿನ್ನ ಚಟುವಟಿಕೆಗಳು ಕಾರಣವಾಗಿದ್ದವು.
ಯಡಿಯೂರಪ್ಪ ಅವರು 75 ದಾಟಿದ ನಂತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು, ಜೊತೆಗೆ ಕುಟುಂಬ ರಾಜಕಾರಣ ಹಾಗೂ ಪೋಕ್ಸೋದಂತಹ ಆರೋಪಗಳು ಅವರನ್ನು ರಾಜಕಾರಣದಿಂದ ದೂರ ಉಳಿಯುವಂತೆ ಮಾಡಿದ್ದರೂ, ತಳಮಟ್ಟದಲ್ಲಿ ಅವರು ಹೊಂದಿರುವ ರಾಜಕೀಯ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ, ಅಮಿತ್ ಶಾ – ಯಡಿಯೂರಪ್ಪನವರ ಭೇಟಿ ಪರೋಕ್ಷವಾಗಿ ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿದೆ ಎಂಬ ಸಂದೇಶವನ್ನು ನೀಡಿದೆ. ಇತ್ತ ಯಡಿಯೂರಪ್ಪನವರ ರಾಜಕೀಯ ವಾಪಸಾತಿ ಪಕ್ಷದೊಳಗಿನ ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಬಿಎಸ್‌ವೈ ಅವರನ್ನು ಮುಖ್ಯವಾಹಿನಿಯಲ್ಲಿ ನೋಡಲು ಕೆಲ ಬ್ರಾಹ್ಮಣ ಸಮುದಾಯದ ನಾಯಕರಿಗೆ ಇಷ್ಟವಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಆರ್‌ಎಸ್‌ಎಸ್‌ನ ಬಿ.ಎಲ್ ಸಂತೋಷ್, ಇನ್ನಿತರ ಬಿಜೆಪಿ ನಾಯಕರಾದ ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಎಸ್‌ವೈ ಅವರು ಮರಳಿ ರಾಜ್ಯ ರಾಜಕಾರಣಕ್ಕೆ ಬರುವುದು ಅಥವಾ ಪಕ್ಷದ ಉಸ್ತುವಾರಿಯನ್ನು ಅವರ ಕೈಗೆ ಒಪ್ಪಿಸುವುದು ಇಷ್ಟವಿಲ್ಲ. ಅದನ್ನು ಅವರು ಖಂಡಿಸುತ್ತಿಲ್ಲ, ವಿರೋಧಿಸುತ್ತಿಲ್ಲ. ಬದಲಿಗೆ ಸಾಮೂಹಿಕ ನಾಯಕತ್ವದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ, ಹೊಸ ನಾಯಕನನ್ನು ಆಯ್ಕೆ ಮಾಡಲು ಬಂಡಾಯ ಗುಂಪು ಹಲವು ತಿಂಗಳುಗಳಿಂದ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಸದಾ ಯಡಿಯೂರಪ್ಪ ಹಾಗೂ ಅವರ ಕುಟುಂಬ ರಾಜಕಾರಣದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತ ಬಿಜೆಪಿಯಿಂದ ಉಚ್ಚಾಟನೆಗೊಂಡ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಪರವಾದ ಗುಂಪು, ಯತ್ನಾಳ್ ಉಚ್ಚಾಟಿತರಾದ ನಂತರ ತಮ್ಮ ರಾಜಕೀಯ ಭವಿಷ್ಯವನ್ನು ಪುನಶ್ಚೇತನಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ ಸಿದ್ದೇಶ್ವರ್, ಹರೀಶ್, ಅರವಿಂದ ಲಿಂಬಾವಳಿ ಮುಂತಾದವರು ತಮ್ಮ ಅನುಕೂಲಕರ ನಾಯಕರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರಲು ಒತ್ತಾಯಿಸುತ್ತಿದ್ದಾರೆ. ಇವರ ತಂತ್ರದ ಹಿಂದೆ ಭಿನ್ನ ಜಾತಿಯ ಸಮೀಕ್ಷೆ, ಕ್ಷೇತ್ರ ಮಟ್ಟದ ಪ್ರಭಾವದ ಲೆಕ್ಕಾಚಾರಗಳಿವೆ.
