ಬಡವರ ಮೇಲೆ ಹೆಚ್ಚಿನ ಭಾರ ಹೇರುವ ಅಪ್ರತ್ಯಕ್ಷ-ಪ್ರತಿಗಾಮಿ ಜಿಎಸ್ಟಿಯಲ್ಲಿನ ಸಂಗ್ರಹವನ್ನು ತನ್ನ ʼಅದ್ಭುತ ಸಾಧನೆ’ ಎನ್ನುವ ರೀತಿಯಲ್ಲಿ ವಿತ್ತ ಮಂತ್ರಿ ಪರಿಗಣಿಸುತ್ತಿದ್ದಾರೆ.
ಭಾರತ ಒಕ್ಕೂಟ ಸರ್ಕಾರ ಮಂಡಿಸಿರುವ 2024-25ರ ಬಜೆಟ್ಟು ಖುಲ್ಲಂಖುಲ್ಲಾ ಬಂಡವಾಳಿಗರಿಗೆ, ಕಾರ್ಪೋರೇಟುಗಳಗೆ, ಉಳ್ಳವರಿಗೆ ವರವಾಗಿದೆ; ಆದರೆ ದೇಶದ ಕೂಲಿಕಾರರಿಗೆ, ಅಸಂಘಟಿತ ವಲಯದ ದುಡಿಮೆಗಾರರಿಗೆ, ಗ್ರಾಮೀಣವಾಸಿ ರೈತಾಪಿಗಳಿಗೆ, ಮನೆವಾರ್ತೆ ಕೆಲಸಗಾರರಿಗೆ ಇದು ಶಾಪವಾಗಿದೆ. ಇದಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.
ನಮ್ಮ ಆರ್ಥಿಕತೆಯ ಮೂಲ ಸಮಸ್ಯೆಯಾದ ಸಮಗ್ರ ಬೇಡಿಕೆಯನ್ನು ಬಜೆಟ್ಟು ಬಲಪಡಿಸುತ್ತಿಲ್ಲ. ಬದಲಾಗಿ ಇದು ಪೂರೈಕೆ-ಪ್ರಧಾನ ಬಜೆಟ್ಟಾಗಿದೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಅರ್ಥಶಾಸ್ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಹೇಳುತ್ತಿರುವಂತೆ ಭಾರತ ಆರ್ಥಿಕತೆ ಅಭಿವೃದ್ಧಿಗೆ ಕಂಟಕವಾಗಿರುವ ಸಂಗತಿ ಸಮಗ್ರ ಬೇಡಿಕೆಯು ದುರ್ಬಲವಾಗಿರುವುದು. ಆದರೆ ಈ ಬಜೆಟ್ಟಿನಲ್ಲಿ ಉತ್ಪಾದನೆ, ಬಂಡವಾಳ, ಕಾರ್ಪೋರೇಟುಗಳು, ಬಂಡವಳಿಗರು- ಒಟ್ಟಾರೆ ಉಳ್ಳವರಿಗೆ ಅಗತ್ಯವಾದ ಪೂರೈಕೆ ಆರ್ಥಿಕ ನೀತಿಗೆ ಆದ್ಯತೆಯನ್ನು ನೀಡಲಾಗಿದೆ.
ಸಮಗ್ರ ಬೇಡಿಕೆಯು ಏಕೆ ದುರ್ಬಲವಾಗಿದೆ?
