ಉತ್ತರ ಪ್ರದೇಶದ ಬಹರೈಚ್‌ನಲ್ಲಿ ನಡೆದ ಕೋಮು ಘರ್ಷಣೆಯ ಬಳಿಕ ಅಲ್ಪಸಂಖ್ಯಾತ ಸಮುದಾಯದ ಆರೋಪಿಗಳ ನಿವಾಸಗಳನ್ನು ಧ್ವಂಸಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ಸರ್ಕಾರದ ‘ಬುಲ್ಡೋಜರ್ ಕ್ರಮ’ದ ವಿರುದ್ಧ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ. ಅರ್ಜಿಗಳ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, “ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಅಪಾಯವನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದೆ. ಯೋಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರಿದ್ದ ಪೀಠವು ಮಂಗಳವಾರ ವಿಚಾರಣೆ ನಡೆಸಿದೆ. “ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಿ, ನ್ಯಾಯಾಲಯವನ್ನು ಎದುರು ಹಾಕಿಕೊಳ್ಳಲು ಸರ್ಕಾರ ಬಯಸಿದ್ದರೆ, ಅದನ್ನು ಕೂಡಲೇ ನಿಲ್ಲಿಸಬೇಕು. ‘ಬುಲ್ಡೋಜರ್ ನ್ಯಾಯ’ ಪ್ರಕರಣದಲ್ಲಿ ನೆಲಸಮವಾದ ಕಟ್ಟಡಗಳು ಅಕ್ರಮವಾಗಿದ್ದರೆ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಅವುಗಳು ಸಕ್ರಮವಾಗಿದ್ದರೆ, ನ್ಯಾಯಾಲಯದ ಕ್ರಮ ಎದುರಿಸಬೇಕಾಗುತ್ತದೆ” ಎಂದು ಹೇಳಿದೆ.
ವಿಚಾರವಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಯು.ಸಿಂಗ್, “ಅಕ್ಟೋಬರ್ 13ರಂದು ಘರ್ಷಣೆ ನಡೆದ ಬಳಿಕ, ಸ್ಥಳೀಯ ಅಧಿಕಾರಿಗಳು ನೆಲಸಮಗೊಳಿಸುವ ನೋಟಿಸ್‌ಗಳನ್ನು ಹೊರಡಿಸಿದ್ದಾರೆ. ಮೂರು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ” ಎಂದು ಪೀಠಕ್ಕೆ ತಿಳಿಸಿದ್ದಾರೆ.
“ಅರ್ಜಿದಾರರ ತಂದೆ ಮತ್ತು ಸಹೋದರನನ್ನು ಕೋಮು ಘರ್ಷಣೆ ಪ್ರಕರಣದಲ್ಲಿ ಅರೋಪಿಯನ್ನಾಗಿ ಹೆಸರಿಸಲಾಗಿದೆ. ಅವರಿಬ್ಬರೂ ಪೊಲೀಸರ ಎದುರು ಶರಣಾಗಿದ್ದಾರೆ. ಈ ನಡುವೆ, ಅಕ್ಟೋಬರ್ 17ರಂದು ನೋಟಿಸ್ ಹೊರಡಿಸಲಾಗಿದ್ದು, ಅ.18ರ ಸಂಜೆಯೇ ಧ್ವಂಸಗೊಳಿಸುವ ನೋಟಿಸ್‌ಗಳನ್ನು ಕಟ್ಟಡಗಳಿಗೆ ಅಂಡಿಸಲಾಗಿದೆ” ಎಂದು ವಿವರಿಸಿದ್ದಾರೆ.
“ಈ ಹಿಂದೆ ಅಲಹಾಬಾದ್ ಹೈಕೋರ್ಟ್ ನೆಲಸಮಗೊಳಿಸುವ ನೋಟಿಸ್‌ಗಳಿಗೆ ಉತ್ತರಿಸಲು ಗಡುವನ್ನು 15 ದಿನಗಳಿಗೆ ವಿಸ್ತರಿಸಿತ್ತು. ನೋಟಿಸ್‌ಗಳಿಗೆ ಬಂದ ಉತ್ತರಗಳನ್ನು ಪರಿಶೀಲಿಸಿದ ಬಳಿಕ ನಿರ್ಧರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿತ್ತು. ಆದರೆ, ಅಧಿಕಾರಿಗಳು ಕೇವಲ 3 ದಿನಗಳ ನೋಟಿಸ್ ಕೊಟ್ಟು, ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಈ ವಿಕಾಸ್ ಯಾದವ್ ಯಾರು? ತನ್ನ ನೆಲದಲ್ಲಿ ತನ್ನದೇ ನಾಗರಿಕನ ಹತ್ಯೆಯ ಯತ್ನ ಕುರಿತು ಏನಿದು ಅಮೆರಿಕೆಯ ಆಪಾದನೆ ?
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ, “ಬುಧವಾರದವರೆಗೆ ಸರ್ಕಾರವು ಯಾವುದೇ ಕ್ರಮವನ್ನು ಜರುಗಿಸುವುದಿಲ್ಲ” ಎಂದು ಹೇಳಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, “ಉತ್ತರ ಪ್ರದೇಶ ಅಧಿಕಾರಿಗಳು ನಮ್ಮ ಆದೇಶವನ್ನು ಉಲ್ಲಂಘಿಸುವ ಅಪಾಯವನ್ನು ಎದುರು ಹಾಕಿಕೊಳ್ಳಲು ಬಯಸಿದ್ದರೆ ಅದು ಅವರ ಆಯ್ಕೆ. ಹೈಕೋರ್ಟ್ ಆದೇಶದಂತೆ ನೆಲಸಮ ನೋಟಿಸ್‌ಗಳಿಗೆ ಉತ್ತರಿಸಲು 15 ದಿನಗಳ ಸಮಯಾವಕಾಶ ನೀಡಬೇಕು” ಎಂದು ಹೇಳಿದೆ. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಈ ಹಿಂದೆ, ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸುವುದು ಸಂವಿಧಾನಬಾಹಿರ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, “ಅಪರಾಧದಲ್ಲಿ ಆರೋಪಿಯಾಗಿದ್ದಾರೆ ಎಂಬುದು ಆಸ್ತಿಗಳನ್ನು ಧ್ವಂಸಗೊಳಿಸಲು ಕಾರಣ/ಆಧಾರವಾಗಿರಲು ಸಾಧ್ಯವಿಲ್ಲ. ಆ ಕಟ್ಟಡಗಳು ಅಕ್ರಮವಾಗಿದ್ದರೆ ಮಾತ್ರವೇ ಅವುಗಳನ್ನು ಕೆಡವಲು ಸಾಧ್ಯ. ಕಟ್ಟಡಗಳನ್ನು ಕೆಡಗುವ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಮುನ್ನ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು” ಎಂದು ತಾಕೀತು ಮಾಡಿ ತೀರ್ಪು ನೀಡಿತ್ತು.