ಜುಲೈ 27 ರಂದು ದೆಹಲಿಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಖಚಿತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಪಕ್ಷಪಾತ ಮತ್ತು ರಾಜ್ಯಗಳನ್ನು ವಿಭಜಿಸುವ ಪಿತೂರಿ ವಿರುದ್ಧ ಪ್ರತಿಭಟಿಸಲು ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ 2 ರಾಜ್ಯಗಳಿಗೆ (ಆಂಧ್ರ ಮತ್ತು ಬಿಹಾರ) ಮಾತ್ರವೇ ಆಧ್ಯತೆ ನೀಡಲಾಗಿದೆ. ಉಳಿದ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯನ್ನು ‘ಬಾಯ್‌ಕಾಟ್’ ಮಾಡಿದ್ದು, ಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ. ಮಮತಾ ಕೂಡ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರು ಸಭೆಗೆ ತೆರಳುವುದಾಗಿ ತಿಳಿಸಿದ್ದಾರೆ.
ದೆಹಲಿಗೆ ಹೊರಡುವ ಮೊದಲು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, “ಸಭೆಯಲ್ಲಿ ಭಾಗವಹಿಸುತ್ತೇನೆ. ‘ತಾರತಮ್ಯ ಬಜೆಟ್’ ಮತ್ತು ‘ಬಂಗಾಳ ಸೇರಿದಂತೆ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ವಿಭಜಿಸುವ ಪಿತೂರಿ’ ವಿರುದ್ಧ ಸಭೆಯಲ್ಲಿ ಪ್ರತಿಭಟನೆ ನಡೆಸುತ್ತೇನೆ. ನನ್ನ ಪ್ರತಿಭಟನೆಯನ್ನು ದಾಖಲಿಸಲು ಸಭೆಯ ಅವಕಾಶವನ್ನು ಬಳಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
‘‘ಸಭೆಯಲ್ಲಿ ಸ್ವಲ್ಪ ಹೊತ್ತು ಮಾತ್ರವೇ ಇರುತ್ತೇನೆ. ಸಭೆಯಲ್ಲಿ ಭಾಷಣ ಮಾಡಲು ಅವಕಾಶ ಸಿಕ್ಕರೆ ಬಜೆಟ್‌ನಲ್ಲಿ ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ವಿರುದ್ಧದ ತಾರತಮ್ಯ, ರಾಜಕೀಯ ಪಕ್ಷಪಾತ, ಬಂಗಾಳ ಮತ್ತು ನೆರೆಯ ರಾಜ್ಯಗಳನ್ನು ವಿಭಜಿಸುವ ಪಿತೂರಿಯನ್ನು ಖಂಡಿಸಿ, ಪ್ರತಿಭಟನೆಯನ್ನು ದಾಖಲಿಸಿ ಸಭೆಯಿಂದ ಹೊರಡುತ್ತೇನೆ” ಎಂದು ಬ್ಯಾನರ್ಜಿ ಹೇಳಿದ್ದಾರೆ.
“ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಅನ್ನು ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ. ಕೇಂದ್ರ ಸಚಿವರು ರಾಜ್ಯ ವಿಭಜನೆಯ ಬಗ್ಗೆ ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯಗಳನ್ನು ವಿಭಜಿಸುವ ಬೇಡಿಕೆಯು ಬಿಜೆಪಿಯ ವಿವಿಧ ವಲಯಗಳಿಂದ ಕೇಳಿ ಬರುತ್ತಿದೆ. ಬಂಗಾಳವನ್ನು ವಿಭಜಿಸುವುದು ಎಂದರೆ ಭಾರತವನ್ನು ವಿಭಜಿಸುವುದು ಎಂದರ್ಥ” ಎಂದು ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.