ಇದಕ್ಕೆ ಒಂದು ಮುಖ್ಯ ಕಾರಣ ಕುಟುಂಬದ ಹಣಕಾಸು ಉಳಿತಾಯ ಕಳೆದ 10 ವರ್ಷಗಳಲ್ಲಿ ತೀವ್ರವಾಗಿ ಕುಸಿದಿದೆ. ಇದನ್ನು ರಿಸರ್ವ್ ಬ್ಯಾಂಕು ತನ್ನ ಇತ್ತೀಚಿಗಿನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಇದಕ್ಕೆ ಪ್ರತಿಯಾಗಿ ಕುಟುಂಬಗಳ ಋಣದ ಪ್ರಮಾಣ ಕಳೆದ 3-4 ವರ್ಷಗಳಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಉದಾ: ಒಟ್ಟು ಉಳಿತಾಯವು 2009-10ರಲ್ಲಿ ಜಿಡಿಪಿಯ ಶೇ. 36 ರಷ್ಟಿದ್ದುದು 2022-23ರಲ್ಲಿ ಇದು ಶೇ. 30ಕ್ಕಿಳಿದಿದೆ. ಕುಟುಂಬ ಹಣಕಾಸು ಉಳಿತಾಯವು ಇದೇ ಅವಧಿಯಲ್ಲಿ ಶೇ. 24.8 ರಿಂದ ಶೇ. 18.4ಕ್ಕೆ ಇಳಿದಿದೆ. ಇದರಿಂದಾಗಿ ಜನರ ಅನುಭೋಗ ವೆಚ್ಚ ನೆಲ ಕಚ್ಚಿದೆ. ಆದರೆ ಕುಟುಂಬಗಳ ಋಣದ ಪ್ರಮಾಣವು 2023-24ರಲ್ಲಿ ಜಿಡಿಪಿಯ ಶೇ. 3.1 ರಷ್ಟಿದ್ದುದು 2022-23ರಲ್ಲಿ ಇದು ಶೇ. 5.7ಕ್ಕೇರಿದೆ. ಸಮಗ್ರ ಬೇಡಿಕೆಯ ಕೊರತೆಯ ಮೂಲ ಇಲ್ಲಿದೆ.
ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಪ್ರಕಟಿಸಿರುವ ‘ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024’ರ ಪ್ರಕಾರ ಭಾರತದಲ್ಲಿರುವ ಕಾರ್ಮಿಕರ ಸಂಖ್ಯೆ 59 ಕೋಟಿ. ಇದರಲ್ಲಿ ಶೇ. 90 ರಷ್ಟು ಅಸಂಘಟಿತ ವಲಯದಲ್ಲಿದ್ದಾರೆ. ಈ ವಲಯದ ಕಾರ್ಮಿಕರಿಗೆ ಯಾವುದೇ ಭದ್ರತೆ-ವಿಮೆಯಿಲ್ಲ. ಉದ್ಯೋಗ ಹಂಗಾಮಿ, ಇದು ಖಾಯಂ ಆದುದಲ್ಲ. ಪಿಂಚಣಿಯಿಲ್ಲ. ಆರೋಗ್ಯ ಸೇವೆ ಅನುಕೂಲವಿಲ್ಲ. ಈ ವರ್ಗವನ್ನು 2024-25ರ ಬಜೆಟ್ಟು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಉದಾ: ನಿರ್ಮಲಾ ಸೀತಾರಾಮನ್ ಅವರು ಬಜೆಟ್ಟಿನಲ್ಲಿ ನಾಲ್ಕು ಗುಂಪುಗಳನ್ನು ನಮ್ಮ ಆದ್ಯತೆ ಎಂದು ಘೋಷಿಸಿದ್ದಾರೆ. ಅವು: ಅನ್ನಧಾತ, ಗರೀಬ್, ಯುವ ಮತ್ತು ಮಹಿಳೆ. ಈ ಆದ್ಯತೆಯ ಗುಂಪಿನಲ್ಲಿ ಆರ್ಥಿಕತೆಯ ಬೆನ್ನೆಲುಬಾದ ಮತ್ತು ಉತ್ಪಾದನೆಯ ಮೂಲದ್ರವ್ಯವಾದ ಕಾರ್ಮಿಕ ವರ್ಗ ಗೈರಾಗಿದೆ ಅಥವಾ ಉದ್ದೇಶಪೂರ್ವಕವಾಗಿ ಅವರನ್ನು ಮೂಲೆಗುಂಪು ಮಾಡಲಾಗಿದೆ.
ಆರ್ಥಿಕತೆಯಲ್ಲಿ ನಿರುದ್ಯೋಗವು ಅತ್ಯಧಿಕಮಟ್ಟದಲ್ಲಿದೆ. ಒಂದು ಅಂದಾಜಿನ ಪ್ರಕಾರ ನಿರುದ್ಯೋಗವು ಕಳೆದ ಐವತ್ತು ವರ್ಷಗಳಲ್ಲಿ ಇದು ಅತ್ಯಧಿಕ ಎನ್ನಲಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಇಐ) ಪ್ರಕಾರ ಜೂನ್ 2024ರಲ್ಲಿನ ನಿರುದ್ಯೋಗದ ಪ್ರಮಾಣ ಶೇ. 9.2 ಮಹಿಳೆಯರಲ್ಲಿ ಇದು ಶೇ. 18.5 ರಷ್ಟಿದೆ. 18ನೆಯ ಲೋಕಸಭೆ ಚುನಾವಣೆಯಲ್ಲಿ ಜನರು ಬೆಲೆ ಏರಿಕೆ ಮತ್ತು ನಿರುದ್ಯೋಗ ಮುಖ್ಯ ಸಮಸ್ಯೆಗಳು ಎಂಬುದನ್ನು ಎತ್ತಿ ತೋರಿದ್ದಾರೆ. ಈ ಸಮಸ್ಯೆಗಳಿಗೆ ಕ್ರಮ ಜರುಗಿಸಿದ ಮತದಾರರು ಬಿಜೆಪಿಗೆ ಬಹುಮತ ಬಾರದಂತೆ ನೋಡಿಕೊಂಡಿದ್ದಾರೆ.
ಚುನಾವಣೆಯ ಫಲಿತಾಂಶದಿಂದ ಪಾಠ ಕಲಿಯದದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ನೇರವಾಗಿ – ಪ್ರತ್ಯಕ್ಷವಾಗಿ ಯುವಕರಿಗೆ-ಯುವತಿಯರಿಗೆ ಉದ್ಯೋಗ ನೀಡುವಂತಹ ಒಂದೂ ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಲ್ಲಿ ರೂಪಿಸಲಿಲ್ಲ. ಇದಕ್ಕೆ ಪ್ರತಿಯಾಗಿ ಉದ್ಯೋಗ ಕಾರ್ಯಕ್ರಮಗಳು ಎಂದು ಹೇಳಿ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಅವೆಲ್ಲವೂ ಒಂದೋ ಸ್ವಯಂ ಉದ್ಯೋಗದ ಅಥವಾ ಬ್ಯಾಂಕು ಸಾಲದ, ಸರ್ಕಾರದ ಸಬ್ಸಿಡಿ ಕಾರ್ಯಕ್ರಮಗಳಾಗಿವೆಯೇ ವಿನಾ ನೇರವಾಗಿ ಉದ್ಯೋಗ ನೀಡುವ ಕಾರ್ಯಕ್ರಮಗಳಾಗಿಲ್ಲ. ಅವೆಲ್ಲವೂ ಉದ್ಯಮಪತಿಗಳಿಗೆ-ಕಾರ್ಪೋರೇಟುಗಳಿಗೆ ಮಣೆ ಹಾಕುವ ಕಾರ್ಯಕ್ರಮಗಳಾಗಿವೆ.
