ರಾಜ್ಯದಲ್ಲಿ ಕಾಂಗ್ರೆಸ್ ಒಳಗೆ ಅಧಿಕಾರ ಜಟಾಪಟಿ ನಡೆಯುತ್ತಲೇ ಇದೆ. ಅಂತಹ ಜಟಾಪಟಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ಮುಖ್ಯಮಂತ್ರಿ ಬದಲಾವಣೆ, ಮೂರು ಉಪ ಮುಖ್ಯಮಂತ್ರಿ ಹುದ್ದೆಗಳ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಕಾಂಗ್ರೆಸ್ ಒಳಗೆ ಚರ್ಚೆಗಳು ನಡೆದು, ಆ ಎಲ್ಲ ಚರ್ಚೆಗಳಿಗೆ ಬ್ರೇಕ್ ಹಾಕಲಾಗಿತ್ತು. ಅದಾದ ಬಳಿಕ, ಸಂಪುಟ ಪುನರ್ ರಚನೆಯ ಚರ್ಚೆ ಕೆಳೆದ ಕೆಲ ತಿಂಗಳುಗಳಿಂದ ಮುನ್ನೆಲೆಯಲ್ಲಿತ್ತು. ಇದೀಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ, ಸಂಪುಟ ಪುನರ್ ರಚನೆ ಅಥವಾ ಸುಂಪುಟ ವಿಸ್ತರಣೆಯ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಹೇಳಿಕೆ ಕಾಂಗ್ರೆಸ್ ಒಳಗೆ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಕಾಂಗ್ರೆಸ್ ನಾಯಕರ ಓಲೈಕೆಗೆ ಮುಂದಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸಂಪುಟದ ಪುನರ್ ರಚನೆ ಅಥವಾ ವಿಸ್ತರಣೆಯಾಗುತ್ತದೆ ಎಂಬ ವಿಚಾರ ಆಗಾಗ್ಗೆ ಚರ್ಚೆಯಲ್ಲಿತ್ತು. ಆದರೆ, ವಾಲ್ಮೀಕಿ ನಿಗಮ ಮತ್ತು ಮುಡಾದಲ್ಲಿ ಹಗರಣ ನಡೆದಿವೆ ಎಂಬ ಆರೋಪಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದ ರಾಜ್ಯ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ.
ಇದೀಗ, ಹಗರಣ ಆರೋಪಗಳು ಬದಿಗೆ ಸರಿದಿವೆ. ಈ ಬೆನ್ನಲ್ಲೇ, ಸಚಿವ ಸಂಪುಟದ ಪುನರ್ ರಚನೆ ಚರ್ಚೆ ಮುನ್ನೆಲೆ ಬಂದಿದೆ. ಡಿಸೆಂಬರ್ ಅಂತ್ಯದಲ್ಲೇ ಸಚಿವ ಸಂಪುಟ ಪುನರ್ ರಚನೆಯಾಗುತ್ತದೆ ಎಂಬ ಮಾತುಗಳೂ ಈ ಹಿಂದೆ ಕೇಳಿಬಂದಿದ್ದವು. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸಚಿವ ಸಂಪುಟದ ಪುನರ್ ರಚನೆ ಬಗ್ಗೆ ಒಲವಿಲ್ಲದ ಕಾರಣ, ಸಂಪುಟ ಪುನರ್ ರಚನೆಯ ಚರ್ಚೆ ಹಿನ್ನೆಲೆಗೆ ಸರಿದಿತ್ತು ಎಂದು ಹೇಳಲಾಗಿದೆ.
ಇತ್ತೀಚೆಗೆ, ಕೆ.ಜೆ. ಜಾರ್ಜ್ ಮತ್ತು ಟಿ.ಬಿ ಜಯಚಂದ್ರ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ್ದರು. ಈ ಬೆನ್ನಲ್ಲೇ, ಜನವರಿ 1ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಆಗುವ ಬಗ್ಗೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ಸಂಪುಟದಲ್ಲಿರುವ ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಅಸಮಾಧಾನವಿದೆ. ಕೆಲ ಸಚಿವರು ತಮ್ಮ ಇಲಾಖೆಯ ಕೆಲಸಗಳಿಗೆ ಸರಿಯಾಗಿ ಒತ್ತು ಕೊಡುತ್ತಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳಿವೆ. ಅಂತಹ ಸುಮಾರು ಐದು ಅಥವಾ ಆರು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಕರ್ನಾಟಕದಲ್ಲಿ ವಕ್ಫ್ ವಿವಾದ: ಅಂತಿಮವಾಗಿ ಗೆದ್ದಿದ್ದು ಯಾರು?
ಜನವರಿ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಆ ಸಮಯದಲ್ಲಿ, ಅವರು ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಬಹುಶಃ, ರಾಜ್ಯ ಬಜೆಟ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆದಾಗ್ಯೂ, ಸಂಪುಟ ಪುನರ್ ರಚನೆ ಮಾಡುವುದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಇಷ್ಟವಿಲ್ಲ. ಪುನರ್ ರಚನೆಗೆ ಅವರು ಒಪ್ಪಿಕೊಳ್ಳುತ್ತಿಲ್ಲ. ಒಂದು ವೇಳೆ, ಡಿ.ಕೆ ಶಿವಕುಮಾರ್ ಒಪ್ಪದಿದ್ದರೆ ಸಂಪುಟ ಪುನರ್ ರಚನೆಯನ್ನು ಮುಂದೂಡುವ ಸಾಧ್ಯತೆಯೂ ಇದೆ ಎಂಬ ಮಾತುಗಳೂ ಕೇಳಿಬಂದಿವೆ.
ಆದರೂ, ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಸಲಿದೆ. ಈ ಬಾರಿ, ಸಂಪುಟಕ್ಕೆ ‘ಸರ್ಜರಿ’ ನಡೆಯಲಿದೆ ಎಂಬ ನಂಬಿಕೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ಶಾಸಕರಲ್ಲಿದೆ.
ಅಲ್ಲದೆ, ವಾಲ್ಮೀಕಿ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ, ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದೂ ಹೇಳಲಾಗುತ್ತಿದೆ.