ರಾಜ್ಯದಲ್ಲಿ ಮಹಾ ಮಳೆಗೆ ಹಲವು ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿಹೋಗಿವೆ. ರಾಜ್ಯ ಸರ್ಕಾರ ಅತಿವೃಷ್ಟಿ ನಿರ್ವಹಣೆಯಲ್ಲಿ ಸಂಪೂರ್ಣ ಹಿಂದೆ ಬಿದ್ದಿದೆ. ಉಪಚುನಾವಣೆ ಗುಂಗಲ್ಲಿ ಸರ್ಕಾರ ಹೊರಬರಲಿಲ್ಲ ಎಂದರೆ ಮುಂದೊಂದು ದಿನ ಮತದಾರರು ಉತ್ತರಿಸುತ್ತಾರೆ. ಈ ಎಚ್ಚರಿಕೆಯಿಂದಾದರೂ ಕೂಡಲೇ ಎಚ್ಚೆತ್ತುಕೊಂಡು ಮಳೆಯಲ್ಲಿ ಕರಗುತ್ತಿರುವ ರೈತನ ಕಣ್ಣೀರನ್ನು ರಾಜ್ಯ ಸರ್ಕಾರ ಒರೆಸಬೇಕಿದೆ.
ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಕೆಲವು ಜಿಲ್ಲೆಗಳಲ್ಲಿ ಮಹಾ ಮಳೆಗೆ ಬೆಳೆಗಳು ಕೊಚ್ಚಿಹೋಗಿವೆ. ಕೆಲವು ತಾಲ್ಲೂಕುಗಳಲ್ಲಿ ಕೈಗೆ ಸಿಕ್ಕ ಬೆಳೆಯನ್ನಾದರೂ ಮನೆಗೆ ತಂದು ರಕ್ಷಿಸಿಕೊಳ್ಳಲು ಮುಂದಾಗಿದ್ದ ರೈತರಿಗೆ ಹಳ್ಳಿಗಾಡಿನ ಸೇತುವೆಗಳು ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಸಾವು ನೋವು ಕೂಡ ಸಂಭವಿಸಿದೆ.
ತೀವ್ರ ಮಳೆಯಿಂದ ದಾವಣಗೆರೆಯಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲ ಕಚ್ಚಿದೆ. ಬಾಗಲಕೋಟೆ, ಗದಗ, ಧಾರವಾಡ, ಕೊಪ್ಪಳ ಭಾಗದಲ್ಲಿ ಜೋಳ, ಕಡಲೆ, ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಗಳು ಮಳೆಹಾನಿಗೆ ತುತ್ತಾಗಿವೆ. ಹೂವು ಮತ್ತು ತರಕಾರಿ ಬೆಳೆಗಳ ಜಮೀನಿನಲ್ಲಿ ಮಳೆ ನೀರು ನಿಂತು ಕೊಳೆತುಹೋಗುತ್ತಿದೆ.
ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಗೆ ಅಂದಾಜು 36 ಸಾವಿರ ಹೆಕ್ಟೇರ್ ಪ್ರದೇಶವ್ಯಾಪ್ತಿಯ ಬೆಳೆ ಹಾನಿಗೊಳಗಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಅಡಕೆ ಬೆಳೆಗೆ ಕೊಳೆ ರೋಗ ತಗುಲಿದೆ. 3,000 ಹೆಕ್ಟೇರ್ ಪ್ರದೇಶದಲ್ಲಿನ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ 850 ಎಕರೆಗೂ ಹೆಚ್ಚು ಪ್ರದೇಶ ವ್ಯಾಪ್ತಿಯ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಅಂದಾಜು 500ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 350 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದ್ದರೆ, 900 ಹೆಕ್ಟೇರ್‌ಗೂ ಅಧಿಕ ವ್ಯಾಪ್ತಿಯ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾನಿಗೊಳಗಾಗಿವೆ. ಹಾವೇರಿ ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ, ಕಡಲೆ ಬೆಳೆ ಹಾನಿಯಾಗಿದೆ. ತುಮಕೂರಿನ ಪಾವಗಡದಲ್ಲಿ ಕಟಾವಿಗೆ ಬಂದಿದ್ದ 3 ಎಕರೆ ಭತ್ತದ ಬೆಳೆ ಸಂಪೂರ್ಣ ನೀರು ಪಾಲಾಗಿದೆ.