ಉದಾ:2024-25ರ ಬಜೆಟ್ಟಿನಲ್ಲಿ “ಎಂಪ್ಲಾಯ್ಮೆಂಟ್ ಲಿಂಕ್ಡ್ ಎನ್ಸೆಂಟಿವ್ ಫಾರ್ ಎಂಪ್ಲಾರ್ಸ್” ಎಂಬ ಕಾರ್ಯಕ್ರಮಕ್ಕೆ ರೂ.1.45 ಲಕ್ಷ ಕೋಟಿ ಅನುದಾನ ನೀಡಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಕಾರ್ಯಕ್ರಮ ಎನ್ನುವುದು ಈಗಾಗಲೇ ಜಾರಿಯಲ್ಲಿದೆ. ಇಲ್ಲಿ ನೇರವಾಗಿ ಉದ್ಯೋಗ ನೀಡುವ ಕ್ರಮವಿಲ್ಲ. ಇವೆಲ್ಲವೂ ಬಂಡವಾಳಿಗರನ್ನು ಓಲೈಸುವ ಕಾರ್ಯಕ್ರಮಗಳಾಗಿವೆ.
ಇದನ್ನೂ ಓದಿ ಬಜೆಟ್ ವಿಶ್ಲೇಷಣೆ | ಒಕ್ಕೂಟ ಆಯವ್ಯಯದಲ್ಲಿ ಶಿಕ್ಷಣದ ಮೂಲಭೂತ ಹಕ್ಕಿನ ಪ್ರಸ್ತಾವನೆಯೇ ಇಲ್ಲ !
ಬೆಲೆ ಏರಿಕೆಯಿಂದ, ಮುಖ್ಯವಾಗಿ ಆಹಾರ ಹಣದುಬ್ಬರದಿಂದ ಕೂಲಿಕಾರರು, ಸಣ್ಣ-ಅತಿಸಣ್ಣ ರೈತರು, ಭೂರಹಿತ ಕಾರ್ಮಿಕರು, ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುವವರು, ಬೀದಿಬದಿಯಲ್ಲಿ ಅಂಗಡಿ ಇಟ್ಟವರು, ತಲೆಯ ಮೇಲೆ ಹೊತ್ತು ಮಾರಾಟ ಮಾಡುವವರು, ಡೊಮೆಸ್ಟಿಕ್ ವರ್ಕರ್ ಮುಂತಾದ ದುಃಸ್ಥಿತಿಯ ಅಂಚಿನಲ್ಲಿರುವ ವರ್ಗಗಳ ಬದುಕು ಮೂರಾಬಟ್ಟೆಯಾಗಿದೆ. ಇವರಾರಿಗೂ ಬಜೆಟ್ಟಿನಲ್ಲಿ ಅವಕಾಶ-ಸ್ಥಾನ ದೊರೆತಿಲ್ಲ. ಒಟ್ಟು ಬೆಲೆ ಏರಿಕೆಯು(ಸಿಪಿಐ) ಶೇ 5.9ರಷ್ಟಿದೆ. ಆದರೆ ಆಹಾರ ಬೆಲೆಗಳಲ್ಲಿನ ಏರಿಕೆಯು ಶೇ 9.4 ರಷ್ಟಿದೆ. ಆಹಾರ ಹಣದುಬ್ಬರವನ್ನು ನಿಯಂತ್ರಿಸದೆ ಒಟ್ಟು ಹಣದುಬ್ಬರವನ್ನು ತಡೆಯುವುದು ಸಾಧ್ಯವಿಲ್ಲ. ಏಕೆಂದರೆ ಒಟ್ಟು ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ ಆಹಾರ ಪದಾರ್ಥಗಳ ಪಾಲು ಶೇ. 