ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್‍ಗಿಂತ ಹೆಚ್ಚಾದರೆ, ಅಮೆರಿಕದ ಆರ್ಥಿಕತೆಗೆ ಹಾನಿಯಾಗಿ, ಅಧ್ಯಕ್ಷ ಟ್ರಂಪ್‌ರ ಯೋಜನೆಗಳು ಏರುಪೇರಾಗಬಹುದು. ಇರಾನ್‌ನನ್ನು ಶಾಂತಿಗಾಗಿ ಒತ್ತಾಯಿಸಲು ಇದು ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಇರಾನ್ ಮೇಲೆ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಯು ಇರಾನ್‌ನ ಪರಮಾಣು ಸೌಲಭ್ಯಗಳಿಗಿಂತ ನಾಯಕತ್ವ ಮತ್ತು ಸೈನಿಕ ಸಾಮರ್ಥ್ಯವನ್ನು ಗುರಿಯಾಗಿಟ್ಟಂತಿದೆ.
ಇರಾನ್‌ನ ಉನ್ನತ ಅಧಿಕಾರಿಗಳಾದ ಜನರಲ್ ಮೊಹಮ್ಮದ್ ಬಾಘೇರಿ ಮತ್ತು IRGC ಏರೋಸ್ಪೇಸ್ ಫೋರ್ಸ್ ಕಮಾಂಡರ್ ಅಮೀರ್-ಅಲಿ ಹಾಜಿಜಾದೆ ಸೇರಿದಂತೆ ಹಲವರು ನಿಖರವಾದ ದಾಳಿಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಸಾಮಾನ್ಯ ಕಟ್ಟಡಗಳ ಮೇಲಿನ ಬಾಂಬ್ ದಾಳಿಯಲ್ಲಿ ಪರಮಾಣು ಕಾರ್ಯಕ್ರಮದ ಪ್ರಮುಖ ವಿಜ್ಞಾನಿಗಳು ಮೃತಪಟ್ಟಿದ್ದಾರೆ. ನತಾಂಜ್ ಮತ್ತು ಫೋರ್ಡೋನಲ್ಲಿರುವ ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳಿಗೆ ಕನಿಷ್ಠ ಹಾನಿಯಾಗಿದ್ದು, ಕೆಲವು ಬ್ಯಾಲಿಸ್ಟಿಕ್ ಕ್ಷಿಪಣಿ ಕೇಂದ್ರಗಳ ಮೇಲೆ ದಾಳಿಯಾಗಿದೆ. ಆದರೆ ಹಾನಿಯ ಮಟ್ಟ ಇನ್ನೂ ಸ್ಪಷ್ಟವಾಗಿಲ್ಲ. ಆಶ್ಚರ್ಯಕರವಾಗಿ, ಇರಾನ್‌ನ ವಾಯು ರಕ್ಷಣೆಯನ್ನು ಇಸ್ರೇಲ್ ಯುದ್ಧವಿಲ್ಲದೆ ನಿಷ್ಕ್ರಿಯಗೊಳಿಸಿದಂತಿದೆ.
ಇದನ್ನು ಓದಿದ್ದೀರಾ?: ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯ: ಜಗತ್ತನ್ನು ಮೂರನೇ ಮಹಾಯುದ್ಧದತ್ತ ದೂಡುವ ಅಪಾಯ
ಇದಕ್ಕೆ ಪ್ರತ್ಯುತ್ತರವಾಗಿ ಇರಾನ್ 100 ಡ್ರೋನ್‌ಗಳಿಂದ ಪ್ರತಿದಾಳಿ ಮಾಡಿದೆ ಎಂದು ಇಸ್ರೇಲ್ ತಿಳಿಸಿದೆ. ಆದರೆ ಇದಕ್ಕೆ ಯಾವುದೇ ಪುರಾವೆ ಇಲ್ಲ ಮತ್ತು ಇರಾನ್ ಯಾವುದೇ ಡ್ರೋನ್ ಉಡಾಯಿಸಿಲ್ಲ ಎಂದು ಹೇಳಿಕೆ ನೀಡಿದೆ. ಅಂದರೆ, ಇಸ್ರೇಲ್ ಏಕಾಏಕಿ ಇರಾನ್ ಮೇಲೆ ದಾಳಿ ಮಾಡಿ, ದಾಳಿ ಮಾಡಿದ್ದು ತಪ್ಪು ಎಂದು ಎಲ್ಲರೂ ಹೇಳುವುದಕ್ಕೆ ಮುಂಚೆಯೇ ಇರಾನ್ ಪ್ರತಿದಾಳಿ ಮಾಡಿದೆ ಎಂದು ರಕ್ಷಣೆಯ ಮಾತುಗಳನ್ನಾಡಿದೆ. ಹಾಗೂ ಈ ದಾಳಿಗಳು ಇರಾನ್‌ನ ಸರ್ಕಾರವನ್ನು ಅಸ್ಥಿರಗೊಳಿಸುವ ತಂತ್ರದಂತೆ ಕಾಣುತ್ತಿವೆ. ಮುಂದುವರೆದು ಇಸ್ರೇಲ್ ಇದನ್ನು ಸ್ವರಕ್ಷಣೆ ಎಂದಿದೆ.
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಇದಕ್ಕೆ “ತಕ್ಷಣ, ಭಾರೀ ಮತ್ತು ತುರ್ತು ಭೀತಿ” ಇರಬೇಕು. ಆದರೆ ಇಸ್ರೇಲ್ ನಡೆಸಿದ ದಾಳಿಗೆ ಈ ಯಾವ ಒತ್ತಡಗಳೂ ಇರಲಿಲ್ಲ. ಅಷ್ಟೇ ಅಲ್ಲ, ಈ ಕಾರ್ಯಾಚರಣೆ ಎರಡು ವಾರಗಳವರೆಗೆ ಮುಂದುವರಿಯಲಿದೆ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ನಡೆಸಿದ ಈ ದಾಳಿಗೆ ಉತ್ತರಿಸಲು ಇರಾನ್‌ಗೆ ಕಡಿಮೆ ಆಯ್ಕೆಗಳಿವೆ. ಇಸ್ರೇಲ್ ಮೇಲೆ ದೊಡ್ಡ ದಾಳಿಗೆ ಇರಾನ್ ಕೈ ಹಾಕಿದರೆ, ಅದು ಪರಮಾಣು ಪ್ರತಿದಾಳಿಗೆ ಪ್ರೇರೇಪಿಸಬಹುದು. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಗುರಿಗಳ ಮೇಲೆ ದಾಳಿ ಮಾಡಿದರೆ ಅಮೆರಿಕದಿಂದ ಭಾರೀ ಪ್ರತಿರೋಧ ವ್ಯಕ್ತವಾಗಬಹುದು. ಬದಲಾಗಿ, ಇರಾನ್ ಜಾಗತಿಕ ತೈಲ ಸರಬರಾಜನ್ನು ಅಡ್ಡಿಪಡಿಸಬಹುದು. ತನ್ನ ತೈಲ ಉತ್ಪಾದನೆಯನ್ನು ನಿಲ್ಲಿಸಬಹುದು. ಸಮೀಪದ ಅಮೆರಿಕದ ಮಿತ್ರ ರಾಷ್ಟ್ರಗಳ ತೈಲ ಉತ್ಪಾದನೆಯನ್ನು ತಡೆಯಬಹುದು ಅಥವಾ ಹಾರ್ಮುಜ್ ಜಲಸಂಧಿಯನ್ನು ಮುಚ್ಚಬಹುದು. ಇದರ ಮೂಲಕ ಜಾಗತಿಕ ತೈಲದ ಶೇ. 25 ಹರಿವು ತಡೆದಂತಾಗುತ್ತದೆ. ಇದನ್ನು ತಡೆಯಲು ಅಮೆರಿಕಕ್ಕೆ ಕಷ್ಟವಾಗಬಹುದು.
ತೈಲ ಬೆಲೆ ಈಗ ಬ್ಯಾರೆಲ್‌ಗೆ 78 ಡಾಲರ್ ಇದೆ. ಇಸ್ರೇಲ್ ಮತ್ತು ಇರಾನ್ ಯುದ್ಧ ಆರಂಭವಾದರೆ, ತೈಲ ಬೆಲೆ ಏರಿಕೆಯಾಗುತ್ತದೆ. ಒಂದು ಬ್ಯಾರೆಲ್‌ಗೆ ನೂರು ಅಥವಾ ನೂರರ ಗಡಿ ದಾಟಿದರೆ, ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಪ್ರಪಂಚದಾದ್ಯಂತ ಆತಂಕ ಸೃಷ್ಟಿಸುತ್ತದೆ. ಅದರಲ್ಲೂ ಅಮೆರಿಕದ ಆರ್ಥಿಕತೆಗೆ ನೇರವಾಗಿ ಹಾನಿಯಾಗುತ್ತದೆ, ಅಧ್ಯಕ್ಷ ಟ್ರಂಪ್‌ರ ಯೋಜನೆಗಳು ಏರುಪೇರಾಗಬಹುದು. ಇರಾನ್‌ನನ್ನು ಶಾಂತಿಗಾಗಿ ಒತ್ತಾಯಿಸಲು ಇದು ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಕುತೂಹಲಕರ ಸಂಗತಿ ಎಂದರೆ, ಇರಾನ್ ತಾನಾಗಿಯೇ ಈ ಸಂಘರ್ಷವನ್ನು ಆರಂಭಿಸಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆರಂಭಿಸಿದ ಇಸ್ರೇಲ್‌ನ ಕಿಡಿಗೇಡಿ ಕೃತ್ಯ ಜಾಗತಿಕ ಆರ್ಥಿಕತೆಗೆ ಪರಿಣಾಮ ಬೀರಲಿದೆ, ದೊಡ್ಡ ಹಾನಿಯನ್ನು ಉಂಟುಮಾಡಲಿದೆ. ಈ ಬಗ್ಗೆ ಯಾರೂ ದನಿ ಎತ್ತುತ್ತಿಲ್ಲ.