ಇಷ್ಟೆಲ್ಲ ಸಂಗತಿ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ರಾಜ್ಯ ಸರ್ಕಾರ ಅತಿವೃಷ್ಟಿ ನಿರ್ವಹಣೆಯಲ್ಲಿ ಸಂಪೂರ್ಣ ಹಿಂದೆ ಬಿದ್ದಿದೆ. ತೊಂದರೆಗೆ ಒಳಗಾದ ಜನರಿಗೆ ರಾಜ್ಯ ಸರ್ಕಾರ ಚುರುಕಾಗಿ ಸ್ಪಂದಿಸಿದ್ದು ಎಲ್ಲೂ ಕಂಡುಬಂದಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಾರ್ಮಿಕ ಸಚಿವ ಸಂತೋಷ್ ಲಾಡ್ ನಂತಹ ಬೆರಳೆಣಿಕೆಯಷ್ಟು ಸಚಿವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದು ಹೊರತುಪಡಿಸಿದರೆ ಆಡಳಿತಾರೂಢ ಸರ್ಕಾರದ ಶಾಸಕರಾಗಲಿ, ಪ್ರತಿಪಕ್ಷಗಳಾದ ಜೆಡಿಎಸ್, ಬಿಜೆಪಿ ಶಾಸಕರಾಗಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಳೆ ಹಾನಿ ಬಗ್ಗೆ ತಿಳಿಯುವ ಪ್ರಯತ್ನವನ್ನೂ ಮಾಡಿಲ್ಲ.

ರಾಜ್ಯದ ಜನರು ಒಂದಿಷ್ಟು ಆಶಾಭಾವನೆ ಹೊತ್ತು ಕಾಂಗ್ರೆಸ್ ಬಂದರೆ ಒಳ್ಳೆಯದಾಗುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಬಿಜೆಪಿಯನ್ನು ಕೆಳಗಿಳಿಸಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರು. ಆದರೆ ಸಿಎಂ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಡೆದುಕೊಂಡ ರೀತಿಯಲ್ಲಿ ಈ ಅವಧಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮುಡಾ ಪ್ರಕರಣ ಬೆಳಕಿಗೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಅದರಿಂದ ಹೊರಬಂದು ಚುರುಕಾಗಿ ಆಡಳಿತ ನಡೆಸಿದ್ದು ಎಲ್ಲೂ ಕಾಣಲೇ ಇಲ್ಲ. ಮುಡಾ ಪ್ರಕರಣ ತೆರೆಗೆ ಸರಿಯುತ್ತಿದ್ದಂತೆ ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉಪ ಚುನಾವಣೆ ಕಡೆಯೇ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ.
ಉಪ ಚುನಾವಣೆಯ ಹೊತ್ತಲ್ಲಿ ರಾಜ್ಯದಲ್ಲಿ ಹಿಂಗಾರು ಮಳೆ ಸೃಷ್ಟಿಸಿರುವ ಅನಾಹುತಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ರಾಜ್ಯ ಸರ್ಕಾರ ಗ್ಯಾರಂಟಿಗಳ ಗುಂಗಿನಲ್ಲೇ ಕಾಲ ಕಳೆಯುತ್ತಿದೆ. ಸಿಎಂ ಆದ ಹೊಸತರಲ್ಲಿ ಸಾಲು ಸಾಲು ಜಿಲ್ಲಾಧಿಕಾರಿಗಳ ಸಭೆ ನಡೆಸುತ್ತಿದ್ದ ಸಿದ್ದರಾಮಯ್ಯ ಅವರು ಈಗ ಅತಿವೃಷ್ಟಿ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಸಭೆ ಕರೆದು ಸಲಹೆ, ಸೂಚನೆ ಕೊಡುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.
