- ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ಫೇಕ್ ಲೆಟರ್ ಹರಿಬಿಟ್ಟಿದ್ದಾರೆ
- ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆಯಲಾಗಿತ್ತು’
ಶಾಸಕ ಬಿ ಆರ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, “ಶಾಸಕರ ಕುಂದುಕೊರತೆ ಆಲಿಸಲು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ಫೇಕ್ ಲೆಟರ್ ಹರಿಬಿಟ್ಟಿದ್ದಾರೆ” ಎಂದು ತಿಳಿಸಿದೆ.
“ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಈಗ ತಮ್ಮ ಫೇಕ್ ಫ್ಯಾಕ್ಟರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿವೆ. ಗ್ಯಾರಂಟಿಗಳ ಜಾರಿ ಮಾಡಿದ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ನಕಲಿ ಸೃಷ್ಟಿಯ ಮೊರೆ ಹೋಗಿವೆ. ಶಾಸಕ ಬಿ ಆರ್ ಪಾಟೀಲ್ ಅವರ ಹಳೆಯ ವಿಳಾಸದ ನಕಲಿ ಲೆಟರ್ ಹೆಡ್ನಲ್ಲಿ ನಕಲಿ ಪತ್ರ ಸೃಷ್ಟಿಸಿದ ಸಾಧನೆ ಮಾಡುತ್ತೇವೆ ಎಂದುಕೊಂಡಿದ್ದರೆ ಅದು ಮೂರ್ಖತನವಾಗುತ್ತದೆ ” ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿ ಕಾರಿದೆ.
ಈ ಬಗ್ಗೆ ಸ್ವತಃ ಶಾಸಕ ಬಿ ಆರ್ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನನ್ನದಲ್ಲ. ಇದೊಂದು ಫೇಕ್ ಲೆಟರ್. ಈ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳುಗಳನ್ನು ಹೆಣೆಯಲಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಯಿಸ್ಟ್ ಬೊಮ್ಮಾಯಿ, ಬೊಂಬೆ ಬೊಮ್ಮಾಯಿ ಮತ್ತು ಬಿಜೆಪಿ
“ನಾನು ಕೊಟ್ಟ ಪತ್ರಕ್ಕೂ ಈ ಪತ್ರದಲ್ಲಿರುವ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಈ ನಕಲಿ ಪತ್ರದಲ್ಲಿ ನನ್ನ ಸಹಿಯನ್ನು ಫೋಟೋ ಶಾಪ್ ಮೂಲಕ ಅಂಟಿಸಲಾಗಿದೆ. ಅಲ್ಲದೇ ಈ ಫೇಕ್ ಲೆಟರ್ನಲ್ಲಿ ನನ್ನ ಹಳೆಯ ಮನೆಯ ವಿಳಾಸ ಬರೆಯಲಾಗಿದೆ. ಪತ್ರವನ್ನು ಡಿಜಿಟಲ್ನಲ್ಲಿ ಟೈಪ್ ಮಾಡಿ, ಸಹಿಗೆ ಜೆರಾಕ್ಸ್ನಿಂದ ಸ್ಕ್ಯಾನ್ ಮಾಡಿ ಬಳಸಲಾಗಿದೆ” ಎಂದು ಹೇಳಿದ್ದಾರೆ.
“ಪ್ರಿಯಾಂಕ್ ಖರ್ಗೆ ಮತ್ತು ನನ್ನ ನಡುವೆ ಮನಸ್ತಾಪ ಮೂಡಿಸಲು ಈ ನಕಲಿ ಪತ್ರ ಸೃಷ್ಟಿಸಲಾಗಿದೆ. ಇದನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಲಬುರ್ಗಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಿದ್ದೇನೆ” ಎಂದು ಬಿ ಆರ್ ಪಾಟೀಲ್ ತಿಳಿಸಿದ್ದಾರೆ.