ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇಬಾಶಿಸ್ ಧಾರ್ ಅವರ ನಾಮಪತ್ರವು ತಾಂತ್ರಿಕ ಕಾರಣಗಳಿಗಾಗಿ ಶುಕ್ರವಾರ ರದ್ದಾಗಿದೆ.
ಇದರ ಬೆನ್ನಲ್ಲೇ ಗುರುವಾರ ಮಧ್ಯಾಹ್ನದ ವೇಳೆಗೆ ಪಕ್ಷದ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಿಲ್ಲೆಯ ಬಿಜೆಪಿ ಹಿರಿಯ ದೇಬ್ತಾನು ಭಟ್ಟಾಚಾರ್ಯ ಈಗ ಪ್ರಮುಖ ಸ್ಪರ್ಧಿಯಾಗಿದ್ದಾರೆ.
ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ ನಂತರ ಪಶ್ಚಿಮ ಬಂಗಾಳ ಸರ್ಕಾರದಿಂದ ಯಾವುದೇ ವಹಿವಾಟು ‘ಬಾಕಿ ಇಲ್ಲ’ (no dues) ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ದೇಬಾಶಿಸ್ ಧಾರ್ ಅವರ ನಾಮಪತ್ರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು
ಈ ವರ್ಷದ ಆರಂಭದಲ್ಲಿ ಸೇವೆಗೆ ರಾಜೀನಾಮೆ ನೀಡಿದ ನಂತರ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಧಾರ್ ಅವರಿಗೆ ರಾಜ್ಯ ಸರ್ಕಾರದಿಂದ ಅಂತಿಮ ಅನುಮತಿ ಇನ್ನೂ ಸಿಕ್ಕಿಲ್ಲ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ ಎಂದು ವರದಿಯಾಗಿದೆ.
ಧಾರ್ ನಾಮಪತ್ರ ರದ್ದಾಗುವ ಸಾಧ್ಯತೆಯಿದ್ದ ಕಾರಣದಿಂದಾಗಿಯೇ ಪರ್ಯಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಂತೆ ಭಟ್ಟಾಚಾರ್ಯ ಅವರಿಗೆ ಪಕ್ಷ ಸೂಚಿಸಿದ್ದು ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಈಗ ದೇಬಾಶಿಸ್ ಧಾರ್ ಅವರ ನಾಮಪತ್ರವನ್ನು ರದ್ದುಗೊಳಿಸಲಾಗಿದ್ದು, ಭಟ್ಟಾಚಾರ್ಯ ಅವರ ನಾಮಪತ್ರವನ್ನು ಅಂಗೀಕರಿಸಲಾಗಿದೆ.
ಇದನ್ನು ಓದಿದ್ದೀರಾ? ಬೀದರ್ ಲೋಕಸಭಾ | ಮುಗಿದ ನಾಮಪತ್ರ ಭರಾಟೆ, ಶುರುವಾಗಿ ಮತಬೇಟೆ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದೇಬಾಶಿಸ್ ಧಾರ್, “ನಾನು ನಮ್ಮ ಕಾನೂನು ಸಲಹೆಗಾರರನ್ನು ಸಮಾಲೋಚಿಸುತ್ತೇನೆ. ಅದಾದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಆದಷ್ಟು ಬೇಗ ನ್ಯಾಯಾಲಯದ ಮೆಟ್ಟಿಲೇರುತ್ತೇನೆ” ಎಂದು ಹೇಳಿದ್ದಾರೆ.
ಹಾಗೆಯೇ “ಪಕ್ಷದ ಹೊಸ ಅಭ್ಯರ್ಥಿಯಾದ ದೇಬ್ತಾನು ಭಟ್ಟಾಚಾರ್ಯ ಅವರ ಪರವಾಗಿ ಪೂರ್ಣ ಪ್ರಮಾಣದ ಪ್ರಚಾರದಲ್ಲಿ ಪಾಲ್ಗೊಳ್ಳಲಾಗುವುದು. ನಾನು ಪಕ್ಷದಿಂದ ಹೊರ ನಡೆಯುತ್ತಿಲ್ಲ. ಹಾಗಾಗಿ ಪ್ರಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದರು.