ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವು ಸಾಧಿಸಿ, ಅಧಿಕಾರ ಉಳಿಸಿಕೊಂಡಿದೆ. ಅಂತೆಯೇ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವೂ ಅಧಿಕಾರ ಉಳಿಸಿಕೊಂಡು, ಮತ್ತೆ ಸರ್ಕಾರ ರಚನೆಗೆ ಸಜ್ಜಾಗಿದೆ. ಇದೇ ಸಮಯದಲ್ಲಿ, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ 48 ವಿಧಾನಸಭಾ ಕ್ಷೇತ್ರ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಈ ಪೈಕಿ, 20 ವಿಧಾನಸಭಾ ಕ್ಷೇತ್ರ ಮತ್ತು 1 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, 7 ವಿಧಾನಸಭಾ ಕ್ಷೇತ್ರ ಮತ್ತು 1 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿವೆ. ಉಳಿದ 21 ಕ್ಷೇತ್ರಗಳ ಪೈಕಿ ಪಂಜಾಬ್‌ನಲ್ಲಿ ಎಎಪಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸೇರಿದಂತೆ ಆಯಾ ರಾಜ್ಯಗಳ ಸ್ಥಳೀಯ ಪಕ್ಷಗಳು ಗೆದ್ದು ಬೀಗಿವೆ.
ಉತ್ತರ ಪ್ರದೇಶದಲ್ಲಿ 9, ರಾಜಸ್ಥಾನಲ್ಲಿ 7, ಪಶ್ಚಿಮ ಬಂಗಾಳದಲ್ಲಿ 6, ಅಸ್ಸಾಂನಲ್ಲಿ 5, ಬಿಹಾರ ಮತ್ತು ಪಂಜಾಬ್‌ನಲ್ಲಿ ತಲಾ 4, ಕರ್ನಾಟಕದಲ್ಲಿ 3, ಕೇರಳ, ಮಧ್ಯಪ್ರದೇಶ, ಸಿಕ್ಕಿಂನಲ್ಲಿ ತಲಾ 1 ಹಾಗೂ ಛತ್ತಿಸ್‌ಗಢ, ಗುಜರಾತ್, ಮೇಘಾಲಯ ಮತ್ತು ಉತ್ತರಾಖಂಡಲ್ಲಿ ತಲಾ 1 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಅಲ್ಲದೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆದಿದೆ.
ಈ ಪೈಕಿ, ಪಶ್ಚಿಮ ಬಂಗಾಳದ ಒಟ್ಟು ಆರೂ ಕ್ಷೇತ್ರಗಳಲ್ಲಿಯೂ ಟಿಎಂಸಿ, ಕರ್ನಾಟಕದ ಒಟ್ಟು ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ‘ಕ್ಲೀನ್ ಸ್ವೀಪ್’ ಮಾಡಿವೆ.

ಇನ್ನು ಲೋಕಸಭಾ ಉಪಚುನಾವಣೆಯಲ್ಲಿ ಕೇರಳದ ವಯನಾಡ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬರೋಬ್ಬರಿ 6 ಲಕ್ಷ ಮತಗಳನ್ನು ಪಡೆದಿದ್ದು, ಸಿಪಿಐ ಅಭ್ಯರ್ಥಿ ಸತ್ಯನ್ ಮೊಕೆರಿ ಅವರನ್ನು 4 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಿಯಾಂಕಾ ಮೊದಲ ಬಾರಿಗೆ ಸಂಸದೆಯಾಗಿ ಸಂಸತ್ ಪ್ರವೇಶಿಸಿದ್ದಾರೆ.
ಮಹಾರಾಷ್ಟ್ರದ ನಾಂದೆಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಂತುಕ್‌ರಾವ್ ಹಂಬಾರ್ಡೆ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 45 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.