“ಲೋಕಸಭೆ ಚುನಾವಣೆ ಬಳಿಕ ‘ಇಂಡಿಯಾ’ ಮೈತ್ರಿಕೂಟವು ಭಾರತದಲ್ಲಿ ಅಧಿಕಾರಕ್ಕೆ ಬಂದರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ರದ್ದು ಮಾಡಲಾಗುವುದು” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. “ಸಿಎಎ ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿ ಸರಿಯಲ್ಲ” ಎಂದು ವಾದಿಸಿದ್ದಾರೆ.
“ದೇಶ ವಿಭಜನೆಯಾದಾಗ ಧರ್ಮವೇ ದೇಶದ ಗುರುತಾಗಬೇಕು ಎಂದವರು ದೇಶದಿಂದ ಹೊರನಡೆದು ಪಾಕಿಸ್ತಾನ ದೇಶವನ್ನು ಸ್ಥಾಪಿಸಿದರು. ಮಹಾತ್ಮ ಗಾಂಧಿ, ಜವಾಹರ ಲಾಲ್ ನೆಹರು, ಮೌಲಾನಾ ಅಜಾದ್, ಡಾ. ಬಿ.ಆರ್ ಅಂಬೇಡ್ಕರ್ ಒಂದು ದೇಶಕ್ಕೆ ಧರ್ಮವೇ ಮೂಲವಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟ ಎಲ್ಲರಿಗಾಗಿ, ನಾವು ಕಟ್ಟಿದ ದೇಶ ಮತ್ತು ನಮ್ಮ ಸಂವಿಧಾನ ಎಲ್ಲರಿಗಾಗಿ ಎಂದು ಹೇಳಿದರು” ಎಂದು ಇತಿಹಾಸವನ್ನು ಶಶಿ ತರೂರ್ ನೆನಪಿಸಿಕೊಂಡರು.
“ಸಿಎಎ ಅನ್ನು ನಾಲ್ಕು ವರ್ಷಗಳ ಹಿಂದೆ ಅಂಗೀಕರಿಸಲಾಗಿದೆ. ಆದರೆ ಈಗ ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಅದನ್ನು ಜಾರಿ ಮಾಡಲಾಗುತ್ತಿರುವುದು ಚುನಾವಣಾ ಲಾಭಕ್ಕಾಗಿ ಎಂಬುವುದು ಸ್ಪಷ್ಟ. ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದು ತಿಳಿಸಿದರು.
“ಇಂಡಿಯಾ ಮೈತ್ರಿ ಒಕ್ಕೂಟ ಮತ್ತು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ನಾವು ಅನುಮಾನವನ್ನು ಹುಟ್ಟಿಸುವ ಕಾನೂನುಗಳನ್ನು ರದ್ದು ಮಾಡುತ್ತೇವೆ. ಇದು ನಮ್ಮ ಪ್ರಣಾಳಿಕೆ ಆಗಿರಲಿದೆ. ನಮ್ಮ ನಾಗರಿಕತೆಗೆ ಧರ್ಮ ಮುಖ್ಯ ಎಂಬ ಕಾನೂನನ್ನು ನಾವು ಬೆಂಬಲಿಸಲಾರೆವು” ಎಂದು ಹೇಳಿದರು.
ಕೇಂದ್ರ ಸರ್ಕಾರವು ಮಾರ್ಚ್ 11ರಂದು ಸಿಎಎ ಜಾರಿ ಮಾಡಿದ್ದು, ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಸಿಎಎ ವಿರುದ್ಧ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದೆ.