ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವರಿಷ್ಠೆ ಮಾಯಾವತಿ ಅವರು ಮಂಗಳವಾರ ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಮತ್ತು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಕೆಳಗಿಳಿಸಿದ್ದಾರೆ.
ಈ ಬಗ್ಗೆ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಮಾಯಾವತಿ ಮಾಹಿತಿ ನೀಡಿದ್ದಾರೆ. ಆಕಾಶ್ ಈ ಪಾತ್ರವನ್ನು ನಿರ್ವಹಣೆ ಮಾಡುವಷ್ಟು ‘ಪ್ರಬುದ್ಧತೆ’ಗೆ ತಲುಪಬೇಕು ಎಂದು ಮಾಯಾವತಿ ಹೇಳಿಕೊಂಡಿದ್ದಾರೆ.
BSP chief Mayawati tweets, “I declared Akash Anand as the National Coordinator of BSP and my successor, but in the larger interest of the party and the movement, he is being separated from both these important responsibilities until he attains full maturity” pic.twitter.com/Lpw8W9pdNr
— ANI (@ANI) May 7, 2024
“ಬಿಎಸ್‌ಪಿ, ಒಂದು ಪಕ್ಷ ಮಾತ್ರವಲ್ಲದೆ, ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಕಾನ್ಶಿ ರಾಮ್ ಜಿ ಅವರ ಸಾಮಾಜಿಕ ಬದಲಾವಣೆಗಾಗಿ ಇರುವ ಆಂದೋಲನವಾಗಿದೆ ಎಂಬುದು ತಿಳಿದಿದೆ. ಇದಕ್ಕಾಗಿ ನಾನು ನನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಅದಕ್ಕೆ ವೇಗ ನೀಡಲು ಹೊಸ ಪೀಳಿಗೆಯನ್ನು ಸಹ ಸಿದ್ಧಪಡಿಸಲಾಗುತ್ತಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರಪ್ರದೇಶ | ಈ ಸಲ ಮೈತ್ರಿ ಕೂಟಗಳಿಂದ ಯಾಕೆ ದೂರ ಉಳಿದರು ಮಾಯಾವತಿ?
“ಈ ನಿಟ್ಟಿನಲ್ಲಿ ಪಕ್ಷದಲ್ಲಿ ಇತರ ಜನರನ್ನು ಉತ್ತೇಜಿಸುವ ಜೊತೆಗೆ, ನಾನು ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಮತ್ತು ಅವರ ಉತ್ತರಾಧಿಕಾರಿ ಎಂದು ಘೋಷಿಸಿದ್ದೆ. ಆದರೆ ಈಗ ಆಕಾಶ್ ಪೂರ್ಣ ಪ್ರಬುದ್ಧತೆಯನ್ನು ಪಡೆಯುವವರೆಗೆ ಪಕ್ಷ ಮತ್ತು ಚಳುವಳಿಯ ಹಿತಾಸಕ್ತಿಯಿಂದ ಅವರನ್ನು ಈ ಎರಡೂ ಪ್ರಮುಖ ಜವಾಬ್ದಾರಿಗಳಿಂದ ದೂರ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಆಕಾಶ್ ಅವರ ತಂದೆ ಆನಂದ್ ಕುಮಾರ್ ಅವರು ಪಕ್ಷದಲ್ಲಿ ತಮ್ಮ ಪಾತ್ರದಲ್ಲಿ ಮುಂದುವರಿಯಲಿದ್ದಾರೆ ಎಂದೂ ಮಾಯಾವತಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ
ಕಳೆದ ವರ್ಷ ಡಿಸೆಂಬರ್ 10ರಂದು ಮಾಯಾವತಿ ಅವರು 28 ವರ್ಷದ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಲಂಡನ್‌ನಲ್ಲಿ ಎಂಬಿಎ ಮಾಡಿರುವ ಆನಂದ್‌ಗೆ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆ ನೀಡಲಾಗಿತ್ತು.
ಇನ್ನು ಇತ್ತೀಚೆಗೆ ಆಕಾಶ್ ಆನಂದ್ ವಿರುದ್ಧ ಉತ್ತರ ಪ್ರದೇಶದ ಸೀತಾಪುರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ. ಚುನಾವಣಾ ರ್‍ಯಾಲಿಯಲ್ಲಿ ಭಾಷಣ ಮಾಡುತ್ತಾ ಆಕಾಶ್ ಆನಂದ್, ಬಿಜೆಪಿ ಸರ್ಕಾರವನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿದ್ದರು.