ಪ್ರಧಾನಿ ಮೋದಿ ಅವರ ಅತ್ಯಾಪ್ತ, ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯವು ಲಂಚ ಮತ್ತು ವಂಚನೆ ಆರೋಪ ಮಾಡಿದೆ. ಬಂಧನ ವಾರೆಂಟ್ ಹೊರಡಿಸಿದೆ. ಈ ಬೆನ್ನಲ್ಲೇ, ಅದಾನಿ ಗ್ರೂಪ್ ಜೊತೆಗೆ ಮಾಡಿಕೊಳ್ಳಲಾಗಿರುವ ವಿದ್ಯುತ್ ಸರಬರಾಜು ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆ ಆಂಧ್ರ ಪ್ರದೇಶದ ಸರ್ಕಾರವು ಪರಿಶೀಲನೆ ನಡೆಸುತ್ತಿದೆ ಎಂದು ಆಂಧ್ರ ಹಣಕಾಸು ಸಚಿವ ಪಯ್ಯಾವುಲ ಕೇಶವ್ ಹೇಳಿರುವುದಾಗಿ ‘ರಾಯಿಟರ್ಸ್’ ವರದಿ ಮಾಡಿದೆ.
ಹಿಂದಿನ ಆಂಧ್ರ ಸರ್ಕಾರವು ಅದಾನಿ ಗ್ರೂಪ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದಗಳಿಗೆ ಎಂಬಂಧಿಸಿದ ಎಲ್ಲ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಅವುಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡುಬಂದರೆ, ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಯೋಜಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಆಂಧ್ರದಲ್ಲಿ ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಅಪರಾಧ (ಭ್ರಷ್ಟಾಚಾರ) ನಡೆದಿಲ್ಲ ಎಂದಿರುವ ವೈಎಸ್‌ಆರ್ ಕಾಂಗ್ರೆಸ್, ಆರೋಪವನ್ನು ನಿರಾಕರಿಸಿದೆ.
ಭಾರತೀಯ ಅಧಿಕಾರಿಗಳಿಗೆ ಅದಾನಿ 2,029 ಕೋಟಿ ರೂ. ಲಂಚ ನೀಡಿದ್ದಾರೆ. ಆಂಧ್ರಪ್ರದೇಶ ರಾಜ್ಯ ವಿದ್ಯುತ್ ಪ್ರಸರಣ ಕಂಪನಿಗಳಿಗೆ 7 ಗಿಗಾವ್ಯಾಟ್ ಸೌರ ವಿದ್ಯುತ್ ಪೂರೈಕೆ ಮಾಡಲು ಆಂಧ್ರ ಸರ್ಕಾರದೊಂದಿಗೆ ಅದಾನಿ ಗ್ರೂಪ್‌ನ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ. ಬಿಡ್ ಗೆಲ್ಲುವ ಉದ್ದೇಶಕ್ಕಾಗಿ ಅಧಿಕಾರಿಗಳಿಗೆ ಅದಾನಿ ಭಾರೀ ಮೊತ್ತದ ಲಂಚ ನೀಡಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.
ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳಿಂದ ಸೌರ ವಿದ್ಯುತ್ ಸರಬರಾಜು ಗುತ್ತಿಗೆಯನ್ನು ಪಡೆಯಲು 2021 ಮತ್ತು 2022ರ ನಡುವೆ ಭಾರತೀಯ ಅಧಿಕಾರಿಗಳಿಗೆ 2,019 ಕೋಟಿ ರೂ. ಲಂಚ ನೀಡಿದ್ದಾರೆ. ಅದಕ್ಕಾಗಿ, ಅಮೆರಿಕದ ಹೂಡಿಕೆದಾರರಿಗೆ ಸುಳ್ಳು ಹೇಳಿ, ಹಣ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಇತರರ ಐದು ಮಂದಿ ಭಾಗಿಯಾಗಿದ್ದಾರೆ. ಎಂದು ಅಮೆರಿಕದ ‘ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್’ ಆರೋಪಿಸಿದೆ. ಲಂಚ ಮತ್ತು ವಂಚನೆ ಆರೋಪದ ಚಾರ್ಜ್‌ಶೀಟ್ ಸಲ್ಲಿಸಿದೆ.