ಸಂಚಾರಿ ಪಶು ಚಿಕಿತ್ಸಾಲಯದ ವಾಹನದ ಮೇಲೆ ಅಂಟಿಸಲಾಗಿರುವ ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿ ಮುಖ ಸರಿಯಾಗಿ ಕಾಣುತ್ತಿಲ್ಲ. ಅವರ ಮುಖವನ್ನು ಕಾಣದಂತೆ ಮಾಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಪಶು ಚಿಕಿತ್ಸಾಲಯ ವಾಹನವನ್ನು ತಡೆದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಾಹನದ ಮೇಲೆ ಹತ್ತಿ ದಾಂಧಲೆ ನಡೆಸಿದ್ದಾರೆ.
ಹುಬ್ಬಳ್ಳಿಯನ್ನು ಕರಸೇವಕರನ್ನು ಬಂಧಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಪಶು ಚಿಕಿತ್ಸಾಲಯ ವಾಹನದ ಮೇಲಿನ ಪೋಸ್ಟರ್‌ನಲ್ಲಿ ಮೋದಿ ಫೋಟೋ ಸರಿಯಾಗಿ ಕಾಣದೇ ಇರುವುದನ್ನು ಗಮನಿಸಿ, ವಾಹನ ತಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪಶುಸಂಗೋಪನ ಸಚಿವ ಕೆ ವೆಂಕಟೇಶ್ ವಿರುದ್ಧ ಘೊಷಣೆ ಕೂಗಿದ್ದಾರೆ. ಬಿಜೆಪಿ ಸದಸ್ಯೆಯೊಬ್ಬರು ವಾಹನದ ಮೇಲಿನ ಪೋಸ್ಟರ್‌ನಲ್ಲಿದ್ದ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ.
ಸಂಚಾರಿ ಪಶು ಚಿಕಿತ್ಸಾಲಯವು ಕೇಂದ್ರ ಸರ್ಕಾರದ ಅನುದಾನದಿಂದ ಅನುಷ್ಠಾನ ಆಗಿದ್ದರೆ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಪಶುಸಂಗೋಪನಾ ಇಲಾಖೆ ಸಚಿವರ ಭಾವಚಿತ್ರಕ್ಕೆ ಸಮನಾಗಿ ಪ್ರಧಾನ ಮಂತ್ರಿಗಳ ಭಾವಚಿತ್ರವನ್ನೂ ಹಾಕುವುದು ಶಿಷ್ಟಾಚಾರ. ಹಾಗೇನಾದರೂ ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ ರಾಜ್ಯದ ಮುಖ್ಯಮಂತ್ರಿಗಳೇ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಈ ಯೋಜನೆ ರಾಜ್ಯ ಸರ್ಕಾರದ್ದಾಗಿದ್ದರೆ ಈ ಘಟನೆ ತಪ್ಪು.