ವಿಧಾನಸಭೆಯ ಎರಡನೇ ದಿನದ ಕಲಾಪದಲ್ಲಿ ಕೊಬ್ಬರಿ ಬೆಲೆ ಕುಸಿತ ಮತ್ತು ಖರೀದಿ ಕೇಂದ್ರ ಸ್ಥಗಿತ ವಿಷಯವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ವಾಕ್ಸಮರ ನಡೆಯಿತು.
ಕಲಾಪದಲ್ಲಿ ಕೊಬ್ಬರಿ ಬೆಲೆ ಕುಸಿತ ಹಾಗೂ ಖರೀದಿ ಕೇಂದ್ರ ಸ್ಥಗಿತವಾಗಿರುವ ಕುರಿತು ಚರ್ಚಿಸಲು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರು ನಿಲುವಳಿ ಸೂಚನೆ ನೀಡಿದರು.
ವಿಧಾನಮಂಡಲ ಬಜೆಟ್ ಅಧಿವೇಶನದ ಎರಡನೇ ದಿನವಾದ ಇಂದಿನ ಕಾರ್ಯಕಲಾಪಗಳಲ್ಲಿ ಕೊಬ್ಬರಿ ಬೆಂಬಲ ಬೆಲೆ ಪ್ರಧಾನವಾಗಿ ಚರ್ಚೆಯಾಯಿತು. ಹಲವಾರು ನಾಯಕರು ವಿಶೇಷವಾಗಿ ಕೆಎಂ ಶಿವಲಿಂಗೇಗೌಡ, ಬಿಜೆಪಿಯ ಸುರೇಶ್ ಗೌಡ ಮತ್ತು ಜೆಡಿಎಸ್ ಪಕ್ಷದ ಹೆಚ್ ಡಿ ರೇವಣ್ಣ ನಡುವೆ ಕಾವೇರಿದ ವಾಗ್ವಾದ ನಡೆಯಿತು.
ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, “ಕೊಬ್ಬರಿ ಖರೀದಿ ಮಾಡಲು ಡಿ ಕೆ ಶಿವಕುಮಾರ್‌ಗೆ ಅಧಿಕಾರವಿಲ್ಲ, ಖರೀದಿ ಮಾಡುವ ಅಧಿಕಾರ ಇರೋದು ಪ್ರಧಾನಿ ಮೋದಿಗೆ ಮಾತ್ರ” ಎಂದರು.
ಶಿವಲಿಂಗೇಗೌಡರ ಹೇಳಿಕೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ, ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆ ಬಗ್ಗೆ ಮಾತಾಡುವಾಗ ರಾಜಕೀಯ ಬೇಡ ಎಂದು ಶಾಸಕ ಸುರೇಶ್ ಗೌಡ ಮನವಿ ಮಾಡಿದರು.
“ಯಾರ ಮನೆಯಿಂದಲೂ ರೈತರಿಗೆ ಹಣ ಕೊಡೋದಿಲ್ಲ, ಯಾವುದೇ ಸರಕಾರ ಕೊಟ್ಟರೂ ಸರಕಾರದಿಂದಲೇ ಹಣ ಕೊಡಬೇಕು. ರೈತರ ಪರವಾಗಿ ಇಲ್ಲಿ ಮಾತಾಡಿ” ಎಂದು ಶಾಸಕ ಸುರೇಶ್ ಗೌಡ ಒತ್ತಾಯಿಸಿದರು.
ಆ ನಂತರ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ”ಕೊಬ್ಬರಿ ಬಹಳ ಸೂಕ್ಷ್ಮ ವಿಷಯ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಸೇರಿ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರಬೇಕು” ಎನ್ನುತ್ತಾರೆ.