40ಕ್ಕಿಂತ ಅಧಿಕವಾಗಿದೆ. ಈ ವಿಷಯದಲ್ಲಿ ಬಜೆಟ್ ಯಾವ ಗಂಭೀರವಾದ ಕ್ರಮಗಳನ್ನು ತೆಗೆದುಕೊಂಡಿಲ್ಲ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮತ್ತು ಸಾಮಾನ್ಯ ಸಂದರ್ಭದಲ್ಲಿಯೂ ಗ್ರಾಮೀಣ ಕಡುಬಡವರ, ಕೂಲಿಕಾರರ, ಭೂರಹಿತರ ಬದುಕನ್ನು ಒಂದು ಇತಿಮಿತಿಯಲ್ಲಿ ಸಂರಕ್ಷಿಸಿದ್ದು ಮನ್ರೇಗಾ ಕಾರ್ಯಕ್ರಮ. ಆದರೆ ಇದನ್ನು ‘ಮಾನ್ಯಮೆಂಟಲ್ ಫೈಲ್ಯೂರ್’ ಎಂದು ಕರೆದ ಮೋದಿ ಅವರು 2014ರಿಂದಲೂ ಇದರ ಬಗ್ಗೆ ಅಸಡ್ಡೆಯನ್ನು ತೋರುತ್ತಾ ಬಂದಿದ್ದಾರೆ. ಹಿಂದಿನ ಬಾಕಿಯನ್ನು ಸೇರಿಸಿಕೊಂಡು 2023-24ರಲ್ಲಿ ಮನ್ರೇಗಾದ ವೆಚ್ಚ ರೂ. 1.2 ಲಕ್ಷ ಕೋಟಿ. ಅದಕ್ಕೆ 2024-25ರಲ್ಲಿ ನೀಡಿರುವ ಅನುದಾನ ರೂ. 86,000 ಕೋಟಿ.
ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ಅನಂತ್ ನಾಗೇಶ್ವರನ್ ಅವರು ಮನ್ರೇಗಾ ಬಗ್ಗೆ ಒಂದು ಅದ್ಭುತ ಸಂಶೋಧನೆ ಮಾಡಿದ್ದಾರೆ. ಅವರ ಪ್ರಕಾರ ಮನ್ರೇಗಾಕ್ಕೆ ರಾಜ್ಯಗಳಲ್ಲಿನ ಹೆಚ್ಚಿನ ಬೇಡಿಕೆಯು ಕಡುಬಡತನದ ಸೂಚಿಯಲ್ಲವಂತೆ. ಏಕೆಂದರೆ ಅವರ ಪ್ರಕಾರ ಬಡತನವು ಕಡಿಮೆಯಿರುವ ಕೇರಳ, ತಮಿಳುನಾಡುಗಳಲ್ಲಿ ಇದರ ವೆಚ್ಚ ಅಧಿಕವಾಗಿದೆ. ಆದರೆ ಬಹುಮುಖಿ ಬಡತನವು ಶೇ. 40ಕ್ಕಿಂತ ಅಧಿಕವಾಗಿರುವ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಇದರ ವೆಚ್ಚವು ಅತ್ಯಂತ ಕೆಳಮಟ್ಟದಲ್ಲಿದೆ. ಆದ್ದರಿಂದ ಬಡತನಕ್ಕೂ ಮತ್ತು ಮನ್ರೇಗಾ ವೆಚ್ಚಕ್ಕೂ ನೇರ ಅನುಲೋಮ ಸಂಬಂಧವಿಲ್ಲ ಎಂಬುದು ಅವರ ಸಂಶೋಧನೆ. ಈ ಆಧಾರದ ಮೇಲೆ ಅವರು ಮನ್ರೇಗಾಕ್ಕೆ ಅನುದಾನ ಕಡಿತವನ್ನು ಸಮರ್ಥಿಸುತ್ತಿರುವಂತೆ ಕಾಣುತ್ತದೆ. ಈ ಬಗ್ಗೆ ಇವರ ಚಿಂತನೆಯ ಕ್ರಮವೇ ಅಸಂಬದ್ಧವಾಗಿದೆ.

