ಏಪ್ರಿಲ್ 29ರಂದು ನರ್ಸಿಂಗ್ ಸೂಪರಿಟೆಂಡೆಂಟ್ ಪರೀಕ್ಷೆಗಳನ್ನು ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯು ನಡೆಸಲಿದೆ. ಈ ಪರೀಕ್ಷೆ ವೇಳೆ ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳು ಧಾರ್ಮಿಕ ಸಂಕೇತಗಳಾದ ಜನಿವಾರ, ಮಂಳಸೂತ್ರ, ಮೊದಲಾದವುಗಳನ್ನು ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಇದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ವಿಎಚ್‌ಪಿಯ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೈಲ್ವೆ ಪರೀಕ್ಷೆಯ ಮಾರ್ಗಸೂಚಿಗಳನ್ನು ಹಂಚಿಕೊಂಡಿರುವ ಅವರು ಈ ಸೂಚನೆಯನ್ನು ವಿರೋಧಿಸಿದ್ದಾರೆ.

ಇದನ್ನು ಓದಿದ್ದೀರಾ? ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ: ಸಂತ್ರಸ್ತ ಮುಸ್ಲಿಂ ವಿದ್ಯಾರ್ಥಿನಿ ಆಲಿಯಾ
“ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಟೆಂಡೆಂಟ್ ಹುದ್ದೆಗೆ ಪರೀಕ್ಷೆಯು 29 ಏಪ್ರಿಲ್ 2025ರಂದು ಬೋಂದೆಲ್‌ನ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ನಡೆಯಲಿದ್ದು, ಆ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಸಂಪ್ರದಾಯಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ” ಎಂದು ಶರಣ್ ಪಂಪ್‌ವೆಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಮಾನ್ಯ ಜಿಲ್ಲಾಧಿಕಾರಿಗಳೇ / ಮಾನ್ಯ ಸಂಸದರೇ ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಆಗ್ರಹಿಸುತ್ತೇನೆ” ಎಂದಿದ್ದಾರೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಇತ್ತೀಚೆಗೆ ಪರೀಕ್ಷೆ ವೇಳೆ ಜನಿವಾರ ತೆಗೆಯಲು ವಿದ್ಯಾರ್ಥಿಯೋರ್ವ ನಿರಾಕರಿಸಿದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗದ ಘಟನೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದೀಗ ರೈಲ್ವೆ ಸೂಚನೆ ಬಹಿರಂಗವಾಗಿದೆ. ಇವೆಲ್ಲವುದರ ನಡುವೆ ಹಿಜಾಬ್ ವಿವಾದವೂ ಮತ್ತೆ ಮುನ್ನೆಲೆಗೆ ಬಂದಿದೆ. “ಹಿಜಾಬ್ ಧರಿಸಲು ಅವಕಾಶವಿಲ್ಲದ ಕಾರಣ ಅದೆಷ್ಟೋ ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಅದರ ಬಗ್ಗೆ ಯಾರೂ ಗಮನಹರಿಸಿಲ್ಲ” ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
