ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ನಮ್ಮ ರಾಜ್ಯಗಳಲ್ಲಿ ಜಾರಿ ಮಾಡುವುದಿಲ್ಲ ಎಂದು ಹೇಳಿದ ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಸರ್ಕಾರಕ್ಕೆ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಸಂವಿಧಾನದ 11ನೇ ವಿಧಿ ಪೌರತ್ವಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುವ ಹಕ್ಕನ್ನು ಸಂಸತ್ತಿಗೆ ನೀಡುತ್ತದೆ. ಇದು ಕೇಂದ್ರದ ವಿಚಾರ, ರಾಜ್ಯಗಳಿಗೆ ಸಂಬಂಧಿಸಿದ್ದಲ್ಲ” ಎಂದು ಹೇಳಿದರು.
ಸುದ್ದಿ ಸಂಸ್ಥೆ ಎಎನ್‌ಐ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, “ಲೋಕಸಭೆ ಚುನಾವಣೆ ಬಳಿಕ ಎಲ್ಲರೂ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಜನರನ್ನು ಓಲೈಕೆ ಮಾಡಲು ವಿರೋಧ ಪಕ್ಷಗಳು ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಸಿಎಎ ಜಾರಿ ಮಾಡಿ ವೋಟ್ ಬ್ಯಾಂಕ್ ಸೃಷ್ಟಿಸುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ವಿಪಕ್ಷಗಳಿಗೆ ಬೇರೆ ಕೆಲಸವಿಲ್ಲ, ಅವರು ಆಡಳಿತ ನಡೆಸುತ್ತಿದ್ದಾಗ ನೀಡಿದ ಭರವಸೆಯನ್ನು ಈಡೇರಿಸುತ್ತಿರಲಿಲ್ಲ. ಆದರೆ ಬಿಜೆಪಿಯಾಗಲಿ ಮೋದಿಯಾಗಲಿ ಹಾಗೆ ಅಲ್ಲ. ಹೇಳಿದ್ದನ್ನು ನಾವು ಮಾಡುತ್ತೇವೆ. ಮೋದಿಯ ಪ್ರತಿ ಗ್ಯಾರಂಟಿ ಪೂರ್ಣವಾಗುತ್ತದೆ” ಎಂದರು.
“ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್‌ನಿಂದಲೂ ರಾಜಕೀಯ ಲಾಭವಿದೆ ಎಂದು ವಿಪಕ್ಷಗಳು ಹೇಳಿವೆ, ಹಾಗಂತ ನಾವು ಭಯೋತ್ಪಾದನೆ ವಿರುದ್ಧ ಕ್ರಮತೆಗೆದುಕೊಳ್ಳದೇ ಕೂರಲಾಗುತ್ತಾ?” ಎಂದು ಪ್ರಶ್ನಿಸಿದ ಸಚಿವರು, “370 ವಿಧಿ ರದ್ದು ಮಾಡಿದಾಗಲು ರಾಜಕೀಯ ಎಂದರು. ನಾವು 1950ರಿಂದ ಹೇಳುತ್ತಿದ್ದೆವು, ಅಧಿಕಾರಕ್ಕೆ ಬಂದಾಗ ಕ್ರಮಕೈಗೊಂಡೆವು” ಎಂದು ತಿಳಿಸಿದರು.
ಇನ್ನು 2019ರಲ್ಲಿ ಈ ಕಾಯ್ದೆ ಅಂಗೀಕಾರವಾದರೂ ಈವರೆಗೆ ಜಾರಿ ಮಾಡದೆ ಚುನಾವಣೆ ಸಮೀಪಿಸಿದಾಗ ಜಾರಿ ಮಾಡಿದ ಕೇಂದ್ರದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಓವೈಸಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಬ್ಯಾನರ್ಜಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ. ಇಲ್ಲಿ ಜಾರಿ ಮಾಡಿದ ಸಮಯದ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಕೋವಿಡ್ ಕಾರಣದಿಂದಾಗಿ ಜಾರಿ ವಿಳಂಬವಾಗಿದೆ. ಸಿಎಎ ಜಾರಿ ಮಾಡುತ್ತೇವೆ ಎಂದು ನಾನು ನಾಲ್ಕು ವರ್ಷದಲ್ಲಿ 41 ಬಾರಿ ಹೇಳಿದ್ದೇನೆ” ಎಂದರು.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು ಮಾಡಲಾಗುವುದು ಎಂದು ವಿಪಕ್ಷಗಳು ಹೇಳಿದ್ದು ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ, “ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲ, ಇದು ವಿಪಕ್ಷಗಳಿಗೂ ತಿಳಿದಿದೆ. ಸಿಎಎಯನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರ ಜಾರಿ ಮಾಡಿದೆ, ಇದನ್ನು ಹಿಂಪಡೆಯಲು ಸಾಧ್ಯವೇ ಇಲ್ಲ” ಎಂದು ಹೇಳಿದರು.