ಬಡತನ, ಹಸಿವು, ಅಪೌಷ್ಟಿಕತೆ, ಜನಸಂಖ್ಯೆ ಆ ಬೆಳವಣಿಗೆ ನಿಯಂತ್ರಣ ಮುಂತಾದವುಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಯನ್ನು ನಿರ್ವಹಿಸಿದ್ದರಿಂದಲೇ ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ಬಡತನವು ಅತ್ಯಂತ ಕೆಳಮಟ್ಟದಲ್ಲಿದೆ. ಆದರೆ ಉತ್ತರ ಭಾರತದ ಹಿಂದಿ ಬೆಲ್ಟಿನ ರಾಜ್ಯಗಳಲ್ಲಿ ಅಭಿವೃದ್ಧಿಯನ್ನು ನಿರ್ವಹಿಸುವ ಸಾಂಸ್ಥಿಕ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ. ಮನ್ರೇಗಾದ ಬಗ್ಗೆ ವಿಕೃತಿಯನ್ನು ಸಾರುವುದಕ್ಕೆ ಪ್ರತಿಯಾಗಿ ಅದರ ಅಗತ್ಯ-ಮಹತ್ವ ಮತ್ತು ಸಾಧನೆಯ ಬಗ್ಗೆ ಗಮನ ನೀಡುವುದಕ್ಕೆ ಪ್ರತಿಯಾಗಿ ಅದನ್ನು ಅಲ್ಲಗಳೆಯುವ ಬಜೆಟ್ ಬಡವರ ಪರವಾಗಿಲ್ಲ.
ಮೇಲಾಗಿ ಕಳೆದ ನಾಲ್ಕಾರು ವರ್ಷಗಳಿಂದ ಮನ್ರೇಗಾದಂತಹ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶದಲ್ಲಿಯೂ ಅರಂಭಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಇದರ ಬಗ್ಗೆ 2024-25ರ ಬಜೆಟ್ಟಿನಲ್ಲಿ ಯಾವುದೇ ಚರ್ಚೆಯಿಲ್ಲ. ಸಮಗ್ರ ಬೇಡಿಕೆಯು ನೆಲ ಕಚ್ಚಿರುವುದಕ್ಕೆ ಇದು ಒಂದು ಕಾರಣ.
ಈ ಬಜೆಟ್ಟಿನ ತೆರಿಗೆ ವಿಷಯಕ್ಕೆ ಬಂದರೆ ಮೋದಿ ಸರ್ಕಾರವು ಇಲ್ಲಿ ಉಳ್ಳವರನ್ನು ಓಲೈಸುವ ಮತ್ತು ಉಳಿದವರನ್ನು ಹತ್ತಿಕ್ಕುವ ನೀತಿಯನ್ನು ಅನುಸರಿಸುತ್ತಿದೆ. ಈ ಬಜೆಟ್ಟಿನಲ್ಲಿ ನೇರವಾಗಿಯೇ ವಿತ್ತ ಮಂತ್ರಿ ಅವರು ‘ಬಂಡವಾಳ ಹೂಡಿಕೆಯನ್ನು ಉತ್ತಮಪಡಿಸುವುದಕ್ಕಾಗಿ ಕಾರ್ಪೋರೇಟ್ ತೆರಿಗೆಯಲ್ಲಿ ಕಡಿತ ಮಾಡುತ್ತಿದ್ದೇವೆ’ ಎನ್ನುತ್ತಾರೆ. ಆರ್ಥಿಕತೆಯ ಒಟ್ಟು ತೆರಿಗೆ ರಾಶಿಯಲ್ಲಿ ಕಾರ್ಪೋರೇಟ್ ತೆರಿಗೆಯ ಪ್ರಮಾಣ ಶೇ. 