ಅಯೋಧ್ಯೆಯ ರಾಮಮಂದಿರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಅನಂತಕುಮಾರ್ ಹೆಗಡೆಯ ಬಗ್ಗೆ ಪತ್ರಕರ್ತರು ಕೇಳಿದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅನಂತಕುಮಾರ್ ಹೆಗಡೆಯಂಥವರನ್ನು ಸುಸಂಸ್ಕೃತರು ಅಂತ ಹೇಳಕ್ಕಾಗುತ್ತಾ” ಎಂದು ಪ್ರಶ್ನಿಸಿದ್ದಾರೆ.
ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲ ಸಂಗಮದಲ್ಲಿ ಆಯೋಜಿಸಿದ್ದ 37ನೇ ಶರಣ ಮೇಳವನ್ನು ಉದ್ಘಾಟಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, “ಅನಂತಕುಮಾರ್ ಹೆಗಡೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನವನ್ನು ಬದಲಾಯಿಸಲು ಅಂತ ಹೇಳಿಕೆ ನೀಡಿದ್ದರು. ಇಂಥವರಿಂದ ನಾವು ಸಂಸ್ಕೃತಿಯನ್ನು ಬಯಸಲಿಕ್ಕಾಗುತ್ತದಾ? ಅನಂತಕುಮಾರ್ ಹೆಗಡೆಯಂಥವರನ್ನು ಸುಸಂಸ್ಕೃತರು ಅಂತ ಹೇಳಕ್ಕಾಗುತ್ತಾ?” ಎಂದು ಹೇಳಿದರು.
ಅನಂತಕುಮಾರ್ ಹೆಗಡೆಯಂಥವರನ್ನು ಸುಸಂಸ್ಕೃತರು ಅಂತ ಹೇಳಕ್ಕಾಗುತ್ತಾ? ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ pic.twitter.com/6NTEUze3fP
— eedina.com (@eedinanews) January 13, 2024
“ಅನಂತಕುಮಾರ್ ಹೆಗಡೆಯಂಥವರ ಬಾಯಲ್ಲಿ ಇಂಥದ್ದೇ ಭಾಷೆ ಬಳಕೆಯಾಗುವುದು. ರಾಜ್ಯದ ಮುಖ್ಯಮಂತ್ರಿಗಳಿಗೆ ಗೌರವ ಕೊಡುವವರೂ ಇದ್ದಾರೆ. ಕೊಡದೇ ಇರುವವರೂ ಇದ್ದಾರೆ. ರಾಜಕೀಯವಾಗಿ ಮಾತನಾಡುವವರಲ್ಲಿ ಗೌರವ ಕೊಡಿ ಎಂದು ಕೇಳಕ್ಕಾಗುತ್ತದೆಯೇ?” ಎಂದು ಕೇಳಿದ ಸಿಎಂ ಸಿದ್ದರಾಮಯ್ಯ, “ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಗೌರವಕ್ಕೆ ಕುಂದು ಬರುತ್ತದೆಯೇ ವಿನಃ, ನನಗೇನೂ ಆಗಲ್ಲ. ಕೇಂದ್ರದ ಮಂತ್ರಿಯಾಗಿದ್ದವರಿಗೆ ಯಾವ ರೀತಿಯ ಭಾಷೆ ಬಳಸಬೇಕು ಎನ್ನುವುದು ಗೊತ್ತಿಲ್ಲದಿದ್ದರೆ ಅವರು ಸುಸಂಸ್ಕೃತರಲ್ಲ. ಮನುಷ್ಯರಲ್ಲ. ಅಮಾನವೀಯವಾದಂಥವರು ಅನ್ನುವುದಷ್ಟೇ ತೋರುತ್ತದೆ” ಎಂದು ತಿಳಿಸಿದರು.
ಕುಮಟಾದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಅಯೋಧ್ಯೆಯ ರಾಮಮಂದಿರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ, “ನೀನು ಬಾ, ಇಲ್ಲ ಬಿಡು. ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ” ಎಂದು ನಿಂದಿಸಿದ್ದರು.
ಇದನ್ನು ಓದಿದ್ದೀರಾ? ಬಾಬರಿ ಮಸೀದಿಯಂತೆಯೇ ಭಟ್ಕಳದ ಪಳ್ಳಿಯನ್ನೂ ಒಡೆಯುತ್ತೇವೆ: ಬಿಜೆಪಿ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ
“ನಾನು ಅಯೋಧ್ಯೆಗೆ ಹೋಗುತ್ತೇನೆ. ಆದರೆ 22ಕ್ಕೆ ಹೋಗಲ್ಲ. ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ಧಮ್ಮು” ಎಂದು ಹೆಗಡೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ವಿವಾದವನ್ನು ಎಬ್ಬಿಸಿದೆ.