ಮಂಗಳವಾರ ವಯನಾಡಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸಿಪಿಐಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. “ಸಂಸದರು ಕ್ಷೇತ್ರಕ್ಕೆ ಬರೀ ಸಾಂದರ್ಭಿಕವಾಗಿ ಭೇಟಿ ನೀಡುತ್ತಿದ್ದಾರೆ ಎಂದು ಸಿಪಿಐಎಂ ಕಾರ್ಯಕರ್ತರು ಆರೋಪಿಸಿದರು.
ಕಣ್ಣೂರು ವಿಮಾನ ನಿಲ್ದಾಣದಿಂದ ವಯನಾಡಿಗೆ ತೆರಳುತ್ತಿದ್ದಾಗ ಪ್ರಿಯಾಂಕಾ ಗಾಂಧಿ ಅವರಿಗೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಯಾವುದೇ ಸಮಸ್ಯೆಯಿದ್ದರೆ ಮಾತ್ರ ಸಂಸದೆ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂದು ಆರೋಪಿಸಿ ಸಿಪಿಐಎಂ ಕಾರ್ಯಕರ್ತರು ಘೋಷಣೆ ಕೂಗಿದರು.
ಇದನ್ನು ಓದಿದ್ದೀರಾ? ದುಷ್ಟ ಸರ್ಕಾರದ ವಿರುದ್ಧ ನಮ್ಮ ಹೋರಾಟ, ಸಂವಿಧಾನ ಉಳಿವಿಗಾಗಿ ಜೀವ ಕೊಡಲು ಸಿದ್ಧ: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ ಹುಲಿ ದಾಳಿಯಲ್ಲಿ ಮೃತಪಟ್ಟ ತೋಟಗಾರಿಕಾ ಕೆಲಸಗಾರ್ತಿ ರಾಧಾ ಮತ್ತು ತನ್ನ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಂ.ಎನ್. ವಿಜಯನ್ ಅವರ ಮನೆಗಳಿಗೆ ಭೇಟಿ ನೀಡಿದರು.
ರಾಧಾ ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವ ಭರವಸೆಯನ್ನು ಪ್ರಿಯಾಂಕಾ ಗಾಂಧಿ ನೀಡಿದರು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾನವ-ಪ್ರಾಣಿ ಸಂಘರ್ಷದ ವಿಷಯಗಳನ್ನು ಚರ್ಚಿಸುವುದಾಗಿಯೂ ಭರವಸೆ ನೀಡಿದರು.
ವಿಜಯನ್ ಅವರ ಮನೆಗೆ ಪ್ರಿಯಾಂಕಾ ಗಾಂಧಿ ಅವರ ಭೇಟಿಯು ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಶಾಸಕ ಐ ಸಿ ಬಾಲಕೃಷ್ಣನ್ ಮತ್ತು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಎನ್.ಡಿ. ಅಪ್ಪಚ್ಚನ್ ಅವರು ವಿಜಯನ್ ಮತ್ತು ಅವರ ಮಗನ ಆತ್ಮಹತ್ಯಾ ಪ್ರಚೋದನೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹಾಗಾಗಿ ರಾಜಕೀಯವಾಗಿ ಈ ಭೇಟಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿದ್ದೀರಾ? ತನ್ನ ಕೆನ್ನೆಯ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಬಿಧುರಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
ಕಾಂಗ್ರೆಸ್ ಶಾಸಕ ಬಾಲಕೃಷ್ಣನ್ ಮತ್ತು ಇತರರು ಪಕ್ಷದ ನಿಯಂತ್ರಣದಲ್ಲಿರುವ ಸಹಕಾರಿ ಬ್ಯಾಂಕ್ಗಳಿಗೆ ನೇಮಕಾತಿಗಳಲ್ಲಿ ಅಕ್ರಮ ಎಸಗಿದ್ದರಿಂದ ವಿಜಯನ್ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಈ ಬಿಕ್ಕಟ್ಟಿನ ಬಗ್ಗೆ ಪ್ರಿಯಾಂಕಾ ಗಾಂಧಿ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ.
ತನ್ನ ಸಹೋದರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡ ಬಳಿಕ ವಯನಾಡಿನಲ್ಲಿ ಉಪಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಿಯಾಂಕಾ ಗಾಂಧಿ ಗೆಲವುದು ಸಾಧಿಸಿದ್ದಾರೆ. ಅದಾದ ಬಳಿಕ ಕೊನೆಯದಾಗಿ ಡಿಸೆಂಬರ್ 1 ಮತ್ತು 2ರಂದು ವಯನಾಡಿಗೆ ಭೇಟಿ ನೀಡಿದ್ದರು. ಈಗ ಜನವರಿ ಅಂತ್ಯದಲ್ಲಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದಾರೆ. ಈ ಕಾರಣದಿಂದಾಗಿ ಸಿಪಿಐಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ.
