ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರೀ ಹುರುಪಿನಿಂದ ಹಿಂದುತ್ವವನ್ನು ಪ್ರತಿಪಾದಿಸಿದ್ದರು. ಹಿಂದುತ್ವ ಮತ್ತು ಮುಸ್ಲಿಂ ವಿರೋಧಿ ದ್ವೇಷದಲ್ಲೇ ಅಧಿಕಾರ ನಡೆಸಬಹುದು ಎಂಬ ಭ್ರಮೆಯಲ್ಲಿ ತೇಲುತ್ತಿದ್ದರು. ಪ್ರಸ್ತುತ ಫಲಿತಾಂಶ ಅವರ ಭ್ರಮೆಯನ್ನು ಬುಡಮೇಲು ಮಾಡಿದೆ. ಹಿಂದುತ್ವದ ತಲೆಗೆ ಸರಿಯಾದ ಹೊಡೆತ ಕೊಟ್ಟಿದೆ.
ಪ್ರಧಾನಿ ಮೋದಿ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹೊರ ನಡೆದ ಸರ್ಕಾರವು ತಾಂತ್ರಿಕವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಾಗಿತ್ತಾದರೂ, ಅದರು ಪೂರ್ಣ ಪ್ರಮಾಣದಲ್ಲಿ ಮೋದಿ-ಬಿಜೆಪಿ ಸರ್ಕಾರವೇ ಆಗಿತ್ತು. ಮೋದಿ ಅವರ ಸರ್ವಾಧಿಕಾರಿ ಧೋರಣೆಗಳನ್ನು ಹೆಚ್ಚಾಗಿದ್ದವು. ಸರ್ಕಾರ ಮೋದಿಯವರ ಏಕವ್ಯಕ್ತಿ ಆಡಳಿತವಾಗಿ ಮಾರ್ಪಟ್ಟಿತ್ತು. ಅವರು ಸರ್ಕಾರವನ್ನು ವಿಚಿತ್ರ ಮತ್ತು ಕ್ರೂರವಾಗಿ ನಡೆಸುತ್ತಿದ್ದರು. ದೊಡ್ಡ ಉದ್ಯಮಿಗಳ ಹಿತಾಸಕ್ತಿ ಮತ್ತು ದೇಶದ ಪ್ರಬಲ ವರ್ಗಗಳ ಏಳಿಗೆಯನ್ನು ಮಾತ್ರ ಅವರು ನೋಡುತ್ತಿದ್ದರು. ಹೀಗಾಗಿಯೇ, ಈ ಹಿಂದೆಯೇ ಹಲವಾರು ಸಣ್ಣ-ಪುಟ್ಟ ಪಕ್ಷಗಳು ಎನ್‌ಡಿಎ ತೊರೆದಿದ್ದವು. ಇದೆಲ್ಲವೂ, ಮೋದಿ ಅವರ ಪಕ್ಷ 2024ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂಬುದನ್ನು ಸೂಚಿಸಿತ್ತು.
ಅದಾಗ್ಯೂ, ಎನ್‌ಡಿಎ ಸಾಮಾನ್ಯ ಬಹುಮತಕ್ಕಿಂತ 20 ಸ್ಥಾನಗಳನ್ನು ಗಳಿಸಿದೆ. ಆದರೆ, ಬಿಜೆಪಿ ಒಂದೇ ಪಕ್ಷ ಬರೋಬ್ಬರಿ 63 ಸ್ಥಾನಗಳನ್ನು ಕಳೆದುಕೊಂಡಿದ್ದು, 240ಕ್ಕೆ ಬಂದು ನಿಂತಿದೆ. ಸರ್ಕಾರ ರಚಿಸಲು ಅಗತ್ಯವಿರುವ ಸರಳ ಬಹುಮತದ 272 ಸ್ಥಾನಗಳನ್ನು ಈಗ ಯಾವುದೇ ಪಕ್ಷ ಹೊಂದಿಲ್ಲ. ಮೋದಿ ಅವರು ಅಧಿಕಾರದ ಲಾಲಸೆಯಿಂದ ಹಿಂದೆ ಸರಿಯಬೇಕು. ದ್ರೌಪದಿ ಮುರ್ಮು ಅವರು ಹೊಸ ಸರ್ಕಾರ ರಚನೆಗೆ ಪಕ್ಷ ಅಥವಾ ಚುನಾವಣಾ ಪೂರ್ಣ ಮೈತ್ರಿಕೂಟವನ್ನು