ಉಪ ಚುನಾವಣೆ | ಮೂರು ಕ್ಷೇತ್ರ, ಮೂವರಿಗೂ ಪ್ರತಿಷ್ಠೆ, ಮೇಲುಗೈ ಯಾರದು?

Date:

Advertisements
ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಗೆಲ್ಲುವ ಹಾಗೂ ಮತ್ತೊಬ್ಬರಿಂದ ಕಿತ್ತುಕೊಳ್ಳುವ ಹಣಾಹಣಿಯಲ್ಲಿ ‌ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಕುತೂಹಲ ಸೃಷ್ಟಿಸಿದೆ.

ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಿರುವ ಈ ಮೂರು ಕ್ಷೇತ್ರಗಳಿಗೆ ರಾಜ್ಯದಲ್ಲಿ ಉಪ ಚುನಾವಣೆ ಎದುರಾಗಿದೆ.

ವಿರೋಧ ಪಕ್ಷದಲ್ಲಿರುವ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಮತ್ತು ಆಡಳಿತಾರೂಢ ಕಾಂಗ್ರೆಸ್‌ಗೆ ಈ ಉಪ ಚುನಾವಣೆ ಬಹಳ ಮಹತ್ವದ್ದಾಗಿದೆ. ಈ ಮೂರು ಕ್ಷೇತ್ರಗಳ ಚುನಾವಣೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಚನ್ನಪಟ್ಟಣ ಇದ್ದರೆ, ಮುಂಬೈ ಕರ್ನಾಟಕದಲ್ಲಿ ಶಿಗ್ಗಾಂವಿ ಇದೆ ಹಾಗೂ ಹೈದ್ರಾಬಾದ್‌ ಕರ್ನಾಟಕದಲ್ಲಿ ಸಂಡೂರು ಇದೆ.

ಜಾತಿ ರಾಜಕಾರಣದಿಂದಲೂ ಕೂಡ ಈ ಮೂರು ಕ್ಷೇತ್ರಗಳು ವಿಭಿನ್ನವಾಗಿವೆ. ಚನ್ನಪಟ್ಟದಲ್ಲಿ ಒಕ್ಕಲಿಗ ಸಮುದಾಯದವರೇ ನಿರ್ಣಾಯಕವಾಗಿದ್ದು, ಶಿಗ್ಗಾಂವಿಯಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಅಹಿಂದ ಮತದಾರರು ಅಭ್ಯರ್ಥಿಯ ಗೆಲುವನ್ನು ತೀರ್ಮಾನಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ಬಿಜೆಪಿ, ಚನ್ನಪಟ್ಟಣದಲ್ಲಿ ಜೆಡಿಎಸ್ ಹಾಗೂ ಸಂಡೂರ್‌ನಲ್ಲಿ‌ ಕಾಂಗ್ರೆಸ್ ‌ಗೆಲುವಿನ ನಗೆ ಬೀರಿದೆ.

Advertisements

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ-ಜೆಡಿಎಸ್‌ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆದ್ದು ಸೇಡನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕಾಂಗ್ರೆಸ್‌ ಇದೆ. ಇತ್ತ ಮೈತ್ರಿ ಪಕ್ಷಗಳು ಕೂಡ ಮೂರು ಕ್ಷೇತ್ರಗಳಲ್ಲಿ ಗೆದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ರಾಜ್ಯದಲ್ಲಿ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂಬುದುನ್ನು ತೋರಿಸಲು ಇನ್ನಿಲ್ಲದ ಕಸರತ್ತು ನಡೆಸಿವೆ.

ಎಚ್‌ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಮೂವರು ಮುಖ್ಯಮಂತ್ರಿಗಳಾಗಿದ್ದವರು. ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಈ ಉಪ ಚುನಾವಣೆ ಪ್ರತಿಷ್ಠೆಯ ಕಣ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಉಪ ಚುನಾವಣೆ ಪ್ರತಿಷ್ಠೆಯಾಗಿದೆ. ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೂ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆ ತಂದೊಡ್ಡಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇರುವ ಶಿಗ್ಗಾಂವಿ ಮತ್ತು ಸಂಡೂರಲ್ಲಿ ಎರಡೂ ಪಕ್ಷಗಳು ಈಗಾಗಲೇ ತಯಾರಿ ನಡೆಸಿವೆ. ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಜೊತೆಗೆ ಸಿದ್ದರಾಮಯ್ಯನವರು ಅಹಿಂದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಿರುವಾಗಲೇ, ಶಿಗ್ಗಾಂವಿಯಲ್ಲಿ ಮುಸ್ಲಿಮರು, ಸಂಡೂರಿನಲ್ಲಿ ಹಿಂದುಳಿದ ವರ್ಗ ಹೆಚ್ಚಿನ ಸಂಖ್ಯೆಯಲ್ಲಿರುವುದು ಸವಾಲಿನ ಸಂಗತಿಯಾಗಿದೆ. ಅಕಸ್ಮಾತ್ ಸೋತರೆ, ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸು ಕುಂದಿರುವ ಸೂಚನೆಯಾಗಿಯೂ ವಿಶ್ಲೇಷಣೆಗೊಳಗಾಗಲಿದೆ.

ಇನ್ನು ಜೆಡಿಎಸ್ ವಶದಲ್ಲಿದ್ದ ಚನ್ನಪಟ್ಟಣ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ-ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ತಮ್ಮ ರಾಜಕೀಯ ಎದುರಾಳಿಯಾಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಂದ ಕ್ಷೇತ್ರವನ್ನು ಕಿತ್ತುಕೊಂಡು, ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ ಕೆ ಸುರೇಶ್ ಅವರನ್ನು ಸೋಲಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಠ ತೊಟ್ಟಿದ್ದಾರೆ. ಹೀಗಾಗಿ, ಶಿಗ್ಗಾಂವಿ ಮತ್ತು ಸಂಡೂರಿಗಿಂತ ಚನ್ನಪಟ್ಟಣ ಉಪ ಚುನಾವಣೆ ರಾಜ್ಯದ ಗಮನ ಸೆಳೆದಿದೆ.

ಡಿ ಕೆ

ಚನ್ನಪಟ್ಟಣ ಕ್ಷೇತ್ರ ಕದನ

ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ದಿನದಿಂದಲೇ ಚನ್ನಪಟ್ಟಣ ಸುದ್ದಿಯಲ್ಲಿದೆ. ಒಕ್ಕಲಿಗೆ ಪ್ರಾಬಲ್ಯದ ಚನ್ನಪಟ್ಟಣ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಟ್ಟು ರಾಮನಗರದ ರಾಜಕಾರಣ ಕಟ್ಟುತ್ತಿರುವ ಡಿ ಕೆ ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಹೆಚ್ಚು ಓಡಾಡುತ್ತಿದ್ದು, ತೀವ್ರ ಪೈಪೋಟಿ ನೀಡುವ ಸಿದ್ಧತೆ ನಡೆಸಿದ್ದಾರೆ. “ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿ ಎಂದು ತಿಳಿದು ಮತ ಹಾಕಿ” ಎಂದು ಹೇಳುವ ಮೂಲಕ ಈಗಾಗಲೇ ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್‌ನಿಂದ ಸಂಭಾವ್ಯ ಅಭ್ಯರ್ಥಿಗಳ ಪೈಕಿ ಡಿ ಕೆ ಸುರೇಶ್‌ ಹೆಸರು ಹೆಚ್ಚು ಕೇಳಿಬರುತ್ತಿದೆ.

ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವೇ ಕಗ್ಗಂಟಾಗಿದೆ. 2023ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದ ವಿಧಾನ ಪರಿಷತ್‌ ಹಾಲಿ ಸದಸ್ಯ ಸಿ ಪಿ ಯೋಗೇಶ್ವರ್ ಮತ್ತೆ ಸ್ಪರ್ಧಿಸುವ ಹಠದಲ್ಲಿದ್ದಾರೆ. ಜೆಡಿಎಸ್ ಎರಡು ಬಾರಿ ಸತತವಾಗಿ ಗೆದ್ದಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳಲೇಬೇಕು ಎಂಬ ತವಕದಲ್ಲಿ ಕುಮಾರಸ್ವಾಮಿ ಇದ್ದಾರೆ. ಈ ಮೂಲಕ ಮಗ ನಿಖಿಲ್‌ ಕುಮಾರಸ್ವಾಮಿಗೆ ರಾಜಕೀಯ ನೆಲೆ ಕಲ್ಪಿಸಲು ಕುಮಾರಸ್ವಾಮಿ ಪಣತೊಟ್ಟಂತೆ ಕಾಣುತ್ತಿದೆ. ಅಕಸ್ಮಾತ್ ನಿಖಿಲ್ ಇಲ್ಲವೆಂದರೆ, ಪತ್ನಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ‌ಸಿ ಪಿ ಯೋಗೇಶ್ವರ್ ಸಿದ್ದತೆ ನಡೆಸಿದ್ದು, ಮೈತ್ರಿ ನಾಯಕರಿಗೆ ಅಭ್ಯರ್ಥಿ ಆಯ್ಕೆಯೇ ಸವಾಲಾಗಿದೆ.

