ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಯಿತು. ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕವಾದ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಭೆ ನಡೆಸಲು ತೀರ್ಮಾನಿಸಿ ಈಗಾಗಲೇ ಕಲಬುರಗಿ ಆಗಿದೆ. ಈಗ ಮೈಸೂರು ವಿಭಾಗದ್ದು ನಡೆದಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಹಾಗೂ ಬೆಂಗಳೂರು ವಿಭಾಗದ ಸಭೆಯನ್ನು ಮಾಡಲಿದ್ದೇವೆ. ಬೆಳಗಾವಿ ವಿಭಾಗದ್ದು ವಿಜಯಪುರ ಹಾಗೂ ಬೆಂಗಳೂರು ವಿಭಾಗದ್ದನ್ನು ನಂದಿ ಬೆಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಮೈಸೂರು ವಿಭಾಗದ 78 ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಕಲಬುರಗಿ ವಿಭಾಗದಲ್ಲಿ 56 ವಿಷಯಗಳ ತೀರ್ಮಾನ ಆಗಿತ್ತು. ಈಗ 3647 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ದೊರೆತಿದೆ. ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ, ಇಂಧನ, ಆರೋಗ್ಯ, ಆರ್‌ಡಿಪಿಆರ್ ಇಲಾಖೆ, ಕೆರೆಗಳಿಗೆ ನೀರು, ಬುಡಕಟ್ಟು ಅಭಿವೃದ್ಧಿ, ಹಾಡಿಗಳಿಗೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
1787 ಕೋಟಿ ಯೋಜನೆಗಳು ನೀರಾವರಿ, ಪರಿಶಿಷ್ಟ ಪಂಗಡದ ಜನರು ವಾಸಿಸುವ ಕಡೆಗೆ 237 ಕೋಟಿ ರೂ. ಮಾನವ ವನ್ಯಜೀವಿ ಸಂಘರ್ಷ ನಿವಾರಣೆಗೆ ಚಾಮರಾಜನಗರ ಜಿಲ್ಲೆಗೆ 210 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ಉಗ್ರನ ರೈಫಲ್ ಕಸಿದುಕೊಳ್ಳಲು ಹೋಗಿ ಗುಂಡೇಟಿಗೆ ಸಾವಿಗೀಡಾದ ಕುದುರೆ ರೈಡರ್ ಸೈಯದ್ ಹುಸೇನ್
ಕುಡಿಯುವ ನೀರಿನ ಯೋಜನೆಗೆ 317 ಕೋಟಿ ರೂ., ಆರೋಗ್ಯ ಸುಧಾರಣೆಗೆ 210 ಕೋಟಿ ರೂ., ಕೊಳ್ಳೇಗಾಲದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಘೋಷಿಸಿದರು. ಈಗ ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 250 ಹಾಸಿಗೆಗಳ ಆಸ್ಪತ್ರೆ ಮಾಡಲಾಗುವುದು. ಪ್ರವಾಸೋದ್ಯಮ ಇಲಾಖೆಗೆ 300 ಕೋಟಿ ರೂ., ಹೊಸ ತಾಲೂಕಾದ ಹನೂರಿನಲ್ಲಿ ತಾಲೂಕು ಭವನ, ತಾಲೂಕು ಆಸ್ಪತ್ರೆ (50 ಹಾಸಿಗೆ ಸಾಮರ್ಥ್ಯ) ನಿರ್ಮಿಸಲಾಗುವುದು ಎಂದು ಸಿಎಂ ತಿಳಿಸಿದರು.
ಚಿಕ್ಕಲ್ಲೂರಿನಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ ಪ್ರಾಧಿಕಾರ ರಚನೆ ಮಾಡಲಾಗುವುದು. ಇಲವಾಲ ಹೋಬಳಿಯಲ್ಲಿ ಕ್ರಿಕೆಟ್ ಮೈದಾನಕ್ಕೆ ಜಾಗ ಕೊಡಲಾಗುವುದು. ಅಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾರತ್ ಜೋಡೊ ಸಂದರ್ಭದಲ್ಲಿ ಬದನವಾಳು ಗ್ರಾಮಕ್ಕೆ ಭೇಟಿ ಕೊಟ್ಟಿದ್ದವು. ಅಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ ಅಭಿವೃದ್ಧಿಗೆ 40 ಕೋಟಿ ರೂ. ನೀಡಲಾಗುವುದು. ಈ ವರ್ಷ 20 ಕೋಟಿ ಖರ್ಚು ಮಾಡಲಾಗುವುದು ಎಂದರು.
ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಜಾಗ, ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು 30 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ಮಾಡಲಾಗುವುದು, ಬುಡಕಟ್ಟು ಜನರು ವಾಸಿಸುವ ಕಡೆಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು ಹಾಗೂ ಚಾಮರಾಜನಗರ, ಮೈಸೂರು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ಚಾಮರಾಜ ನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಮಾಡಲಾಗುವುದು, ಅಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಕ್ರೀಡಾಂಗಣ ಅಭಿವೃದ್ಧಿಗೆ 15 ಕೋಟಿ ರೂ. ಕೊಡಲಾಗುವುದು ಎಂದು ತಿಳಿಸಿದರು.
ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ಕುರಿತು ಖಂಡನಾ ನಿರ್ಣಯ
ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ಕುರಿತು ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಖಂಡನಾ ನಿರ್ಣಯದ ಪ್ರಸ್ತಾಪ ಮಾಡಿದ ಸಿಎಂ ಸಿದ್ದರಾಮಯ್ಯ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ನಮ್ಮ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲು ತೀರ್ಮಾನಿಸಿದೆ. ಉಗ್ರರ ದಾಳಿಗಳು ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯಗಳು ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು. ಈ ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಯಿತು. ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ನಮ್ಮ ಸರ್ಕಾರವು ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.