23 Sep 2023, 06:35 PM
ಚಳವಳಿಗಳನ್ನು ನಿಲ್ಲಿಸಲು ಹೋಗುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಚಳವಳಿಗಳು ಸಹಜ. ಅದು ಚಳುವಳಿಗಾರರ ಅಭಿಪ್ರಾಯ. ಅದನ್ನು ನಾವು ನಿಲ್ಲಿಸಲು ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ವಿವಾದಕ್ಕೆ ಸಂಬಂಧಿಸಿ ಇಂದು ಸಂಜೆ ಬೆಂಗಳೂರಿನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಉಚ್ಛ ನ್ಯಾಯಾಲಯದ ಆದೇಶ ಬರುವ ಮುನ್ನವೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ’ ಎಂದು ಬಿಜೆಪಿ, ಜೆಡಿಎಸ್‌ನವರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ನ್ಯಾಯಾಲಯದಲ್ಲಿ ಸುಳ್ಳು ಹೇಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
23 Sep 2023, 05:25 PM
ಮಾಜಿ ರಾಷ್ಟ್ರಪತಿ ಅಧ್ಯಕ್ಷ್ಯತೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಸಮಿತಿಯ ಮೊದಲ ಸಭೆ
ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿಯ ಮೊದಲ ಸಭೆ ಇಂದು ದೆಹಲಿಯಲ್ಲಿ ನಡೆದಿದೆ. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಗುಲಾಂ ನಬಿ ಆಝಾದ್ ಮತ್ತು ಇತರರು ಭಾಗವಹಿಸಿದ್ದರು.
First meeting of the 'One Nation, One Election' committee under the chairmanship of former President Ram Nath Kovind, attended by Home Minister Amit Shah, Ghulam Nabi Azad and others, earlier today
— ANI (@ANI) September 23, 2023
(Source: Office of Ghulam Nabi Azad) pic.twitter.com/nnd6xi9eZg
ಈ ಸಭೆಯಲ್ಲಿ ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಮಾಡುವ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮತ್ತು ರಾಜಕೀಯ ನಾಯಕರ ಅಭಿಪ್ರಾಯ ಏನು? ಇದರ ಸಾಧಕ-ಬಾಧಕಗಳೇನು? ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.
23 Sep 2023, 04:45 PM
ಸೋಮವಾರ ‘ಕರ್ನಾಟಕ ಬಂದ್’ ದಿನಾಂಕ ಘೋಷಣೆ: ವಾಟಾಳ್ ನಾಗರಾಜ್
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಸೋಮವಾರ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸೆ.26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ. ಅವರ ಜೊತೆಗೆ ಮಾತಾಡುತ್ತೇವೆ. ಎಲ್ಲರೂ ಒಟ್ಟಿಗೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆಯೂ ಮನವಿ ಮಾಡುತ್ತೇವೆ. ಎಲ್ಲರೂ ಸೇರಿ ಬಂದ್ ಮಾಡಿದರೆ ಹೋರಾಟಕ್ಕೆ ಒಂದು ಶಕ್ತಿ ಬರಲಿದೆ ಎಂದರು.

ಸೆ.26ಕ್ಕೆ ಬಂದ್: ‘ಬೆಂಗಳೂರು ಗೌರವ ಹಾಳು ಮಾಡಬೇಡಿ’ ಎಂದ ಡಿಸಿಎಂ ಡಿಕೆ ಶಿವಕುಮಾರ್
ಕಾವೇರಿ ವಿಚಾರವಾಗಿ ಸೆ.26ರಂದು ಬೆಂಗಳೂರು ಬಂದ್ ಸುದ್ದಿಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, “ಬೆಂಗಳೂರನ್ನು ಬಂದ್ ಮಾಡುವುದೆಂದರೆ ನಮ್ಮ ಹೃದಯವನ್ನು ನಾವೇ ಚುಚ್ಚಿಕೊಂಡಂತೆ. ನಾವು ಎಲ್ಲ ರೀತಿಯ ಸಹಕಾರವನ್ನು ರೈತರಿಗೆ ಕೊಟ್ಟಿದ್ದೇವೆ. ಬಂದ್ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ರಾಜ್ಯದ ಪರವಾಗಿಯೇ ನಾವು ಇದ್ದೇವೆ. ದಯವಿಟ್ಟು ಅಂತಹ ತಪ್ಪುಗಳನ್ನು ಮಾಡುವುದಕ್ಕೆ ಹೋಗಬೇಡಿ. ಕರ್ನಾಟಕ ಸರ್ಕಾರವೇ ರಾಜ್ಯದ ಹಿತ ಕಾಪಾಡುತ್ತದೆ” ಎಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡುತ್ತಿದೆ. ಬಿಎಸ್ವೈ, ಬೊಮ್ಮಾಯಿ, ಹೆಚ್ಡಿಕೆಯವರು ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಂದರ್ಶನ ನೀಡಿದ್ದರು. ಪತ್ರಿಕಾ ಸಂದರ್ಶನ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ.. ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ದೇವೇಗೌಡ್ರ ಹೇಳಿದ್ದಾರೆ. ನಾವು ರಾಜ್ಯದ ಜನರ ರಕ್ಷಣೆ ಮಾಡಲು ಹೊರಟಿದ್ದೇವೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

