2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಿಹಾರ ರಾಜ್ಯಕ್ಕೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಆ ಮೂಲಕ ವಿರೋಧ ಪಕ್ಷಗಳ ಇತರ ರಾಜ್ಯಗಳ ಸಂಸದರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಬಿಹಾರಕ್ಕೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು, ಪಟ್ನಾ ಐಐಟಿ ವಿಸ್ತರಣೆಗೆ ಅನುದಾನ, 500 ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆಗಳನ್ನು ಘೋಷಿಸುವ ಮೂಲಕ ಬಿಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದು ಕಂಡು ಬಂದಿದೆ.
ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ ಮಾಡಲಾಗುವುದು. ಇದು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣೆಯನ್ನು ಉತ್ತೇಜಿಸುತ್ತದೆ. ಇದರಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಪರಿಚಯ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಎನ್‌ಡಿಎ ಪ್ರಮುಖ ಪಾಲುದಾರ ಪಕ್ಷವಾಗಿರುವ ಸಂಯುಕ್ತ ಜನತಾದಳ ಬಿಹಾರದ ಪ್ರಗತಿ ನಿಟ್ಟಿನಲ್ಲಿ ಹಲವು ಬೇಡಿಕೆಗಳನ್ನು ಮಂಡಿಸಿದ್ದು, ಅದರಂತೆಯೇ ಬಜೆಟ್‌ನಲ್ಲಿ ಆದ್ಯತೆಯನ್ನು ನೀಡಿದಂತೆ ಕಾಣುತ್ತಿದೆ. ಬಿಹಾರ ರಾಜ್ಯ ಮೂಲದ ಮಧುಬನಿ ಕಲೆಯ ಹಿನ್ನೆಲೆ ಹೊಂದಿರುವ ವಿಶೇಷ ಸೀರೆಯನ್ನು ಉಟ್ಟು ಬಜೆಟ್ ಮಂಡನೆಗೆ ಆಗಮಿಸಿದ ನಿರ್ಮಲಾ ಅವರ ಪ್ರತಿ ವಿಷಯಗಳ ಮಂಡನೆಯಲ್ಲಿ ಬಿಹಾರದ ಹೆಸರು ಉಲ್ಲೇಖವಾಗುತ್ತಿರುವುದು ಕಂಡು ಬಂದಿತು.
ಈ ವರ್ಷದ ಕೊನೆಯಲ್ಲಿ, ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಇದರ ಹಿಂದೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ, ಮತದಾರರನ್ನು ಓಲೈಕೆ ಮಾಡುವುದಾಗಿದೆ ಎಂದು ವಿರೋಧ ಪಕ್ಷಗಳ ಸಂಸದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.