ಸುದ್ದಿ ವಾಹಿನಿಗಳು ಮೈಕ್ ಹಿಡಿದಾಗಷ್ಟೇ ಮಳೆ ಬಗ್ಗೆ ಸಿದ್ದರಾಮಯ್ಯ ಅವರು ತುಟಿ ಬಿಚ್ಚಿದ್ದಾರೆ. “ಪ್ರಕೃತಿ ವಿಕೋಪದಿಂದ ಬಿದ್ದಿರುವ, ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ” ಎಂದು ಮಾಧ್ಯಮಗಳಿಗೆ ತಿಳಿಸಿ ಜಾರಿಕೊಂಡಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದ ನಡೆ ಗಮನಿಸಿದರೆ ಉಪ ಚುನಾವಣೆಗಿರುವ ಉತ್ಸಾಹ ಮಳೆ ಹಾನಿಗೆ ಪರಿಹಾರ ಕೊಡುವ ಕಡೆ ಇಲ್ಲ ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತದೆ. ಯಾವ ಕ್ಷೇತ್ರಗಳಲ್ಲಿ ಮಳೆ ಹಾನಿ ಸಮೀಕ್ಷೆ ನಡೆಯುತ್ತಿದೆ? ಯಾವ ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ? ಕೃಷಿ ಸಚಿವ ಚಲುವರಾಯಸ್ವಾಮಿ ಯಾವ ಸಭೆಗಳನ್ನು ಮಾಡಿದ್ದಾರೆ? ಇಲ್ಲಿ ಎಲ್ಲವೂ ಪ್ರಶ್ನೆಗಳಾಗಿಯೇ ಉಳಿದಿದೆ.
ಭಾರಿ ಮಳೆಯಿಂದ ರಾಜಧಾನಿಯಲ್ಲಿ ಜನಜೀವನವಂತೂ ಅಸ್ತವ್ಯಸ್ತಗೊಂಡಿದೆ. ಒಂದು ವಾರದ ಮಳೆಗೆ ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಯಲಹಂಕ ಹಾಗೂ ದಾಸರಹಳ್ಳಿ ಭಾಗದಲ್ಲಿ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಹಲವು ಬಡಾವಣೆಗಳಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತೀವ್ರ ಮಳೆಯಿಂದ ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಬೃಹತ್ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ ಬುಡಮೇಲಾಗಿ ಧರೆಗುರುಳಿದೆ. ಕಟ್ಟಡದ ನಿರ್ಮಾಣದಲ್ಲಿ ತೊಡಗಿದ್ದ 20 ಮಂದಿಯಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದಾರೆ. 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನ ಪರಿಸ್ಥಿತಿ ಹೀಗಿದ್ದರೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಈವರೆಗೂ ಬೆಂಗಳೂರಿನ ಮಳೆ ಹಾನಿ ಕಡೆ ತಿರುಗಿಯೂ ನೋಡಿಲ್ಲ. ರಾಜಕೀಯ ಬದ್ಧ ವೈರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಟ್ಟಿಹಾಕಲು ಚನ್ನಪಟ್ಟಣ ಉಪ ಚುನಾವಣೆ ಸಮರದಲ್ಲಿ ಸಕ್ರಿಯರಾಗಿದ್ದಾರೆ.

ಬೆಂಗಳೂರಿನಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದ್ದು, ನೀವು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎನ್ನುವ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದಾಗ, ”ನಾನು ಭೇಟಿ ನೀಡುವುದಷ್ಟೇ ಮುಖ್ಯವಲ್ಲ. ಕೆಲಸಗಳು ಆಗಬೇಕು. ನಾನು ಭೇಟಿ ಮಾಡಿದರೆ ಪ್ರಚಾರ ಸಿಗುತ್ತದೆ. ನಮಗೆ ಪ್ರಚಾರ ಮುಖ್ಯವಲ್ಲ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ನೀಡಲು ನಾವು ಸಮಿತಿ ರಚಿಸಲಾಗಿದೆ. ಆ ಸಮಿತಿ ವರದಿ ನೀಡಲಿದೆ” ಎಂದಷ್ಟೇ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರು ಇಡೀ ರಾಜ್ಯಕ್ಕೆ ವಿರೋಧ ಪಕ್ಷದ ನಾಯಕರಾ ಅಥವಾ ಬೆಂಗಳೂರಗಷ್ಟೇ ವಿರೋಧ ಪಕ್ಷದ ನಾಯಕರಾ ತಿಳಿಯುತ್ತಿಲ್ಲ. ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲದೇ ಕೇವಲ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿ, ”6000 ಕೋಟಿ. ರೂ ಪರಿಹಾರ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಾವೇರಿ ವಿಚಾರವಾಗಿ ಅಲ್ಲಲ್ಲಿ ಮಳೆ ಹಾನಿ ಬಗ್ಗೆ ಧ್ವನಿ ಎತ್ತಿದ್ದಾರೆ. ಬಿಜೆಪಿಯ ಉಳಿದ ಪ್ರಮುಖ ನಾಯಕರು ಮಳೆಯ ಮಂಪರು ನಿದ್ದೆಯಲ್ಲಿದ್ದಾರೆ ಅನ್ನಿಸುತ್ತದೆ.
ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪಕ್ಷದ ಕಥೆಯೇ ಬೇರೆ. ಅವರು ಉಪ ಚುನಾವಣೆಯನ್ನೇ ಇಡೀ ರಾಜ್ಯದ ಚುನಾವಣೆ ಎನ್ನುವ ಥರ ನಡೆದುಕೊಳ್ಳುತ್ತಿದ್ದಾರೆ. ಮಳೆ ಹಾನಿ ಬಗ್ಗೆ ಸುದ್ದಿ ವಾಹಿನಿಗಳ ಮೈಕ್‌ಗಳಿಗಷ್ಟೇ ಪ್ರತಿಕ್ರಿಯಿಸಿ, ಟ್ವೀಟ್‌ಗಳಿಗೆ ಪಕ್ಷದ ಧ್ವನಿಯನ್ನು ಸೀಮಿತಗೊಳಿಸಿದ್ದಾರೆ.
ರಾಜ್ಯದ ಅತಿವೃಷ್ಟಿ ಬಗ್ಗೆ ಭಾರತೀಯ ಕೃಷಿಕ ಸಮಾಜ (ಸಂ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಈ ದಿನ.