23 Sep 2023, 03:05 PM
‘ಸಿಂಗಂ’ ರೀತಿಯ ಸಿನಿಮಾಗಳಿಂದ ತಪ್ಪು ಸಂದೇಶ: ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ
‘ಸಿಂಗಂʼ ರೀತಿಯ ಚಿತ್ರಗಳಲ್ಲಿ ತೋರಿಸಿರುವಂತೆ ಕಾನೂನು ಪ್ರಕ್ರಿಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತ್ವರಿತ ನ್ಯಾಯ ಒದಗಿಸುವ ಸಿನಿಮೀಯ ʼಪೋಲೀಸ್’ಪಾತ್ರಗಳು ಅತ್ಯಂತ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಪಟೇಲ್ ಹೇಳಿದ್ದಾರೆ. ಇಂಡಿಯನ್ ಪೊಲೀಸ್ ಫೌಂಡೇಶನ್ ತನ್ನ ವಾರ್ಷಿಕ ದಿನ ಮತ್ತು ಪೊಲೀಸ್ ಸುಧಾರಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾನೂನಿನ ಪ್ರಕ್ರಿಯೆಯ ಬಗ್ಗೆ ಜನರು ವ್ಯಕ್ತಪಡಿಸುತ್ತಿರುವ ಅಸಹನೆಯ ಬಗ್ಗೆ ಉಲ್ಲೇಖಿಸಿದ್ದಾರೆ.

23 Sep 2023, 02:05 PM
ನಿಲ್ಲದ ಡಿಸಿಎಂ ಕೂಗು; ಆರು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟ ಶಾಸಕ ರಾಯರೆಡ್ಡಿ
ಸಮುದಾಯವಾರು ಮೂವರು ಉಪ ಮುಖ್ಯಮಂತ್ರಿಗಳ ನೇಮಕ ವಿಚಾರವಾಗಿ ಸಚಿವ ಕೆಎನ್ ರಾಜಣ್ಣ ಬೇಡಿಕೆ ಇಟ್ಟ ಬೆನ್ನಲ್ಲೇ ಇದೀಗ ಶಾಸಕ ಬಸವರಾಜ ರಾಯರೆಡ್ಡಿ ಆರು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಕೆಎನ್ ರಾಜಣ್ಣ ಹೇಳಿಕೆಗೆ ರಾಯರೆಡ್ಡಿ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಎಲ್ಲ ಜಾತಿ-ಧರ್ಮಗಳು ಕಾಂಗ್ರೆಸ್ಗೆ ಬೆಂಬಲ ನೀಡಿವೆ. ಹೀಗಾಗಿ ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ, ಲಿಂಗಾಯತರಿಗೆ ಡಿಸಿಎಂ ಹುದ್ದೆ ನೀಡಿ ಎಂದು ರಾಯರೆಡ್ಡಿ” ಆಗ್ರಹಿಸಿದ್ದಾರೆ.

23 Sep 2023, 01:30 PM
ಸೆಪ್ಟೆಂಬರ್ 26ರಂದು ಬೆಂಗಳೂರು ನಗರ ಬಂದ್‌ಗೆ ಕರೆ
ಸೆಪ್ಟೆಂಬರ್ 26ರಂದು ಬೆಂಗಳೂರು ನಗರ ಬಂದ್‌ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ಕೊಟ್ಟಿದೆ. ಫ್ರೀಡಂಪಾರ್ಕ್ನಲ್ಲಿ ಕುರುಬೂರು ಶಾಂತಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆ. 26ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಟೌನ್ಹಾಲ್ನಿಂದ SBM ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕು. ಫಿಲ್ಮ್ ಛೇಂಬರ್, ಐಟಿ ಕಂಪನಿಗಳು ಬೆಂಬಲ ಕೊಡಬೇಕು. ಇದು ನಮ್ಮ ಬಂದ್ ಅಲ್ಲ, ಬೆಂಗಳೂರಿನ ನಾಗರಿಕರ ಬಂದ್. ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಕುರುಬೂರು ಶಾಂತಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

23 Sep 2023 12:48 PM
ಯೋಗ್ಯತೆ ಇದ್ದರೆ ಸಮಸ್ಯೆ ಬಗೆಹರಿಸಿ, ಇಲ್ಲ ರಾಜೀನಾಮೆ ನೀಡಿ: ಯಡಿಯೂರಪ್ಪ ಕಿಡಿ
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಶನಿವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆ ವೇಳೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. “ನಿಮಗೆ ಯೋಗ್ಯತೆ ಇದ್ದರೆ ಸಮಸ್ಯೆ ಪರಿಹಾರ ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಎಲ್ಲರೂ ಸೇರಿ ನಾವು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