17ರಷ್ಟಿದ್ದರೆ ಅಪ್ರತ್ಯಕ್ಷ-ಪ್ರತಿಗಾಮಿ ತೆರಿಗೆಯಾದ ಜಿಎಸ್ಟಿ ಕೊಡುಗೆಯು ಶೇ. 18ರಷ್ಟಿದೆ. ತೆರಿಗೆ ಕಡಿತ, ತೆರಿಗೆ ವಿನಾಯಿತಿ, ಸಬ್ಸಿಡಿ ನೀಡುತ್ತಿದ್ದರೂ ಆರ್ಥಿಕತೆಯಲ್ಲಿ ಖಾಸಗಿ ಬಂಡವಾಳ ಹೂಡಿಕೆಯು ನಿರೀಕ್ಷಿಸಿದ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ಬಡವರ ಮೇಲೆ ಹೆಚ್ಚಿನ ಭಾರ ಹೇರುವ ಅಪ್ರತ್ಯಕ್ಷ-ಪ್ರತಿಗಾಮಿ ಜಿಎಸ್ಟಿಯಲ್ಲಿನ ಸಂಗ್ರಹವನ್ನು ‘ತನ್ನ ಅದ್ಭುತ ಸಾಧನೆ’ ಎನ್ನುವ ರೀತಿಯಲ್ಲಿ ಅದನ್ನು ವಿತ್ತ ಮಂತ್ರಿ ಅವರು ಪರಿಗಣಿಸುತ್ತಿದ್ದಾರೆ. ಬಡವರ, ಕೂಲಿಕಾರರ, ಕಾರ್ಮಿಕರ, ಮಹಿಳೆಯರ ರಕ್ತಹೀರುವ ತೆರಿಗೆ ಜಿಎಸ್ಟಿ.
ಮೋದಿ ಸರ್ಕಾರವು ವಾಡಿಕೆಯಂತೆ ಒಕ್ಕೂಟ ತತ್ವವನ್ನು ದಿಕ್ಕರಿಸುವ ದಾರ್ಷ್ಟ್ಯವನ್ನು 2024-25ರ ಬಜೆಟ್ಟಿನಲ್ಲಿಯೂ ಮುಂದುವರಿಸಿದ್ದಾರೆ. 15ನೆಯ ಹಣಕಾಸು ಆಯೋಗವು ಕರ್ನಾಟಕಕ್ಕೆ ವಿಶೇಷ ಅನುದಾನ ರೂ.5495 ಕೋಟಿಯನ್ನು ಶಿಫಾರಸ್ಸು ಮಾಡಿತ್ತು. ಅದನ್ನು ಇದುವರೆವಿಗೂ ವಿತ್ತ ಮಂತ್ರಿ ನೀಡಿಲ್ಲ.
ಬೆಂಗಳೂರು ನಗರದ ರಸ್ತೆ ಜಾಲ ಮತ್ತು ಜಲ ಮೂಲಗಳ ಸಂರಕ್ಷಣೆಗಾಗಿ ಅದು ಶಿಫಾರಸ್ಸು ಮಾಡಿದ್ದ ರೂ. 6000 ಕೋಟಿಯನ್ನೂ ಇನ್ನೂ ನೀಡಿಲ್ಲ. ಮೇಲಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಆಶ್ವಾಸನೆ ನೀಡಿದ್ದ ರೂ. 5000ಕೋಟಿಯನ್ನೂ ನೀಡಿಲ್ಲ. ಕರ್ನಾಟಕವನ್ನು ಪ್ರತಿನಿಧಿಸುವ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ನ್ಯಾಯ ನೀಡುತ್ತಿಲ್ಲ. ಒಕ್ಕೂಟದ ತೆರಿಗೆ ರಾಶಿಯಲ್ಲಿ ರಾಜ್ಯಗಳಿಗೆ ಹಣವನ್ನು ವರ್ಗಾವಣೆ ಮಾಡಬೇಕು. ಅದರಂತೆ 2024-25ರಲ್ಲಿ ಉತ್ತರ ಭಾರತದ ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಗೆ ನೀಡುತ್ತಿರುವ ಪಾಲು ರೂ. 