ಆಹ್ವಾನಿಸಬೇಕು. ಈ ಹಿಂದೆ, ನಿರ್ಗಮಿತ ಪ್ರಧಾನಿ ರಾಜೀವ್ ಗಾಂಧಿ ಅವರು 1989ರಲ್ಲಿ ನಿಖರವಾಗಿ ಇದನ್ನು ಪಾಲಿಸಿದ್ದರು. ಅಂದಿನ ಚುನಾವಣೆಯಲ್ಲಿ ಅವರ ಪಕ್ಷ 200 ಸ್ಥಾನಗಳನ್ನು ಪಡೆದಾಗ, ಅವರು ಪಕ್ಷವು ಲೋಕಸಭೆಯಲ್ಲಿ ಅರ್ಧದಷ್ಟು ಸ್ಥಾನಗಳನ್ನು ಹೊಂದಿಲ್ಲವೆಂದು ಅಧಿಕಾರ ತ್ಯಜಿಸಿದರು. ಅದಾಗ್ಯೂ, ಅವರು ಸಮ್ಮಿಶ್ರ ಸರ್ಕಾರವನ್ನು ನಿರಾಯಾಸವಾಗಿ ರಚಿಸಬಹುದಿತ್ತು. ಆದರೆ, ಅದನ್ನು ಅವರು ನಿರಾಕರಿಸಿದರು. ಯಾರದೇ ಒತ್ತಡಕ್ಕೂ ಮಣಿಯದೆ ಅಧಿಕಾರದಿಂದ ಹಿಂದೆ ಸರಿದರು.
ಆದರೆ ಮೋದಿಯವರು ತೀರಾ ವಿಭಿನ್ನವಾದ ರಾಜಕೀಯ ಮನುಷ್ಯ. ಅವರಲ್ಲಿ ಇನ್ನೂ ಅಧಿಕಾರ ದಾಹ ಬೋರ್ಗರೆಯುತ್ತಿದೆ. ಅವರು ಎನ್. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳನ್ನು ಎನ್‌ಡಿಎಯಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು, ಮತ್ತೆ ಸರ್ಕಾರ ರಚಿಸಲು ಹವಣಿಸುತ್ತಿದ್ದಾರೆ. ಅವರು ಮೈತ್ರಿ ತೊರೆದರೆ, ಅಧಿಕಾರ ಹೋಗುತ್ತದೆಂಬ ಆತಂಕದಲ್ಲಿ ಈಗ ಜೆಡಿಯು ಮತ್ತು ಟಿಡಿಪಿ ದಾಕ್ಷಿಣ್ಯಕ್ಕೆ ಶರಣಾಗಲು ಮುಂದಾಗುತ್ತಿದ್ದಾರೆ.
ಮೋದಿಯವರು ಸಾಂವಿಧಾನಿಕ ನೀತಿ ಮತ್ತು ರಾಜಕೀಯ ನೈತಿಕತೆಯನ್ನು ದೂರ ಮಾಡಿದ್ದಾರೆ. ಮತ ಎಣಿಕೆ ನಡೆಯುತ್ತಿರುವಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಅವರು ವಿಜಯೋತ್ಸವದ ಭಾಷಣ ಮಾಡಿದರು. ತಮ್ಮ ಮೂರನೇ ‘ಗೆಲುವಿಗಾಗಿ’ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಸೋಲಿನ ಹತಾಶೆ ಮುಖದಲ್ಲಿ ಕಾಣುತ್ತಿದ್ದರೂ, ಅಧಿಕಾರ ಬೇಕೆಂಬ ಲಾಲಸೆ ಅವರಲ್ಲಿ ವ್ಯಕ್ತವಾಗುತ್ತಿತ್ತು. ಆದರೆ, ಮೋದಿಯ ಪಕ್ಕದಲ್ಲಿ ಕುಳಿತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿರಾಶೆ ಮತ್ತು ಅಸಮಾಧಾನದ ನೋಟವು ಮೋದಿಯ ರಾಜಕೀಯ ನೈತಿಕತೆ ತಲೆಕೆಳಗಾಗಿರುವುದನ್ನು ಹೇಳುತ್ತಿತ್ತು.
ಉತ್ತರ ಪ್ರದೇಶದ ರಜಪೂತ ಸಮುದಾಯಕ್ಕೆ ಸೇರಿದ ರಾಜ್‌ನಾಥ್ ಸಿಂಗ್ ಲಕ್ನೋದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಭಾರೀ ಹೋರಾಟ ನಡೆಸಿದರು. ಕೊನೆಯ ಹಂತದವರೆಗಿನ ಹೋರಾಟವು ಮೋದಿ ತಮ್ಮ ಹೊಟ್ಟೆಗೆ ಒದ್ದಂತೆ ಭಾವಿಸುತ್ತಿದ್ದರು. ಆದರೆ, ಆತ್ಮೀಯತೆ ಮತ್ತು ರಾಜಕೀಯ ಜೀವನಕ್ಕಾಗಿ ತಮ್ಮ ಅಸಹನೆಯನ್ನು ಹಿಡಿದಿಟ್ಟುಕೊಂಡು ಅವರು ವೇದಿಕೆ ಹಂಚಿಕೊಂಡಿದ್ದರು. ಅಮಿತ್ ಶಾ ಅವರು ಮೋದಿಯನ್ನು ಇನ್ನೊಂದು ಬದಿಯನ್ನು ಆಕ್ರಮಿಸಿಕೊಂಡಿದ್ದರು. ಉಳಿದಂತೆ, ತಮ್ಮ ಸರ್ಕಾರದಲ್ಲಿ ಕ್ಯಾಬಿನೆಟ್‌ನಲ್ಲಿದ್ದ ಯಾವುದೇ ಸದಸ್ಯರನ್ನು ಅವರು ವೇದಿಕೆಗೆ ಆಹ್ವಾನಿಸಲಿಲ್ಲ. ಸ್ಪಷ್ಟವಾಗಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮೋದಿ ಸುಳ್ಳು ಪ್ರಚೋದನಕಾರಿ ಭಾಷಣ ಮಾಡಿದರು. ಆದರೆ, ಅವರ ಭಾಷಣಕ್ಕೆ ಯಾರೂ ಆಸಕ್ತಿ ತೋರಲಿಲ್ಲ. ಅವರ ಮಾತುಗಳಲ್ಲಿ ತಮ್ಮ ಪಕ್ಷದ ಸೋಲನ್ನು ಮರೆ ಮಾಚಲು ಯತ್ನಿಸುತ್ತಿರುವುದು ಸ್ಪಷ್ಟವಾಗಿತ್ತು.
ಈಗ, ಮೋದಿಯ ಎನ್‌ಡಿಎ ಮಿತ್ರಪಕ್ಷಗಳು, ವಿಶೇಷವಾಗಿ ನಾಯ್ಡು ಮತ್ತು ನಿತೀಶ್ ಅವರನ್ನು ‘ಇಂಡಿಯಾ’ ಕೂಟದ ಪ್ರಮುಖ ನಾಯಕರು ಸಂಪರ್ಕಿಸಿದ್ದಾರೆ. ಇದು ಸಂಖ್ಯೆಯ ದೃಷ್ಟಿಯಲ್ಲಿ ಮೋದಿ-ಬಿಜೆಪಿಯನ್ನು ಕಂಪಿಸುವಂತೆ ಮಾಡಿದೆ. ಈ ಪಕ್ಷಗಳು ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ ‘ಇಂಡಿಯಾ’ ನಾಯಕರ ಜೊತೆ ಮಾತುಕತೆ ನಡೆಸಿ, ಎನ್‌ಡಿಎ ತೊರೆದರೆ, ‘ಇಂಡಿಯಾ’ ಕೂಟವು ಎನ್‌ಡಿಎಗಿಂತ ಹೆಚ್ಚು ಸಂಖ್ಯೆಗೆ ಏರುತ್ತದೆ.
