ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಬ್ ಕಮಿಟಿ ಜೊತೆ ಎಸ್‌ಐಟಿ ರಚಿಸುವ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗಿದೆ.
ಸಂಪುಟ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, “ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಕುನ್ಹಾ ಆಯೋಗ ಭಾಗಶಃ ವರದಿ ನೀಡಿದೆ. ಅದರ ಮೇಲೆ ಕೆಲವು ನಿರ್ಣಯ ತೆಗೆದುಕೊಂಡಿದ್ದೇವೆ. ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ಎಸ್ಐಟಿ ರಚನೆಗೆ ತೀರ್ಮಾನ ಮಾಡಿದ್ದೇವೆ ಹಾಗೂ ಕ್ಯಾಬಿನೆಟ್ ಸಬ್ ಕಮಿಟಿ ಕೂಡ ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ” ಎಂದರು.
“ಸತ್ಯಸಂಶೋಧನಾ ವರದಿಯ ನಂತರ ಯಾರ ಪಾತ್ರ ಏನು ಎಂಬುದನ್ನು ತನಿಖೆ ಮಾಡಿ ಎಸ್.ಐ.ಟಿ ಕ್ರಮ ಕೈಗೊಳ್ಳಲಿದೆ. ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದ್ದು, 7223.64 ಕೋಟಿ ರೂ. ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯ ಅವ್ಯವಹಾರದ ಕುರಿತು ತನಿಖೆ ನಡೆಸಿದೆ” ಎಂದರು.
“500 ಕೋಟಿಗಳ ಮೊತ್ತದ ವಸೂಲಾತಿ ಶಿಫಾರಸ್ಸು ಮಾಡಿದೆ. ಬಿಬಿಎಂಪಿ ನಾಲ್ಕು ವಲಯಗಳ ಮತ್ತು ರಾಜ್ಯದ ಎಲ್ಲ 31 ಜಿಲ್ಲೆಗಳ ವರದಿ ಸಲ್ಲಿಕೆ ಬಾಕಿಯಿದೆ. 55000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು
“ಈ ತನಿಖೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ಉಪಸಮಿತಿಯ ಸದಸ್ಯರನ್ನು ಅಂತಿಮಗೊಳಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ” ಎಂದು ಸಚಿವರು ವಿವರಿಸಿದರು.
“ಹಗರಣದಲ್ಲಿ ಭಾಗಿಯಾದ ಕಂಪನಿಗಳು, ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲು ನಿರ್ಧಾರ ಮಾಡಲಾಗಿದೆ. ಎಲ್ಲೆಲ್ಲಿ ಕ್ರಿಮಿನಲ್ ಎಲಿಮೆಂಟ್ ಇದೆ ಎಸ್ಐಟಿ ಅದರ ಬಗ್ಗೆ ಗಮನ ಹರಿಸುತ್ತದೆ. ಯಾರ ಪಾತ್ರ ಏನೂ ಎಂಬುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ. ಪೂರ್ಣ ವರದಿ ಬಂದ ಮೇಲೆ ಏನು ಅವ್ಯವಹಾರ, ಯಾರು ಪಾಲುದಾರರು ಗೊತ್ತಾಗುತ್ತದೆ” ಎಂದು ತಿಳಿಸಿದರು.