ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಉಪಚನಾವಣೆ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಸಂಜೆ 5 ಗಂಟೆಯವರೆಗೂ ಚನ್ನಪಟ್ಟಣದಲ್ಲಿ ಶೇ.84.26ರಷ್ಟು, ಸಂಡೂರಿನಲ್ಲಿ ಶೇ.71.47 ಹಾಗೂ ಶಿಗ್ಗಾಂವಿಯಲ್ಲಿ ಶೇ.75.07ರಷ್ಟು ಮತದಾನವಾಗಿದೆ. ಒಟ್ಟು ಮೂರು ಕ್ಷೇತ್ರಗಳಿಂದ 76.09 ಮತದಾನವಾಗಿದೆ.
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ.
ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ತಮ್ಮ ತಂದೆಯಾದ ಸಂಸದ ಬಸವರಾಜ ಬೊಮ್ಮಾಯಿ ಜೊತೆ ಮತದಾನ ಮಾಡಿದರು. ಶಿಗ್ಗಾಂವಿ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-1ರಲ್ಲಿ ಸರತಿ ಸಾಲಿನಲ್ಲಿ ನಿಂತು ಇಬ್ಬರೂ ಮತ ಚಲಾಯಿಸಿದರು.
ಶಿಗ್ಗಾಂವಿ | ಮತದಾನ ಬಹಿಷ್ಕಾರ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ ಮಾಡಿದ್ದಾರೆ. ‘ನಮಗೆ ಮನೆಯ ಹಕ್ಕುಪತ್ರ ನೀಡಿಲ್ಲ’ ಎಂದು ಆರೋಪಿಸುತ್ತಿರುವ ದೂರುದಾರರು, ಮನೆ ಮುಂದೆ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಚುನಾವಣಾ ಬಹಿಷ್ಕಾರ ಪ್ರದೇಶ’ ಎಂದು ಫಲಕ ಹಾಕಿರುವ ಮತದಾರರು, ‘ಉಳುವವನೇ ಭೂಮಿ ಒಡೆಯ ದಲಿತನ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾಡಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳ ಸುಳ್ಳು ಭರವಸೆ’ ಎಂದು ಫಲಕ ಹಾಕಿದ್ದಾರೆ.