ಆಪರೇಷನ್ ಸಿಂಧೂರದ ಬಗ್ಗೆ ವಿವರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿದೆ. ಆದರೆ ಈವೆರೆಗೂ ಕೇಂದ್ರ ಸರ್ಕಾರ ಅಧಿವೇಶನ ಕರೆದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದ ಸಂಸತ್ತಿಗೆ ಆಪರೇಷನ್ ಸಿಂಧೂರದ ಬಗ್ಗೆ ಯಾವುದೇ ಮಾಹಿತಿ ನೀಡದೆ ವಿದೇಶಿ ಸರ್ಕಾರಕ್ಕೆ ಮಾಹಿತಿ ನೀಡಿರುವುದು ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರದ ಬಳಿಕ ಪ್ರಮುಖ ದೇಶಗಳಿಗೆ ಸರ್ವಪಕ್ಷ ನಿಯೋಗವನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ನಿಯೋಗವನ್ನು ಕೂಡಾ ರಚಿಸಿದೆ. ಈ ನಿಯೋಗ ರಚನೆಯನ್ನು ಎಡಪಕ್ಷವಾದ ಸಿಪಿಐಎಂ ಸ್ವಾಗತಿಸಿದೆ. ತಮ್ಮ ಪಕ್ಷವೂ ಈ ನಿಯೋಗದ ಭಾಗವಾಗಲು ಬಯಸುತ್ತದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಕೊಪ್ಪಳ | ಪಹಲ್ಗಾಮ್ ಉಗ್ರ ಕೃತ್ಯಕ್ಕೆ ಸಿಪಿಐಎಂಎಲ್ ಖಂಡನೆ
ಆದರೆ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಈ ನಿಯೋಗವನ್ನು ಕಳುಹಿಸುವ ನಿರ್ಧಾರವು ಅಪಾರದರ್ಶಕವಾಗಿದೆ ಎಂದು ಹೇಳಿದೆ. “ಆಪರೇಷನ್ ಸಿಂಧೂರ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ದೇಶಗಳಿಗೆ ಸರ್ವಪಕ್ಷ ನಿಯೋಗಗಳನ್ನು ಕಳುಹಿಸುವ ಸರ್ಕಾರದ ನಿರ್ಧಾರವು ಅಪಾರದರ್ಶಕತೆಯಿಂದ ಕೂಡಿದೆ. ಯಾವುದೇ ರಾಜಕೀಯ ಪಕ್ಷವನ್ನು ಸಮಾಲೋಚಿಸಿಲ್ಲ ಅಥವಾ ವಿವರಿಸಿಲ್ಲ. ಈ ನಿಯೋಗಗಳ ಆದೇಶದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಭಾರತದ ಸ್ವಂತ ಸಂಸತ್ತು ಮತ್ತು ಜನರು ಆಪರೇಷನ್ ಸಿಂಧೂರದ ಬಗ್ಗೆ ಯಾವುದೇ ಮಾಹಿತಿ ತಿಳಿಯದೆಯೇ ಕತ್ತಲೆಯಲ್ಲಿರುವಾಗ ವಿದೇಶಿ ಸರ್ಕಾರಗಳಿಗೆ ವಿವರಿಸಲಾಗುವುದು ಎಂಬುದು ಸ್ವೀಕಾರಾರ್ಹವಲ್ಲ” ಎಂದು ಎಕ್ಸ್‌ನಲ್ಲಿ ಡಿ ರಾಜಾ ಅವರು ಪೋಸ್ಟ್ ಮಾಡಿದ್ದಾರೆ.
