ದೆಹಲಿ ಮುಖ್ಯಮಂತ್ರಿ ಆತಿಶಿ ವಿರುದ್ಧ ಬಿಜೆಪಿ ನಾಯಕರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ನ್ಯಾಯಾಲಯವು ಮಂಗಳವಾರ ಮಧ್ಯಾಹ್ನ ವಜಾಗೊಳಿಸಿದೆ. ಮಾನನಷ್ಟ ಮೊಕದ್ದಮೆ ಆರೋಪಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಯಾಗಿತ್ತು.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಸಮನ್ಸ್ ರದ್ದುಗೊಳಿಸಿ, ಎಎಪಿ ನಾಯಕಿಯ ಹೇಳಿಕೆಯು ಒಟ್ಟಾರೆಯಾಗಿ ವಿರೋಧ ಪಕ್ಷದ ವಿರುದ್ಧವಾಗಿ ಮಾಡಲಾಗಿದೆಯೇ ಹೊರತು ಸಂಘಟನೆ ವೈಯಕ್ತಿಕ ಸದಸ್ಯರ ವಿರುದ್ಧ ಮಾಡಿರುವುದರಲ್ಲ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ದೆಹಲಿ ಸಿಎಂ ಆತಿಶಿ ಬಂಧನಕ್ಕೆ ಸಿದ್ಧತೆ ನಡೆಸಿದೆಯಾ ಬಿಜೆಪಿ!?
ಕಳೆದ ವರ್ಷ ಏಪ್ರಿಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿದ್ದ ಸಂದರ್ಭದಲ್ಲಿ ಆತಿಶಿ, ತನ್ನನ್ನು ಮತ್ತು ಇತರೆ ಎಎಪಿ ನಾಯಕರನ್ನು ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳು ಸಂಪರ್ಕಿಸಿ ಪಕ್ಷಕ್ಕೆ ಸೇರುವಂತೆ, ಸೇರದಿದ್ದರೆ ಒಂದು ತಿಂಗಳ ಒಳಗೆ ಜಾರಿ ನಿರ್ದೇಶನಾಲಯದಿಂದ ಬಂಧನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದರು.
ಇದಾದ ಬಳಿಕ ಬಿಜೆಪಿಯ ಪ್ರವೀಣ್ ಶಂಕರ್ ಕಪೂರ್ ಪ್ರಕರಣ ದಾಖಲಿಸಿದ್ದರು. ಬಿಜೆಪಿ ವಿರುದ್ಧ ಆತಿಶಿ ಮತ್ತು ಇತರ ಎಎಪಿ ನಾಯಕರು ಮಾಡಿರುವ ಆರೋಪಗಳು ಸುಳ್ಳು ಎಂದು ಪ್ರತಿಪಾದಿಸಿದ ಕಪೂರ್, ಈ ಆರೋಪವನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿಯಿಲ್ಲ ಎಂದು ದೂರಿದ್ದರು. 2024ರ ಲೋಕಸಭೆ ಚುನಾವಣೆಗೂ ಒಂದು ತಿಂಗಳು ಮುನ್ನ ಈ ಘಟನೆ ನಡೆದಿತ್ತು. ಇದಾದ ಕೆಲವೇ ಸಮಯದಲ್ಲಿ ಎಎಪಿಯಲ್ಲಿದ್ದ ಕೈಲಾಶ್ ಗೆಹ್ಲೋಟ್ ಬಿಜೆಪಿ ಸೇರ್ಪಡೆಯಾಗಿದ್ದರು.
ಮುಂದಿನ ವಾರ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಸಿದ್ಧತೆಯನ್ನು ನಡೆಸಲಾಗುತ್ತಿರುವ ನಡುವೆ ರೋಸ್ ಅವೆನ್ಯೂ ನ್ಯಾಯಾಲಯದ ತೀರ್ಪು ಎಎಪಿಯನ್ನು ನಿರಾಳವಾಗಿಸಿದೆ. ಆತಿಶಿ ತಮ್ಮ ಕಲ್ಕಾಜಿ ಸ್ಥಾನದಿಂದ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
