ಆನ್‌ಲೈನ್ ಟಿಕೆಟ್ ಮಾಡುವ ಪ್ಲಾಟ್‌ಫಾರ್ಮ್ ಆದ ಬುಕ್‌ಮೈಶೋ ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಅವರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅಳಿಸಿಹಾಕಿದೆ. ತನ್ನ ವೆಬ್‌ಸೈಟ್‌ನಲ್ಲಿದ್ದ ಕಲಾವಿದರ ಪಟ್ಟಿಯಿಂದ ಕುನಾಲ್ ಕಾಮ್ರಾ ಹೆಸರನ್ನೂ ತೆಗೆದುಹಾಕಿದೆ ಎಂದು ವರದಿಯಾಗಿದೆ.
ಯುವ ಶಿವಸೇನೆ ಪ್ರಧಾನ ಕಾರ್ಯದರ್ಶಿ ರಾಹುಲ್ ಎನ್ ಕನಾಲ್ ಬುಕ್‌ಮೈಶೋಗೆ ಇತ್ತೀಚೆಗೆ ಪತ್ರ ಬರೆದಿದ್ದು, ಅದಾದ ಬಳಿಕ ಈ ಕ್ರಮಕೈಗೊಳ್ಳಲಾಗಿದೆ. ಕುನಾಲ್ ಕಾರ್ಯಕ್ರಮಗಳಿಗೆ ಟಿಕೆಟ್ ಮಾರಾಟವನ್ನು ಮಾಡಬಾರದು ಎಂದು ಒತ್ತಾಯಿಸಿ ರಾಹುಲ್ ಪತ್ರ ಬರೆದಿದ್ದರು.
ಇದನ್ನು ಓದಿದ್ದೀರಾ? ‘ಯಾರು ಅವರು, 2 ನಿಮಿಷದ ಕಾಮೆಡಿಯನ್’: ಕುನಾಲ್ ಕಾಮ್ರಾ ಬಗ್ಗೆ ಕಂಗನಾ ರಣಾವತ್ ಕಿಡಿ
ಏಪ್ರಿಲ್ 2ರಂದು ಈ ಪತ್ರವನ್ನು ಬರೆಯಲಾಗಿದ್ದು, ಕುನಾಲ್ ಕಾರ್ಯಕ್ರಮದಿಂದ ಸಾರ್ವಜನಿಕರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. “ಬುಕ್‌ಮೈಶೋ ಈ ಹಿಂದೆ ಆಕ್ರಮಣಕಾರಿಯಾಗಿ ಮಾತನಾಡುವ ಕುನಾಲ್ ಕಾಮ್ರಾ ಶೋಗಳ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದೆ ಎಂದು ತಿಳಿದುಬಂದಿದೆ. ಆದರೆ ಅವರು ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಬಾರದು” ಎಂದು ಉಲ್ಲೇಖಿಸಲಾಗಿದೆ.
ತನ್ನ ಪಕ್ಷವನ್ನೇ ಇಬ್ಭಾಗ ಮಾಡಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ದ್ರೋಹಿ ಎಂದು ತನ್ನ ಕಾರ್ಯಕ್ರಮವೊಂದರಲ್ಲಿ ಕುನಾಲ್ ಕಾಮ್ರಾ ಹೇಳಿದ್ದರು. ಎಲ್ಲಿಯೂ ಶಿಂದೆ ಹೆಸರನ್ನು ಉಲ್ಲೇಖಿಸದ ಕುನಾಲ್ ‘ಥಾಣೆಯ ನಾಯಕ’ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಕಾರ್ಯಕ್ರಮ ನಡೆದ ಸ್ಟುಡಿಯೋವನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಕುನಾಲ್‌ಗೆ ಶಿವಸೇನೆ ನಾಯಕರು ಜೀವ ಬೆದರಿಕೆ ಕೂಡಾ ಹಾಕಿದ್ದರು.
ಇವೆಲ್ಲವುದರ ನಡುವೆ ಕುನಾಲ್ ಕಾಮ್ರಾ ವಿರುದ್ಧ ಶಿವಸೇನೆ ನಾಯಕರುಗಳು ಹಲವು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಗಾಗಿ ಪೊಲೀಸರು ಒಟ್ಟು ಮೂರು ಬಾರಿ ಸಮನ್ಸ್ ನೀಡಿದ್ದು, ಕುನಾಲ್ ವಿಚಾರಣೆ ಹಾಜರಾಗಿಲ್ಲ.
