- 14ನೇ ಆಯವ್ಯಯ ಮಂಡಿಸುವ ಮೂಲಕ ಚರಿತ್ರಾರ್ಹ ದಾಖಲೆ ನಿರ್ಮಿಸಿದ ಸಿಎಂ
- ಒಟ್ಟು 3,27,747 ಕೋಟಿ ರೂ. ವೆಚ್ಚದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ
2018ರ ಫೆಬ್ರವರಿಯಲ್ಲಿ 13ನೇ ಆಯವ್ಯಯ ಮಂಡಿಸಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದಾಖಲೆ ಸರಿಗಟ್ಟಿದ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ (ಜು.7) 14ನೇ ಆಯವ್ಯಯ ಮಂಡಿಸುವ ಮೂಲಕ ಚರಿತ್ರಾರ್ಹ ದಾಖಲೆ ನಿರ್ಮಿಸಿದರು.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯ ಅಧಿವೇಶನದಲ್ಲಿ 12.7ಕ್ಕೆ ಮಂಡಿಸಲು ಆರಂಭಿಸಿ, 128 ಪುಟಗಳ ಆಯವ್ಯಯವನ್ನು ಬರೊಬ್ಬರಿ 169 ನಿಮಿಷ (2 ಗಂಟೆ 49ನಿಮಿಷ) ಓದುವ ಮೂಲಕ ರಾಜ್ಯ ಬಜೆಟ್ ಮಂಡಿಸಿದರು.
2023-24ನೇ ಸಾಲಿನಲ್ಲಿ ಒಟ್ಟು 2,50,933 ಕೋಟಿ ರೂ.ಗಳ ರಾಜಸ್ವ ವೆಚ್ಚ. 54,374 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು 3,27,747 ಕೋಟಿ ರೂ. ವೆಚ್ಚದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ.
2023-24ನೇ ಸಾಲಿನಲ್ಲಿ ರಾಜಸ್ವ ಜಮೆಗಳು 2,38,410 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಜಿ.ಎಸ್.ಟಿ, ಪರಿಹಾರ ಒಳಗೊಂಡಂತೆ 1,75,653 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ.
ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂ.ಗಳನ್ನು ಹಾಗೂ 13,005 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 85,818 ಕೋಟಿ ರೂ.ಗಳ ಒಟ್ಟು ಸಾಲಗಳು, 23 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 228 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ಜಮೆಗಳು 3,24,478 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.