ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 16 ಸಾವಿರ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಂತೆ ಪ್ರಸ್ತಾಪ ಇಟ್ಟಿದ್ದಕ್ಕೆ ರಾಜ್ಯ ಸರ್ಕಾರ ನಿರಾಕರಿಸಿದೆ.
ಅತಿಥಿ ಉಪನ್ಯಾಸಕರ ಖಾಯಂ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಬಜೆಟ್ ಅಧಿವೇಶನದ ವೇಳೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ ಅವರು ನಿಯಮ 72ರ ಅಡಿ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಗಮನ ಸೆಳೆಯುವ ಸೂಚನೆಯನ್ನು ಮಂಡಿಸಿದರು. ರಾಜ್ಯದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 16 ಸಾವಿರ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಸುಧಾಕರ್, “ಖಾಲಿ ಹುದ್ದೆಗೆ ಖಾಯಂ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲ” ಎಂದು ತಿಳಿಸಿದ್ದಾರೆ.
“ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆ ಬಗ್ಗೆ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ವರದಿಯ ಪ್ರಕಾರ ಪರಿಶೀಲನೆ ಮಾಡಲಾಗಿದೆ. ವಿವಿಧ ಮಾನದಂಡದ ಆಧಾರದ ಮೇಲೆ ವೇತನ ನಿಗದಿ ಮಾಡಲಾಗಿದೆ. 32 ಸಾವಿರದಿಂದ 26 ಸಾವಿರದವರೆಗೂ ವೇತನ ನೀಡಲಾಗುತ್ತಿದೆ. ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ” ಎಂದು ತಿಳಿಸಿದರು.
“ಅತಿಥಿ ಉಪನ್ಯಾಸಕರನ್ನು ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಕಾಲೇಜುಗಳಲ್ಲಿ ಹೆಚ್ಚುವರಿ ಅವಧಿಗೆ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿ ತಾತ್ಕಾಲಿಕ ನೇಮಕ ಮಾಡಿಕೊಳ್ಳುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.
“ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಹಾಗಾಗಿ, ಅವರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ. ಆದರೆ, ಕಾಲಕಾಲಕ್ಕೆ ಅತಿಥಿ ಉಪನ್ಯಾಸಕರ ಇತರ ಸಮಸ್ಯೆಗಳ ಪರಿಹಾರ ಮಾಡಲಾಗುತ್ತದೆ” ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
“14 ಸಾವಿರ ರೂ ಇದ್ದ ವೇತನವನ್ನು ನಾವು 32 ಸಾವಿರ ರೂ.ಗೆ ಹೆಚ್ಚಿಸಿದ್ದೇವೆ. 10-15 ವರ್ಷ ಸೇವೆ ಮಾಡಿದವರಿಗೆ ವರ್ಷಕ್ಕೆ ಮೂರು ಅಂಕ ನೀಡಲಾಗುತ್ತದೆ. ಇದು ಅವರ ಪರಿಗಣನೆಗೆ ಸಹಕಾರಿಯಾಗಲಿದೆ. ಕಾರ್ಯಭಾರ ಪ್ರತಿ ವರ್ಷ ಬದಲಾವಣೆಯಾಗುತ್ತದೆ. ಸೀನಿಯಾರಿಟಿ ಇದ್ದವರಿಗೆ ತೊಂದರೆಯಾಗುವುದಿಲ್ಲ. ಹಾಗಾಗಿ, ಸೇವಾ ಭದ್ರತೆ ಭಯ ಬೇಡ” ಎಂದರು.
“1,242 ಸಹಾಯಕ ಪ್ರಾಧ್ಯಾಪಕರ ನೇಮಕ ಗೊಂದಲವಾಗಿದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸಿಐಡಿ ತನಿಖೆ ವರದಿ ಪಡೆದು ದಾಖಲೆಗಳ ಪರಿಶೀಲನೆ ನಡೆಸಿ ತ್ವರಿತ ನೇಮಕಕ್ಕೆ ಮುಂದಾಗಿದ್ದೇವೆ. ಎಲ್ಲದಕ್ಕೂ ತಂಡ ರಚಿಸಿ ವೇಗವಾಗಿ ನೇಮಕಾತಿ ಪ್ರಕ್ರಿಯೆ ಮಾಡಲಾಗುತ್ತಿದೆ. 1,208 ಜನರ ದಾಖಲಾತಿ ಪರಿಶೀಲನೆ ನಡೆಸಲಾಗಿದೆ. ತಾಂತ್ರಿಕ ಶಿಕ್ಷಣ ಸೇರಿ ಇಲಾಖೆಯಡಿ ಏಳು ಸಾವಿರ ಹುದ್ದೆ ಮಂಜೂರಾತಿಗೆ ಆರ್ಥಿಕ ಇಲಾಖೆ ಅನುಮತಿ ಕೇಳಿದ್ದೇವೆ. 310 ಪ್ರಾಂಶುಪಾಲರ ಹುದ್ದೆ ನೇಮಕಾತಿಗೆ ಪ್ರಕ್ರಿಯೆ ನಡೆಸಲಾಗುತ್ತಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕತಾರ್‌ನಲ್ಲಿ ಬಂಧಿತರಾಗಿದ್ದವರ ಬಿಡುಗಡೆಗೆ ನಟ ಶಾರೂಖ್ ಖಾನ್ ಕಾರಣ: ಚರ್ಚೆಗೆ ಗ್ರಾಸವಾದ ಸುಬ್ರಮಣಿಯನ್ ಸ್ವಾಮಿ ಟ್ವೀಟ್
“ಅತಿಥಿ ಉಪನ್ಯಾಸಕರಿಗೆ 10 ತಿಂಗಳ ವೇತನವನ್ನು ಕಡ್ಡಾಯವಾಗಿ ಕೊಡಬೇಕು ಎಂದು ಆದೇಶಿಸಿದ್ದೇವೆ. ಯಾವ ರಾಜ್ಯದಲ್ಲಿಯೂ ಅತಿಥಿ ಉಪನ್ಯಾಸಕರ ಖಾಯಂ ಮಾಡಿಲ್ಲ. ಎಲ್ಲ ಆದೇಶಗಳನ್ನು ಪರಿಶೀಲಿಸಿದ್ದೇವೆ. ಪೌರ ಕಾರ್ಮಿಕರು ಇತರ ಇಲಾಖೆಗೆ ಇದನ್ನು ಹೋಲಿಕೆ ಮಾಡಲಾಗದು. ಉಮಾದೇವಿ ಪ್ರಕರಣವೂ ಇದಕ್ಕೆ ಅನ್ವಯವಾಗಲಿದೆ. ಇದನ್ನು ಅಧ್ಯಯನ ಮಾಡಿದ್ದೇನೆ. ಹಾಗಾಗಿ ಸೇವೆ ಖಾಯಂ ಹೊರತುಪಡಿಸಿ ಕಾಲಕಾಲಕ್ಕೆ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹಾರ ಮಾಡಲಾಗುತ್ತದೆ” ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ್ ಭರವಸೆ ಕೊಟ್ಟರು.