ಇದೇ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಮಾಜಿ ಸಚಿವ ಸಿ.ಟಿ ರವಿ ಮುಂತಾದವರ ಗುಂಪು ರಾಜಕೀಯವಾಗಿ ತೀವ್ರ ಚಟುವಟಿಕೆಯಲ್ಲಿ ತೊಡಗಿಲ್ಲದಿದ್ದರೂ, ಈ ಬೆಳವಣಿಗೆಗಳ ನಡುವೆ ತಾವೂ ಇದ್ದೇವೆ ಎಂಬುದನ್ನು ಮರೆತಿಲ್ಲ. ಇವರು ಯಾವ ಬಣದ ಜೊತೆಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳದಿದ್ದರೂ, ಆಯ್ಕೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ನಾಯಕರ ನಿಲುವುಗಳನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಆರ್ ಅಶೋಕ್ ದೆಹಲಿಗೆ ಭೇಟಿ ನೀಡಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿರುವುದು ಒಂದಿಷ್ಟು ಕುತೂಹಲ ಕೆರಳಿಸಿದೆ. ಇವೆಲ್ಲ ಬೆಳವಣಿಗೆಗಳ ಮಧ್ಯೆ ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ಹುದ್ದೆಗೆ ಯಾರ ಹೆಸರನ್ನು ಪ್ರಕಟಿಸಬೇಕು, ಯಾರನ್ನು ನೇಮಕ ಮಾಡಿದರೆ ರಾಜಕೀಯವಾಗಿ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ಬಿಜೆಪಿ ವರಿಷ್ಠರು ಲೆಕ್ಕ ಹಾಕುತ್ತಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಈ ನಡುವೆ ಅಧ್ಯಕ್ಷ ಹುದ್ದೆಗೆ ಉಡುಪಿ ಜಿಲ್ಲೆಯ ಪ್ರಖರ ಹಿಂದೂತ್ವವಾದಿ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಸರು ಮುನ್ನಲೆಗೆ ಬರುತ್ತಿದೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸಲು ನಾನು ಸಿದ್ದ ಎಂದು ಸುನಿಲ್ ಕುಮಾರ್ ಕೂಡ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷರ ಹುದ್ದೆಗೆ ಹೆಸರು ಅಂತಿಮಗೊಳ್ಳಬಹುದು ಎನ್ನುವ ಸುದ್ದಿಯ ನಡುವೆ, ಸುನಿಲ್ ಕುಮಾರ್ ಹೆಸರು ಚಲಾವಣೆಗೆ ಬಂದಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ ಸುನಿಲ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಎಷ್ಟು ಪ್ರಯೋಜನವಾಗುತ್ತದೆ ಎಂಬುದನ್ನು ರಾಷ್ಟ್ರೀಯ ನಾಯಕರು ತಾಳೆ ಹಾಕುತ್ತಿದ್ದಾರೆ. ಸುನಿಲ್ ಕುಮಾರ್ ಅವರಿಗೆ ಆರ್‌ಎಸ್‌ಎಸ್‌ನ ನಾಯಕರ ಬೆಂಬಲವಿದೆ. ಇವರು, ಯಾವ ಗುಂಪಿನಲ್ಲೂ ತಮ್ಮನ್ನು ಗುರುತಿಸಿಕೊಳ್ಳದೇ ಎಲ್ಲರ ಜೊತೆ ಒಂದಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಸುನಿಲ್ ಅವರ ಕಟ್ಟ ಹಿಂದೂತ್ವವಾದಿ ಭಾಷಣಗಳು ರಾಷ್ಟ್ರೀಯ ನಾಯಕರಿಗೆ ಹಿಡಿಸಬಹುದು. ಬಣ ರಾಜಕೀಯದಿಂದ ಬೇಸರಗೊಂಡಿದ್ದ ಸುನಿಲ್ ಕುಮಾರ್, ವೈಯಕ್ತಿಕ ಕಾರಣದಿಂದ ಪಕ್ಷ ಚಟುವಟಿಕೆಯಿಂದ ದೂರವಿರುವ ನಿರ್ಧಾರಕ್ಕೆ ಬರುವ ಮಾತನ್ನು ಆಡಿದ್ದರು. ಆದರೆ, ತಮ್ಮನ್ನು ಹೆಚ್ಚಾಗಿ ಬೆಂಬಲಿಸಿಕೊಂಡು ಬರುತ್ತಿರುವ ಲಿಂಗಾಯತ ಸಮುದಾಯದ ನಾಯಕರ ಹೊರತಾಗಿ, ಬಿಜೆಪಿ ಬೇರೆ ಸಮುದಾಯಕ್ಕೆ ಮಣೆ ಹಾಕುತ್ತದಾ ಎನ್ನುವುದು ಪ್ರಶ್ನೆಯಾಗಿದೆ.
ಬಿ ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ತಪ್ಪಿಸಲು, ಬಿಜೆಪಿಯ ಭಿನ್ನಬಣದ ನಾಯಕರು ಕೊನೆ ಕ್ಷಣದಲ್ಲಿ ತಮಗೆ ಎಷ್ಟು ಬೇಕೋ ಅಷ್ಟು ಕೆಲಸವನ್ನು ಜೋರಾಗಿ ಮಾಡುತ್ತಿದ್ದಾರೆ. ವಿಜಯೇಂದ್ರ ಹೊರತಾಗಿ ಯಾರಿಗೆ ಅಧ್ಯಕ್ಷ ಹುದ್ದೆ ಕೊಟ್ಟರೂ, ನಮ್ಮದೇನೂ ತಕರಾರು ಇಲ್ಲ ಎಂದು ಬಂಡಾಯ ಬಣದ ನಾಯಕರು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ, ಅಮಿತ್ ಶಾ, ಬೆಂಗಳೂರಿನಲ್ಲಿ ಇದ್ದಂತಹ ಸಂದರ್ಭದಲ್ಲೇ, ಕೇಂದ್ರ ಸಚಿವ ವಿ ಸೋಮಣ್ಣ ಅವರು ಬಂಡಾಯ ಗುಂಪಿನ ನಾಯಕರನ್ನು ಭೇಟಿಯಾಗಿದ್ದು, ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ. ಆನಂತರ ತಾನು ವೈಯಕ್ತಿಕ ಕಾರಣದಿಂದ ಭೇಟಿ ನೀಡಿರುವುದಾಗಿ ಹೇಳಿಕೆ ನೀಡಿದ್ದರು.
ಲಿಂಗಾಯತ ಸಮುದಾಯವು ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದೆ. ಇಂತಹ ಸಮಯದಲ್ಲಿ ವಿಜಯೇಂದ್ರ ಅಲ್ಲದೇ, ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ಕೊಡುವ ತೊಂದರೆಯನ್ನು ತೆಗೆದುಕೊಳ್ಳುತ್ತಾ? ಯಡಿಯೂರಪ್ಪನವರಷ್ಟು ವರ್ಚಸ್ಸು ವಿಜಯೇಂದ್ರಗೆ ಇಲ್ಲ, ಪಕ್ಷದ ಹಿರಿಯ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ಅಲ್ಲದೆ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ, ಕಾರ್ಯಕರ್ತನಾಗಿ ದುಡಿದ ಅನುಭವವೂ ಕಡಿಮೆ ಎನ್ನುವುದು ಇತರ ಬಣದ ಹಲವು ನಾಯಕರ ವಾದ. ಜೊತೆಗೆ, ವಿಜಯೇಂದ್ರ ಅವರಿಗೆ ಅಧ್ಯಕ್ಷ ಹುದ್ದೆಯನ್ನು ಕೊಟ್ಟರೆ, ಆಂತರಿಕ ಬಿಕ್ಕಟ್ಟು ಕಡಿಮೆ ಎನ್ನುವುದಕ್ಕೆ ಏನು ಗ್ಯಾರಂಟಿ ಎನ್ನುವುದೂ ಪ್ರಶ್ನೆಯಾಗಿದೆ.
ಏತನ್ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರ ಹೆಸರೂ ಕೂಡ ಕೇಳಿ ಬರುತ್ತಿದೆ. ಪಕ್ಷವು ಉತ್ತರ ಕರ್ನಾಟಕದ ನಾಯಕ ಮತ್ತು ಅನುಭವ ಹೊಂದಿರುವ ಲಿಂಗಾಯತ ವ್ಯಕ್ತಿಯನ್ನು ಬಯಸಿದರೆ, ಬೊಮ್ಮಾಯಿ ಅವರನ್ನು ನೇಮಿಸಬಹುದು ಎನ್ನಲಾಗಿದೆ. ಇದಲ್ಲದೆ, ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್ ಮತ್ತು ಮುರುಗೇಶ್ ನಿರಾಣಿ ಹೆಸರುಗಳು ಚಾಲ್ತಿಗೆ ಬಂದಿವೆ. ಆದರೆ ಈ ಹೆಸರುಗಳನ್ನು ವರಿಷ್ಠರು ಎಷ್ಟರಪಟ್ಟಿಗೆ ಪರಿಗಣಿಸುತ್ತಾರೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಇವೆಲ್ಲವುಗಳ ನಡುವೆಯೇ ಒಕ್ಕಲಿಗ ನಾಯಕ ಆರ್. ಅಶೋಕ್ ಕೂಡ, ದೆಹಲಿಗೆ ಹಾರಿ ವರಿಷ್ಠರನ್ನು ಕಂಡು ಬಂದಿದ್ದಾರೆ. ಇವರೂ ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರಬಹುದಾ ಎಂದು ರಾಜ್ಯ ಬಿಜೆಪಿಯಲ್ಲಿ ಗುಸುಗುಸು ಚರ್ಚೆಗೆ ಈಡುಮಾಡಿದೆ. ಸದ್ಯ 14 ರಾಜ್ಯಗಳ ಅಧ್ಯಕ್ಷರ ಆಯ್ಕೆಯಾಗಿದೆ. ಇನ್ನೂ ಆರೇಳು ರಾಜ್ಯಗಳ ಅಧ್ಯಕ್ಷರ ಹೆಸರು ಘೋಷಣೆಯಾಗಬೇಕಿದೆ.
ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬಣ, ಸಂತೋಷ್ ಬಣ, ಬಂಡಾಯ ಬಣ, ತಟಸ್ಥ ಬಣ- ಬಣಗಳ ಬಡಿದಾಟ ಜೋರಾಗಿದೆ. ಇದರಿಂದ ಹೈರಾಣಾಗಿರುವ ಬಿಜೆಪಿ ವರಿಷ್ಠರು ಹಿರಿಯರಾದ ಯಡಿಯೂರಪ್ಪನವರಿಗೆ ತಾತ್ಕಾಲಿಕ ಉಸ್ತುವಾರಿ ಹೊಣೆ ಹೊರಿಸಿದ್ದಾರೆ. ಅದೀಗ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸುತ್ತಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಸಹವಾಸವೇ ಬೇಡವೆಂದು ದೂರವಿರುವ ದೆಹಲಿ ವರಿಷ್ಠರು, ಏನಾದರೊಂದು ತೀರ್ಮಾನಕ್ಕೆ ಬರಲೇಬೇಕಿದೆ. ಬರುವ ನಿಟ್ಟಿನಲ್ಲಿ ಮತ್ತೆ ಕುಟುಂಬ ರಾಜಕೀಯಕ್ಕೆ ಮಣೆ ಹಾಕುತ್ತಾರೊ ಅಥವಾ ಹೊಸ ಮುಖವನ್ನು ಪರಿಗಣಿಸುತ್ತಾರೊ ಎಂಬುದು ಕುತೂಹಲಕರವಾಗಿದೆ. ಯಾರೆ ಅಧ್ಯಕ್ಷರಾದರೂ ಧರ್ಮ, ಕೋಮು ರಾಜಕಾರಣವನ್ನು ಬಿಟ್ಟು ಎಲ್ಲ ಸಮುದಾಯದವರ ಸಮಸ್ಯೆಗಳಿಗೆ ಸ್ಪಂದಿಸುವ, ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ನಾಯಕರ ಅಗತ್ಯವಿದೆ. ಆದರೆ ರಾಜ್ಯ ಬಿಜೆಪಿಯ ಬಣ ಬಡಿದಾಟ ಯಾವ ಹಂತ ಮುಟ್ಟುತ್ತದೆಂದು ಯಾರಿಗೆ ಗೊತ್ತು?