ಸುಲಿಗೆ ಪ್ರಕರಣದಲ್ಲಿ ತೆಲಂಗಾಣದ ಬಿಆರ್‌ಎಸ್ ಶಾಸಕ ಪಾಡಿ ಕೌಶಿಕ್ ರೆಡ್ಡಿ ಅವರನ್ನು ಶನಿವಾರ ಮುಂಜಾನೆ ವಾರಂಗಲ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತೆಲಂಗಾಣದ ಹುಜೂರಾಬಾದ್ ಶಾಸಕರಾದ ಕೌಶಿಕ್ ಅವರನ್ನು ಆರ್‌ಜಿಐ ವಿಮಾನ ನಿಲ್ದಾಣದಲ್ಲಿ ಬಂಧಿಸಿ ವಾರಂಗಲ್‌ಗೆ ಕರೆದೊಯ್ಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಬಿಆರ್‌ಎಸ್ ನಾಯಕ ಕೆಟಿಆರ್ ಸೇರಿದಂತೆ 8 ನಾಯಕರಿಗೆ ‘ಗೃಹಬಂಧನ’
ಶಾಸಕ ಕೌಶಿಕ್ ರೆಡ್ಡಿ ಅವರು ಕ್ವಾರಿ ಮಾಲೀಕರನ್ನು ಬೆದರಿಸಿ 25 ಲಕ್ಷ ರೂ. ಪಡೆದಿದ್ದಾರೆ, ಬಳಿಕ ಮತ್ತೆ 50 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ನಮ್ಮ ಶಾಸಕದ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ಇವೆಲ್ಲವನ್ನು ಕಾಂಗ್ರೆಸ್ ಸರ್ಕಾರವೇ ಮಾಡುತ್ತಿದೆ ಎಂದು ಬಿಆರ್‌ಎಸ್ ದೂರಿದೆ. ಸರ್ಕಾರದ ಅಕ್ರಮಗಳನ್ನು ಪ್ರಶ್ನಿಸಿದ ಕಾರಣಕ್ಕೆ ಈ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಕ್ರಮಗಳು, ಸಚಿವರು ಮತ್ತು ಆಡಳಿತಾರೂಢ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಕೌಶಿಕ್ ರೆಡ್ಡಿ ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡಲಾಗುತ್ತಿದೆ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಕೌಶಿಕ್ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