ಸಂಡೂರು ಕ್ಷೇತ್ರ ಕದನ

ಶಾಸಕರಾಗಿದ್ದ ಇ.ತುಕಾರಾಂ ಅವರು ಬಳ್ಳಾರಿ ಸಂಸದರಾದ ನಂತರ ಅವರಿಂದ ತೆರವಾದ ಸ್ಥಾನಕ್ಕೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮ್ಮ ಕುಟುಂಬದವರನ್ನೇ ಕಣಕ್ಕೆ ಇಳಿಸಲು ಇ. ತುಕಾರಾಂ ಸಿದ್ಧತೆ ನಡೆಸಿದ್ದಾರೆ. ತಮ್ಮ ಪಕ್ಷದ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ ಅವರನ್ನು ಕರೆಯಿಸಿಕೊಂಡು, ಈಗಾಗಲೇ ಬೃಹತ್ ಕಾರ್ಯಕ್ರಮವನ್ನೂ ಮಾಡಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯಗತಾಯ ಗೆಲುವು ಸಾಧಿಸಲೇಬೇಕು ಎಂಬ ಉಮೇದು ಕಮಲ ಪಾಳೆಯದಲ್ಲಿ ಮೂಡಿದೆ. ಹೀಗಾಗಿ ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಂತೆ ಸ್ಥಳೀಯ ನಾಯಕರೆಲ್ಲ ಸೇರಿ ವಾಲ್ಮೀಕಿ ಹಗರಣದ ವಿರುದ್ಧ ಸಂಡೂರು ಪಟ್ಟಣದಲ್ಲಿ ಈಚೆಗೆ ಪ್ರತಿಭಟನೆ ನಡೆಸುವ ಹೆಸರಿನಲ್ಲಿ ಚುನಾವಣಾ ಪೂರ್ವ ತಾಲೀಮು ಆರಂಭಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ಮುಕ್ತ ಅವಕಾಶ ಸಿಕ್ಕ 2ನೇ ದಿನಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕೂಡ ಸಂಡೂರು ಪಟ್ಟಣದಲ್ಲಿ ರ‍್ಯಾಲಿ ನಡೆಸಿ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು, ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ.

ಸಂಡೂರು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ಧಾರಿ ಸಿಎಂ ಸಿದ್ದರಾಮಯ್ಯ ಅವರ ಹೆಗಲ ಮೇಲಿದೆ. ಕಾರಣ ಸಂಡೂರು ಕ್ಷೇತ್ರದಲ್ಲಿ ಅಹಿಂದ ಮತದಾರರೇ ಹೆಚ್ಚಿದ್ದಾರೆ. ಅಹಿಂದ ನಾಯಕ ಎನ್ನುವ ಹೆಗ್ಗಳಿಕೆ ಇರುವ ಸಿದ್ದರಾಮಯ್ಯ ಅವರಿಗೆ ಸಂಡೂರು ಮಾತ್ರ ಬಹಳ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಸಂಡೂರು ಕ್ಷೇತ್ರದಲ್ಲಿ ಇ.ತುಕಾರಾಂ ಕುಟುಂಬಕ್ಕೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆ‌ ಹೆಚ್ಚಿದೆ. ಶಾಸಕರಾಗಿ ನಾಲ್ಕನೇ ಬಾರಿ ಜಯ ಸಾಧಿಸಿದ್ದರೂ ಇ.ತುಕಾರಾಂ ಅವರನ್ನು ಸಿದ್ದರಾಮಯ್ಯ ಅವರು ಮನವೊಲಿಸಿ ಒಂದಷ್ಟು ಭರವಸೆಗಳ ಮೇಲೆ ದೆಹಲಿಗೆ ಕಳುಹಿಸಿದ್ದಾರೆ. ಅದರ ಪ್ರಕಾರ ತುಕಾರಾಂ ಸಂಸದರಾದರೆ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ವಾಗ್ದಾನಗಳಾಗಿದ್ದು ಬಹುತೇಕ ತುಕಾರಾಂ ಪತ್ನಿ ಅನ್ನಪೂರ್ಣ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆಯೇ ತುಮಟಿ ಲಕ್ಷ್ಮಣ, ಶಿವರಾಮ್ ಭೀಮಪ್ಪ ಸೇರಿ ಮೂರ್ನಾಲ್ಕು ಜನ ಕಾಂಗ್ರೆಸ್‌ನ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿಯಿಂದ ಮಾಜಿ ಸಂಸದ ದೇವೇಂದ್ರಪ್ಪ, ಕಳೆದ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿರುವ ಕೆ.ಎಸ್ ದಿವಾಕರ್ ಸೇರಿದಂತೆ 19 ಕ್ಕೂ ಹೆಚ್ಚು ಅಭ್ಯರ್ಥಿಗಳು ಬಿಜೆಪಿಯಿಂದ ಆಕಾಂಕ್ಷಿಗಳಾಗಿದ್ದಾರೆ. ಅತ್ತ ಶ್ರೀರಾಮುಲು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

6

ಶಿಗ್ಗಾಂವಿ ಕ್ಷೇತ್ರ ಕದನ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಆಯ್ಕೆಯಾಗಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಶಿಗ್ಗಾಂವಿಯನ್ನು ಈ ಬಾರಿಯಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಬಯಕೆ ಕಾಂಗ್ರೆಸ್‌ನದ್ದು. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ (ಬಿಜೆಪಿಗಿಂತ 8,500 ಮತಗಳ ಅಂತರ) ಸಿಕ್ಕಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ ಎಂಬುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ.

