ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಕೊಲೆಗೈದ ಪ್ರಕರಣದಲ್ಲಿ ದೋಷಿಗಳಾಗಿದ್ದ 11 ಮಂದಿಗೆ ಶಿಕ್ಷೆ ತಗ್ಗಿಸಿದ್ದ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಪಡಿಸಿದೆ. ಆ ಮೂಲಕ ಬಿಲ್ಕಿಸ್ ಬಾನೊ ಅರ್ಜಿಯನ್ನು ಎತ್ತಿ ಹಿಡಿಯುವ ಮೂಲಕ, ಮಹತ್ವದ ತೀರ್ಪು ಪ್ರಕಟಿಸಿದೆ.
ಗುಜರಾತ್ ಸರ್ಕಾರದ ನಿರ್ಧಾರವನ್ನು ಬಾನೊ ಸೇರಿದಂತೆ ಹಲವು ಅರ್ಜಿದಾರರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಹಾಗೂ ಕರ್ನಾಟಕದ ಬಿ ವಿ ನಾಗರತ್ನ ಅವರಿದ್ದ ಪೀಠ ಅಕ್ಟೋಬರ್ 12ರಂದು ಕಾಯ್ದಿರಿಸಿತ್ತು.
2002ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿ ತನ್ನ ಮಗು ಮತ್ತು ಕುಟುಂಬದವರನ್ನು ಕೊಂದ 11 ಅಪರಾಧಿಗಳನ್ನು ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿಯು ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿ ವಿಚಾರಣೆ ಮುಂದುವರಿಯಲಿದೆ ಎಂದು ಕೂಡ ಸುಪ್ರೀಂ ತಿಳಿಸಿದೆ.
“ಗುಜರಾತ್ ಸರ್ಕಾರವು 11 ಅಪರಾಧಿಗಳ ಬಿಡುಗಡೆ ಮಾಡಲು ಸಮರ್ಥವಾಗಿಲ್ಲ” ಎಂದು ಬೊಟ್ಟು ಮಾಡಿರುವ ಸುಪ್ರೀಂ ಕೋರ್ಟ್, “ಈ ನಿರ್ಧಾರವು ಮಹಾರಾಷ್ಟ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದೆ. ಈ ಬಿಡುಗಡೆ ಆದೇಶದಲ್ಲಿ ಸಾಮರ್ಥ್ಯದ ಕೊರತೆ ಇದೆ. ಅಲ್ಲದೇ, ನ್ಯಾಯಾಲಯವನ್ನು ವಂಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಕಾರಣದಿಂದ ಈ ಬಿಡುಗಡೆ ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ” ಎಂದು ಹೇಳಿದೆ. ಅಲ್ಲದೇ, ಎರಡು ವಾರದೊಳಗೆ ಎಲ್ಲ 11 ಮಂದಿ ಅಪರಾಧಿಗಳು ಪೊಲೀಸರಿಗೆ ಶರಣಾಗುವಂತೆ ಆದೇಶ ನೀಡಿದೆ.
2022ರ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಈ ಆದೇಶವು ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅವರು ಸುಪ್ರೀಂ ಮೆಟ್ಟಿಲೇರಿದ್ದರು.
ಏನಿದು ಪ್ರಕರಣ?
ಇಪ್ಪತ್ತೆರಡು ವರ್ಷಗಳ ಹಿಂದೆ ನಡೆದಿದ್ದ ಗುಜರಾತ್ ಗಲಭೆ ವೇಳೆ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ 11 ಅಪರಾಧಿಗಳನ್ನು ಅವಧಿಪೂರ್ವದಲ್ಲೇ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿದ್ದ ಪ್ರಕರಣ ಇದಾಗಿದೆ.
ಕ್ಷಮಾದಾನದ ಅರ್ಜಿಯನ್ನು ಅಪರಾಧ ನಡೆದ ರಾಜ್ಯದ ನೀತಿಗೆ ಅನುಗುಣವಾಗಿ ಪರಿಗಣಿಸಬೇಕೆ ವಿನಾ ವಿಚಾರಣೆ ನಡೆದ ಸ್ಥಳದಲ್ಲಿನ ನೀತಿಗೆ ಅನುಗುಣವಾಗಿ ಅಲ್ಲ ಎಂದು ಮೇ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಂತೆ ಗುಜರಾತ್ ಸರ್ಕಾರ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿತ್ತು.
ತೀರ್ಪಿಗೆ ಅನುಗುಣವಾಗಿ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದ್ದರೂ ಅಪರಾಧಿಗಳನ್ನು ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ತನ್ನ ಕ್ಷಮಾದಾನ ನೀತಿಯನ್ನು ಅನ್ವಯಿಸಿತ್ತು. ಅದರಂತೆ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ವೇಳೆ ಇವರೆಲ್ಲರನ್ನೂ ಆರತಿ ಎತ್ತಿ, ಸ್ವಾಗತಿಸಲಾಗಿತ್ತು. ಇದು ದೇಶಾದ್ಯಂತ ವ್ಯಾಪಕ ಟೀಕೆಗೂ ಕಾರಣವಾಗಿತ್ತು.
ಜೈಲಿನಲ್ಲಿ 14 ವರ್ಷಗಳನ್ನು ಪೂರ್ಣಗೊಳಿಸಿದ ಕಾರಣ ಮತ್ತು ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿನ ನಡವಳಿಕೆ ಮುಂತಾದ ಅಂಶಗಳಿಂದಾಗಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ಹೇಳಿದ್ದರು.
ಗುಜರಾತ್ ಸರ್ಕಾರದ ನಿರ್ಧಾರವನ್ನು ಬಾನೊ ಸೇರಿದಂತೆ ಹಲವು ಅರ್ಜಿದಾರರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.