ಮಹಾರಾಷ್ಟ್ರದ ಶಿವಸೇನೆಯಲ್ಲಿ ಬಂಡಾಯವೆದ್ದಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ಆದೇಶದಿಂದ ಸದ್ಯಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಹಾಗೂ ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಶಿವಸೇನೆಯಲ್ಲಿ ಉಂಟಾದ ಬಿಕ್ಕಟ್ಟಿನ ಬಳಿಕ ಪಕ್ಷವನ್ನು ತೊರೆದು ಬಿಜೆಪಿ ಜತೆ ಕೈಜೋಡಿಸಿದ ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹ ಮಾಡಬೇಕು ಎಂದು ಉದ್ಧವ್ ಠಾಕ್ರೆ ಬಣ ಕೋರಿತ್ತು. ಆದರೆ ಇದಕ್ಕೆ ಏಕನಾಥ್ ಶಿಂಧೆ ಆಕ್ಷೇಪಿಸಿದ್ದರು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಈ ಸುದ್ದಿ ಓದಿದ್ದೀರಾ? ದೆಹಲಿ ಸರ್ಕಾರದ ಅಧಿಕಾರ ನಿರ್ಬಂಧಿತ; ಹಸ್ತಕ್ಷೇಪಕ್ಕೆ ಎಲ್‌ಜಿಗೆ ಅಧಿಕಾರವಿಲ್ಲ ಎಂದ ಸುಪ್ರೀಂ ಕೋರ್ಟ್
ಇದಲ್ಲದೇ ಮಹಾರಾಷ್ಟ್ರ ಸರ್ಕಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಕುರಿತು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಮಾರ್ಚ್ 16ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದರ ತೀರ್ಪು ಗುರುವಾರ ಪ್ರಕಟವಾಗಬೇಕಿತ್ತು, ಆದರೆ ಇದನ್ನು ಸದ್ಯ ವಿಸ್ತೃತ ಪೀಠಕ್ಕೆ ವರ್ಗಯಿಸಿದೆ.
ಜೂನ್ 2022 ರಿಂದ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು ಶಿವಸೇನೆಯ ಎರಡೂ ಗುಂಪುಗಳು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.
ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಮಾರ್ಚ್ 16 ರಂದು ವಿಚಾರಣೆಯನ್ನು ಮುಕ್ತಾಯಗೊಳಿಸಿತು ಮತ್ತು ಎರಡೂ ಸೇನಾ ಗುಂಪುಗಳು ಸಲ್ಲಿಸಿದ ಅರ್ಜಿಗಳ ಮೇಲೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.