1/ The government’s decision to send all-party delegations to key countries, including UNSC members, after Operation Sindoor has been marked by opacity and exclusion. Political parties were neither consulted nor briefed, and there is no clarity on the mandate of these…
— D. Raja (@ComradeDRaja) May 20, 2025
“ಪಹಲ್ಗಾಮ್ ದಾಳಿ ಆದಾಗನಿಂದ ಇಡೀ ದೇಶವು ಭಯೋತ್ಪಾದನೆ ವಿರುದ್ಧ ನಿಂತಿದೆ. ಆದರೂ, ಬಿಜೆಪಿ ಈ ಕ್ಷಣವನ್ನು ಬಳಸಿಕೊಂಡು ವಿಭಜನೆಗಳನ್ನು ಇನ್ನಷ್ಟು ಹೆಚ್ಚಿಸಲು, ರಾಜಕೀಯ ಲಾಭ ಗಳಿಸಲು ಮತ್ತು ಭಿನ್ನಾಭಿಪ್ರಾಯ ಹೊಂದಿರುವವರನ್ನು ನಿಗ್ರಹಿಸಲು ಬಳಸಿಕೊಂಡಿದೆ. ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರ ಬಂಧನ ಅವರ ಮಾತಿಗಾಗಿ ಅಲ್ಲ, ಬದಲಾಗಿ ಅವರ ಗುರುತು ಮತ್ತು ತಾರ್ಕಿಕ ಟೀಕೆಗಾಗಿ ಮಾಡಲಾಗಿದೆ. ಇದು ಅನೇಕ ಅಪಾಯಕಾರಿ ಚಿಹ್ನೆಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಅಭಿಯಾನಕ್ಕೆ ಸಿಪಿಐಎಂ ಬೆಂಬಲ; ವಿಶೇಷ ಸಂಸತ್ ಅಧಿವೇಶನಕ್ಕೆ ಆಗ್ರಹ
“ಒಪ್ಪಂದ ನಿಯಮದ ಬಗ್ಗೆ ಉಂಟಾಗಿರುವ ಗೊಂದಲವನ್ನು ಮತ್ತು ಈ ಒಪ್ಪಂದವನ್ನು ತಾನೇ ಮಾಡಿಸಿದ್ದು ಎಂಬ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಸರ್ಕಾರ ವಿವರಣೆಯನ್ನು ನೀಡಬೇಕು. ಸರ್ಕಾರ ಇನ್ನೂ ಟ್ರಂಪ್ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆಯದಿರುವುದು ಅಥವಾ ಖಂಡಿಸದಿರುವುದು ಆಶ್ಚರ್ಯಕರ” ಎಂದು ಸಿಪಿಐ ನಾಯಕ ಹೇಳಿದ್ದಾರೆ.
“ಬಿಜೆಪಿಯ 11 ವರ್ಷಗಳ ವಿದೇಶಾಂಗ ನೀತಿ ನಿಲುವುಗಳು ಹೆಚ್ಚಿನ ಫಲ ನೀಡಿಲ್ಲ. ಜಿ20 ಶೃಂಗಸಭೆಯ ಬಗ್ಗೆ ಎಲ್ಲಾ ಪ್ರಚಾರವನ್ನು ಮಾಡಿದರೂ ಯಾವುದೇ ಪ್ರಮುಖ ದೇಶವು ಭಾರತದ ಪರವಾಗಿ ಸ್ಪಷ್ಟವಾಗಿ ನಿಂತಿಲ್ಲ. ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಧರ್ಮದ ವಿಚಾರದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ವಿಜಯ್ ಶಾ ಅವರಂತಹ ಬಿಜೆಪಿ ನಾಯಕರು ಸಚಿವರಾಗಿ ಮುಂದುವರೆದಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತೆ ಮಾಡಿದೆ” ಎಂದು ಹೇಳಿದರು.
“ವಿದೇಶಗಳಿಗೆ ಮಾಹಿತಿ ನೀಡುವ ಮೊದಲು ಸರ್ಕಾರ ತಮ್ಮ ದೇಶದ ಜನರಿಗೆ ಮಾಹಿತಿ ನೀಡಬೇಕು, ಗೌರವ ನೀಡಬೇಕು. ಪಾರದರ್ಶಕತೆ, ಒಗ್ಗಟ್ಟು ಮತ್ತು ಘನತೆಯ ಅಗತ್ಯ ಭಾರತಕ್ಕೆ ಇದೆಯೇ ಹೊರತು ದುರಹಂಕಾರ, ಅಪಾರದರ್ಶಕತೆ ಮತ್ತು ಒಡಕು ಬೇಕಾಗಿಲ್ಲ” ಎಂದಿದ್ದಾರೆ.