ಮೋದಿ ಅವರು ಅಮೆರಿಕದ ಟ್ರಂಪ್‌ನಂತೆ ತಾವೂ ಅಧಿಕಾರ ದಾಹಿ ಎಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಆದರೆ, ಅದು ಬಟಾಬಯಲಾಗಿ ಕಾಣಿಸುತ್ತಿದೆ. ಮಿಗಿಯಾಗಿ, ತಾವೇ 10 ವರ್ಷಗಳಿಂದ ಪ್ರತಿನಿಧಿಸುತ್ತಿರುವ ತನ್ನದೇ ಕ್ಷೇತ್ರ ವಾರಣಾಸಿಯಲ್ಲಿ ಹಿಂದೆಂದಿಗಿಂತಲೂ ಕಡಿಮೆ ಅಂತರದಲ್ಲಿ ಮೋದಿ ಗೆದ್ದಿದ್ದಾರೆ. ಜೊತೆಗೆ, ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಬಿಜೆಪಿ ಸೋತಿದೆ. ಉತ್ತರ ಪ್ರದೇಶದಲ್ಲಿ 2019ರ ಚುನಾವಣೆಗಿಂತ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಉತ್ತರ ಪ್ರದೇಶದ ಆಟದ ಮೈದಾನವು ಮೋದಿ-ಬಿಜೆಪಿಗೆ ಪಾಳುಭೂಮಿಯಾಗಿದೆ. ಅಲ್ಲಿ, ಬಿಜೆಪಿ ಅಥವಾ ಎನ್‌ಡಿಎಗಿಂತ ‘ಇಂಡಿಯಾ’ ಕೂಟ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.
ಸಂಪೂರ್ಣ ಫಲಿತಾಂಶ ಘೋಷಣೆಯಾಗುವ ಮುನ್ನವೇ ಮೋದಿ ಅವರು ವಿಜಯೋತ್ಸವ ಆಚರಿಸಿದ್ದು, ಮೋದಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಲು ರಾಷ್ಟ್ರಪತಿ ಭವನದ ಮೇಲೆ ಒತ್ತಡ ತರುವ ತಂತ್ರವೆಂದು ಹೇಳಲಾಗಿದೆ. ಆದರೆ, ಮೋದಿಯ ಆರ್ಭಟಕ್ಕೆ ಬ್ರೇಕ್ ಹಾಕಲು ನಾಗ್ಪುರದ ಆರ್‌ಎಸ್‌ಎಸ್ ಮುಂದಾಗಿದೆ. ಮುಂದಿನ ಪ್ರಧಾನಿಯಾಗಲು ಮೋದಿ ನಾಯಕತ್ವದ ಅರ್ಹತೆಯನ್ನು ಸವಾಲು ಮಾಡಲು ಮುಂದಾಗಿದೆ ಎನ್ನಲಾಗಿದೆ. ಎನ್‌ಡಿಎಯಿಂದ ಮುಂದಿನ ಪ್ರಧಾನಿ ಹುದ್ದೆಗೆ ಸಂಘಪರಿವಾರದ ಕಟ್ಟಾಳು, ನಾಗ್ಪುರದ ಸಂಸದ ನಿತಿನ್ ಗಡ್ಕರಿಯನ್ನು ಪ್ರತಿಷ್ಠಾಪಿಸಲು ಮುಂದಾಗಿದೆ.
ಅದೇನೇ ಇರಲಿ, ಎನ್‌ಡಿಎ ಅಥವಾ ಇಂಡಿಯಾ ಮೈತ್ರಿಕೂಟ – ಇಬ್ಬರಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದು ಬುಧವಾರ ಅಥವಾ ಗುರುವಾರ ಸ್ಪಷ್ಟವಾಗಲಿದೆ. ಆದರೆ, ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದ, ಪ್ರಜಾಪ್ರಭುತ್ವಕ್ಕೆ ಸವಾಲು ಹಾಕುವಂತೆ ವರ್ತಿಸುತ್ತಿದ್ದ ಮೋದಿ-ಶಾ ಜೋಡಿಗೆ ದೇಶದ ಜನರು ಪಾಠ ಹೇಳಿದ್ದಾರೆ. ಹಿಂದುತ್ವದ ಅಜೆಂಡಾ ಮೇಲೆ ಮಾತ್ರವೇ ಅಧಿಕಾರ ನಡೆಸುತ್ತೇವೆಂಬ ಭ್ರಮೆಯನ್ನು ಕಳಚಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತೆ ನವೀಕರಿಸಿದ್ದಾರೆ. ಸಂವಿಧಾನ-ಪ್ರಜಾಪ್ರಭುತ್ವಕ್ಕೆ ತಲೆಬಾಗಿದರೆ ಅಧಿಕಾರ, ಇಲ್ಲದಿದ್ದರೆ ಅಧಿಕಾರದಿಂದ ದೂರ ಎಂಬ ಸ್ಪಷ್ಟ ಸಂದೇಶವನ್ನು ದೇಶದ ಜನರು ಕೊಟ್ಟಿದ್ದಾರೆ.