ಈ ಕ್ಷೇತ್ರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದರೂ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಿಲ್ಲುತ್ತಿದ್ದ ಮುಸ್ಲಿಂ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಪದೇ ಪದೇ ಸೋಲು ಅನುಭವಿಸಿರುವ ಕಾಂಗ್ರೆಸ್‌ಗೆ ಹಿಂದೂಗಳಲ್ಲಿ ಪ್ರಬಲ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಿದರೆ ಈ ಬಾರಿ ಮುಸ್ಲಿಂ ಹಾಗೂ ಇತರೆ ಸಮುದಾಯಗಳ ಮತಗಳು ಸಿಕ್ಕು ಗೆಲುವು ಸಾಧ್ಯವೆಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ.

ಹೀಗಾಗಿ ಕಾಂಗ್ರೆಸ್‌ನಲ್ಲಿ ಮುಸ್ಲಿಮೇತರವಾಗಿ ಸಚಿವ ಬೈರತಿ ಸುರೇಶ್‌ ಅವರ ಪುತ್ರ ಸಂಜಯ್‌, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆರ್‌ ಶಂಕರ್‌ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವ್‌ ಕುಮಾರ್‌ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಮುಸ್ಲಿಮರೇ ಇಲ್ಲಿ ನಿರ್ಣಾಯಕವಾಗಿದ್ದರೂ ಈವರೆಗೂ ಗೆಲುವು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಕಾರಣ ಕ್ಷೇತ್ರದ ಒಳರಾಜಕಾರಣ. ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಕಾಂಗ್ರೆಸ್‌ ನಾಯಕರಿಗೆ ಹೆಚ್ಚಿನ ಉತ್ಸಾಹ ಇಲ್ಲಿ ಕಂಡಿಲ್ಲ. ವಾಸ್ತವ ಹೀಗಿದ್ದರೂ ಈ ಭಾರಿಯೂ ಮುಸ್ಲಿಮರಿಗೆ ಟಿಕೆಟ್‌ ನೀಡಬೇಕು ಎಂದ ಆಗ್ರಹ ಕ್ಷೇತ್ರದಲ್ಲಿದೆ. ಮುಸ್ಲಿಂ ಸಮುದಾಯದಿಂದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ಯಾಸೀರ್‌ ಖಾನ್‌ ಪಠಾನ್‌ ಕಾಂಗ್ರೆಸ್‌ನ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿಯಿಂದ ತಮ್ಮ ಪುತ್ರ ಭರತ್ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದರೂ, ಅವರ ಹೆಸರೇ ಪಕ್ಷದ ಪರಿಶೀಲನಾ ಪಟ್ಟಿಯಲ್ಲಿದೆ. ಹಿಂದೆ ಬೀಳಗಿಯಲ್ಲಿ ಸೋತಿದ್ದ ಪಂಚಮಸಾಲಿ ಸಮುದಾಯದ ನಾಯಕ, ಮಾಜಿ ಸಚಿವ ಮುರುಗೇಶ ನಿರಾಣಿ ಕೂಡ ಶಿಗ್ಗಾಂವಿ ಕಡೆ ಮುಖ ಮಾಡಿದ್ದಾರೆ. ಇವರ ನಡುವೆಯೇ ಹಲವಾರು ತಿಂಗಳುಗಳಿಂದ ಶಿಗ್ಗಾಂವಿಯಲ್ಲಿ ಬೀಡುಬಿಟ್ಟಿರುವ, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದು ಜನರ ಮನಸ್ಸು ಗೆದ್ದಿರುವ ಕೆಆರ್‌ಎಸ್ ಪಕ್ಷದ ರವಿಕೃಷ್ಣಾ ರೆಡ್ಡಿಯವರೂ ಕಣದಲ್ಲಿದ್ದಾರೆ.

ಒಟ್ಟಾರೆ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ಹಾಗೂ ಮತ್ತೊಬ್ಬರಿಂದ ಕಿತ್ತುಕೊಳ್ಳುವ ಹಣಾಹಣಿಗೆ ವೇದಿಕೆಯಾಗಲಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X