ಮುಂಬರುವ ಬಿಹಾರ ಚುನಾವಣೆಯ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷವು ‘ಪ್ರಿಯದರ್ಶಿನಿ ಉಡಾನ್ ಯೋಜನೆ’ಯಡಿ 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ. ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಅವರು ಯೋಜನೆಯನ್ನು ಘೋಷಿಸಿದ್ದಾರೆ. ಈ ವೇಳೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಚಿತ್ರಗಳು ಇರುವ ಸ್ಯಾನಿಟರಿ ಪ್ಯಾಡ್‌ಗಳ ಬಾಕ್ಸ್‌ಗಳನ್ನು ಪ್ರದೇಶಿಸಿದ್ದರು. ಇದನ್ನು ಟೀಕಿಸುವ ಭರದಲ್ಲಿ ಬಿಜೆಪಿ ವಿಕೃತಿ ಮೆರೆದಿದ್ದು, ಮತ್ತೊಮ್ಮೆ ತನ್ನ ಮಹಿಳಾ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸಿದೆ. ಮಹಿಳೆಯರನ್ನು ಅಪಮಾನಿಸಿದೆ.
ಕಾಂಗ್ರೆಸ್‌ನ ‘ಪ್ರಿಯದರ್ಶಿನಿ ಉಡಾನ್ ಯೋಜನೆ’ಯನ್ನು ಬಿಜೆಪಿ ಟೀಕಿಸಲು ತೀರಾ ತುಚ್ಚ ಹಂತಕ್ಕೆ ಇಳಿದಿದೆ. ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಮೇಲೆ ರಾಹುಲ್ ಗಾಂಧಿಯವರ ಚಿತ್ರವನ್ನು ಚಿತ್ರಿಸಿ ವಿಕೃತಿ ಮೆರೆದಿದೆ. ಬಿಜೆಪಿ ಐಟಿ ಸೆಲ್ ಸೃಷ್ಟಿಸಿರುವ ಈ ಚಿತ್ರವನ್ನು ಕಾಂಗ್ರೆಸ್ ಚಿತ್ರಿಸಿದೆ ಎಂದು ಕೆಲ ಬಿಜೆಪಿ ನಾಯಕರೇ ಆರೋಪಿಸಿದ್ದಾರೆ.
ಬಿಜೆಪಿ ಐಟಿ ಸೆಲ್ ಸೃಷ್ಟಿಸಿರುವ ಚಿತ್ರವನ್ನು ಹಂಚಿಕೊಂಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ರಾಹುಲ್ ಗಾಂಧಿ ಅವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ನ ಮೇಲೆ ಮುದ್ರಿಸುವುದು ಬಿಹಾರದ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷವಾಗಿದೆ” ಎಂದು ಆರೋಪಿಸಿದ್ದಾರೆ. ಬಿಜೆಪಿಯ ಮತ್ತೊಬ್ಬ ನಾಯಕ ಕುಂದನ್ ಕೃಷ್ಣ, “ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ. ಮಹಿಳೆಯರ ಸಮಸ್ಯೆಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ” ಎಂದು ಟೀಕಿಸಿದ್ದಾರೆ.
ಆದರೆ, ಈ ಚಿತ್ರವನ್ನು ಬಿಜೆಪಿಯೇ ಚಿತ್ರಿಸಿ, ಕಾಂಗ್ರೆಸ್ ಮೇಲೆ ಆರೋಪಿಸಿದೆ. ಮಾತ್ರವಲ್ಲದೆ, ಬಿಜೆಪಿಯೇ ಮಹಿಳೆಯರನ್ನು ಅಪಮಾನಿಸುತ್ತಿದೆ. ಅಕ್ಷರಶಃ ಬಿಜೆಪಿ ತನ್ನೊಳಗಿನ ಮಹಿಳಾ ವಿರೋಧಿ ವಿಕೃತಿಯನ್ನು ಹೊರಹಾಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
BJP IT cell members deleting their tweet after getting called out. pic.twitter.com/tsXKnjE17S
— Mohammed Zubair (@zoo_bear) July 5, 2025
ಬಿಜೆಪಿಯ ವಿಕೃತಿಯನ್ನು ಖಂಡಿಸಿರುವ ಕಾಂಗ್ರೆಸ್‌ನ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ, “ಬಿಜೆಪಿಯದ್ದು ಮಹಿಳಾ ವಿರೋಧಿ ಮನಸ್ಥಿತಿ. ಬಿಹಾರದಲ್ಲಿ ಋತುಸ್ರಾವದ ಶುಚಿತ್ವದ ಕೊರತೆಯಿಂದ ಮಹಿಳೆಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ, ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವುದಕ್ಕಾಗಿ ನಾವು ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆಯನ್ನು ಘೋಷಿಸಿದ್ದೇವೆ. ಆದರೆ, ಬಿಜೆಪಿಗರಿಗೆ ಮಹಿಳೆಯರು ಮತ್ತು ಅವರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ” ಎಂದು ಪ್ರತ್ಯಾರೋಪ ಮಾಡಿದ್ದಾರೆ.