ಮಂಗಳವಾರ(ಸೆ.8) ವಿವಿಧ ರಾಜ್ಯಗಳ ಏಳು ಸ್ಥಾನಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶದಲ್ಲಿ ಇಂಡಿಯಾ ಒಕ್ಕೂಟ 4 ಹಾಗೂ ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಇಂಡಿಯಾ ಒಕ್ಕೂಟದ ಭಾಗವಾಗಿ ಕೇರಳದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ, ಜಾರ್ಖಂಡ್‌ನಲ್ಲಿ ಜೆಎಂಎಂ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ತ್ರಿಪುರಾದ ಎರಡು ಕ್ಷೇತ್ರ ಹಾಗೂ ಉತ್ತರಾಖಂಡದ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.
ಕೇರಳದ ಪುತ್ತುಪಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ 4,300 ಮತಗಳಿಂದ ಬಿಜೆಪಿಯನ್ನು ಸೋಲಿಸಿತು. ಜಾರ್ಖಂಡ್‌ನ ಡುಮ್ರಿಯಲ್ಲಿ ಜೆಎಂಎಂ ಅಭ್ಯರ್ಥಿ ಬೇಬಿ ದೇವಿ 17,000 ಮತಗಳಿಂದ ಗೆದ್ದಿದ್ದಾರೆ. ತ್ರಿಪುರಾದ ಧನ್‌ಪುರ್ ಮತ್ತು ಬೊಕ್ಸಾನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಾಂಸಾಹಾರ ಸೇವನೆಯಿಂದ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಐಐಟಿ ಪ್ರಾಧ್ಯಾಪಕ ವಿವಾದಾತ್ಮಕ ಹೇಳಿಕೆ
ಉತ್ತರಾಖಂಡದಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಪೈಪೋಟಿಯ ನಡುವೆ ಕೇವಲ ಮೂರು ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಿದರು. ಉತ್ತರ ಪ್ರದೇಶದ ಎಸ್‌ಪಿ ಅಭ್ಯರ್ಥಿ ಕೇಸರಿ ಪಕ್ಷದ ಅಭ್ಯರ್ಥಿಯನ್ನು 30 ಸಾವಿರ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದಾರೆ.
ಉತ್ತರ ಪ್ರದೇಶದ ಘೋಸಿ, ಜಾರ್ಖಂಡ್‌ನ ಡುಮ್ರಿ, ಕೇರಳದ ಪುತ್ತುಪ್ಪಲ್ಲಿ, ಉತ್ತರಾಖಂಡದ ಬಾಗೇಶ್ವರ್ ಮತ್ತು ಪಶ್ಚಿಮ ಬಂಗಾಳದ ಧೂಪ್‌ಗುರಿ ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 5 ರಂದು ಉಪ ಚುನಾವಣೆ ನಡೆದಿದ್ದವು.
“ನನ್ನ ತಂದೆಯಂತೆಯೇ ನನ್ನ ರಾಜಕೀಯವೂ ಜನಪರವಾಗಿರುತ್ತದೆ. ನಾನು ನನ್ನ ತಂದೆಯ ಕೆಲಸವನ್ನು ನೋಡಿದ್ದೇನೆ ಮತ್ತು ನಾನು ಆ ದಾರಿಯಲ್ಲಿ ಹೋಗಲು ಬಯಸುತ್ತೇನೆ. ನನ್ನ ತಂದೆ ಪ್ರಾರಂಭಿಸಿದ್ದನ್ನು ನಾನು ಮುಂದುವರಿಸುತ್ತೇನೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ತಿಳಿಸಿದ್ದಾರೆ.