ಕಾಮ್ ಜೊತೆ ಮಾತನಾಡಿ, “ಕಳೆದ ವರ್ಷ ರಾಜ್ಯ ಹಸಿರು ಬರಗಾಲ ಎದುರಿಸಿತ್ತು. ಈ ವರ್ಷ ಮುಂಗಾರು ಮಳೆ ಕೆಲವು ಕಡೆ ಕೈಕೊಟ್ಟಿದೆ. ಹಲವೆಡೆ ಹೆಚ್ಚಾಗಿ ಸಮರ್ಪಕ ಬೆಳೆ ರೈತರ ಕೈಗೆ ಸಿಕ್ಕಿಲ್ಲ. ಈಗ ಹಿಂಗಾರು ಮಳೆ ರಾಜ್ಯದಲ್ಲಿ 15 ದಿನದಿಂದ ಸುರಿಯುತ್ತಿದೆ. ಹೆಸರು, ಕಡಲೆ, ಮೆಕ್ಕೆಜೋಳ, ಉದ್ದು, ಶೇಂಗಾ, ಹತ್ತಿ ಅಂತ ಸೂಕ್ಷ್ಮ ಬೆಳೆಗಳು ಮಳೆಗೆ ತುತ್ತಾಗಿವೆ. ಇದರಿಂದ ಹಿಂಗಾರು ಬೆಳೆಗಳ ಅವಧಿ ಏರು ಪೇರಾಗಿ ಸಮರ್ಪಕ ಬೆಳೆ ಬೆಳೆಯುವುದು ರೈತರಿಗೆ ಕಷ್ಟವಾಗಲಿದೆ. ಈ ಭಾರಿಯ ಕರ್ನಾಟಕ ಅತಿವೃಷ್ಟಿಯನ್ನು ರಾಷ್ಟೀಯ ವಿಪತ್ತು ಎಂದು ಘೋಷಿಸಿದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ಯಡಿ ಪರಿಹಾರ ಘೋಷಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ತಳಕವಾಡದ ಯುವ ರೈತ ಈರಣ್ಣ ಬಡಿಗೇರ ಮಾತನಾಡಿ, “ನಮ್ಮ ಭಾಗದಲ್ಲಿ ಕಬ್ಬು ಹಾಕಿದವರಿಗೆ ಈ ಮಳೆ ಅಂತಹ ಸಮಸ್ಯೆ ತಂದಿಲ್ಲ. ಆದರೆ ಗೋವಿನಜೋಳ ಬೆಳೆಗೆ ಬಹಳ ಹಾನಿಯಾಗಿದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುವ ಸ್ಥಿತಿ ನಮ್ಮ ಭಾಗದ ರೈತರದ್ದು. ಹೊಳಿಸಾಲಿನಲ್ಲಿ ಮೆಕ್ಕೆಜೋಳ ಬೆಳೆ ಪೂರ್ತಿ ನೆಲಕಚ್ಚಿದೆ. ತರಕಾರಿ ಬೆಳೆದ ಹೊಲಗಳಲ್ಲಿ ನೀರು ನಿಂತಿದೆ. ಟೊಮೆಟೊ ಅಂತ ತರಕಾರಿ ಬೆಳೆಗಳು ಅಲ್ಲೇ ಕೊಳೆಯುತ್ತಿವೆ. ಎರಿಹೊಲದ ಗೋವಿನ ಜೋಳ ಬೆಳೆಗಳು ಕಟಾವಿಗೆ ಬಂದಿವೆ. ಇದು ಮಳೆ ಹೀಗೆ ಮುಂದುವರಿದರೆ ತೆನೆಯಲ್ಲಿಯೇ ಕಾಳುಗಳು ಮೊಳಕಡೆಯೊಡೆಯಲು ಆರಂಭಿಸುತ್ತವೆ” ಎಂದು ವಿವರಿಸಿದರು.
ಇನ್ನಾದರೂ ರಾಜ್ಯ ಸರ್ಕಾರ ಕೂಡಲೇ ರಾಜ್ಯದ ಅತಿವೃಷ್ಟಿ ಬಗ್ಗೆ ಗ್ರಾಮೀಣ ಮಟ್ಟದಿಂದ ಅಧಿಕಾರಿಗಳಿಂದ ವರದಿ ಪಡೆದು, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಡೆ ಯೋಚಿಸಬೇಕು. ಮೂರು ಕ್ಷೇತ್ರಗಳ ಉಪ ಚುನಾವಣೆ ಹೇಗೂ ನಡೆಯುತ್ತದೆ. ಇಲ್ಲಿ ಸರ್ಕಾರ ಕಳೆದುಕೊಳ್ಳುವುದು ಏನಿಲ್ಲ. ಅದನ್ನು ಬಿಟ್ಟು ಚುನಾವಣೆಯನ್ನೇ ಮೊದಲ ಆದ್ಯತೆಯಾಗಿ ಕಾಂಗ್ರೆಸ್ ಸರ್ಕಾರ ಪರಿಗಣಿಸಿದರೆ ಇಂದಿನ ನಿರ್ಲಕ್ಷ್ಯಕ್ಕೆ ಮುಂದೊಂದು ದಿನ ಮತದಾರರು ಉತ್ತರಿಸುತ್ತಾರೆ. ಈ ಎಚ್ಚರಿಕೆಯಲ್ಲಿ ತಕ್ಷಣ ಮಹಾ ಮಳೆಯಲ್ಲಿ ಕರಗುತ್ತಿರುವ ರೈತನ ಕಣ್ಣೀರನ್ನು ಸರ್ಕಾರ ಒರೆಸಿ, ‘ಸಿದ್ದರಾಮಯ್ಯ ಸರ್ಕಾರ-ಜನಪರ ಸರ್ಕಾರ’ ಎಂಬ ಅವರ ಹೇಳಿಕೆಯನ್ನೇ ಈ ಸಂದರ್ಭದಲ್ಲಿ ಸಾಬೀತುಪಡಿಸಲಿ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.