522243 ಕೋಟಿ. ಇದು ಒಟ್ಟು ವರ್ಗಾವಣೆಯ ಶೇ. 41.87ರಷ್ಟಾಗುತ್ತದೆ. ಆದರೆ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ನೀಡುತ್ತಿರುವ ತೆರಿಗೆ ರಾಶಿಯಲ್ಲಿ ಪಾಲು ರೂ.197056 ಕೋಟಿ. ಇದು ಒಟ್ಟು ವರ್ಗಾವಣೆಯ ಶೇ. 15.79ಷ್ಟಾಗುತ್ತದೆ. ರಾಜ್ಯದ/ದೇಶದ ಒಂದು ಅತ್ಯಂತ ಹಿಂದುಳಿದ ಜಿಲ್ಲೆ ರಾಯಚೂರು. ಇಲ್ಲಿಗೆ ಆಶ್ವಾಸನೆ ನೀಡಿದಂತೆ ಎಐಐಎಂಎಸ್ ವೈದ್ಯಕೀಯ ಸಂಸ್ಥೆಯನ್ನು ಬಜೆಟ್ಟಿನಲ್ಲಿ ಘೋಷಿಸಿಲ್ಲ. ಈ ಜಿಲ್ಲೆಯನ್ನು ‘ಆಸ್ಪಿರೇಷನಲ್ ಡಿಸ್ಟ್ರಿಕ್ಟ್’ ಎಂದು ನೀತಿ ಆಯೋಗ ಬಹಳ ಹಿಂದೆಯೇ ಘೋಷಿಸಿದೆ. ಆದರೆ ಇದಕ್ಕೆ ವಿತ್ತ ಮಂತ್ರಿ ನ್ಯಾಯ ಒದಗಿಸುತ್ತಿಲ್ಲ.
ಒಟ್ಟಾರೆ 2024-25ರ ಒಕ್ಕೂಟ ಬಜೆಟ್ಟು ಬಂಡವಳಿಗರ-ಕಾರ್ಪೋರೇಟುಗಳ, ಆದಾನಿ-ಅಂಬಾನಿಗಳ ಪರವಾಗಿದೆಯೇ ವಿನಾ ಬಡವರ, ಹಸಿದವರ, ಕೂಲಿಕಾರರ, ಕಾರ್ಮಿಕರ, ರೈತರ ಪರವಾಗಿಲ್ಲ. ಕುಟುಂಬ ಉಳಿತಾಯದಲ್ಲಿ ಕುಸಿತ, ಆಹಾರ ಹಣದುಬ್ಬರ, ನಿರುದ್ಯೋಗ, ಏರಿಕೆಯಾಗುತ್ತ್ತಿರುವ ಕುಟುಂಬಗಳ ಋಣ ಬಾರ, ಅಪ್ರತ್ಯಕ್ಷ ತೆರಿಗೆಗಳ ಹೆಚ್ಚಿನ ಬಾರ ಮುಂತಾದವುಗಳಿದ ನಮ್ಮ ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆಯು ಅತ್ಯಂತ ಕೆಳಮಟ್ಟದಲ್ಲಿದೆ. ಇದನ್ನು ಸರಿಪಡಿಸುವ ಬಗ್ಗೆ ಬಜೆಟ್ಟಿನಲ್ಲಿ ಯಾವ ಪರಿಹಾರವೂ ಪ್ರಕಟವಾಗಿಲ್ಲ. ಜನರ ಅನುಭೋಗವನ್ನು ಸಮೃದ್ಧಗೊಳಿಸುವ ಕ್ರಮಗಳು ಬಜೆಟ್ಟಿನಲ್ಲಿಲ್ಲ. ಈ ಬಜೆಟ್ಟನ್ನು “ಬಂಡವಾಳಕ್ಕೆ-ಬಂಡವಾಳಿಗರಿಗೆ ಒತ್ತು: ಬಡವರಿಗೆ-ಕೂಲಿಕಾರರಿಗೆ ಕುತ್ತು’ ಎಂದು ಕರೆಯಬಹುದು.

ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು