ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯರವರು ಕಾರ್ ಪೂಲಿಂಗ್‌ಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಮತ್ತು ಹೇಳಿಕೆಯನ್ನು ಹಿಂಪಡೆಯುವಂತೆ ಶುಕ್ರವಾರ(ಅ.13) ಸಂಸದರ ಕಚೇರಿಗೆ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಮುತ್ತಿಗೆ ಹಾಕಿತು.
ಸಂಸದ ಸೂರ್ಯ ಕಚೇರಿಯಲ್ಲಿ ಇಲ್ಲದ ಕಾರಣ, ಜಯನಗರ ಶಾಸಕ ಸಿ ಕೆ ರಾಮಮೂರ್ತಿ ತೇಜಸ್ವಿ ಹೇಳಿಕೆ ಪರ ಕ್ಷಮೆ ಯಾಚಿಸಿದರು. ಇದೇ ವೇಳೆ ಭಾನುವಾರ ಸಾರಿಗೆ ಸಂಘಟನೆಗಳ ಒಕ್ಕೂಟದ ಜೊತೆಯಲ್ಲಿ ಸಭೆ ಮಾಡುವುದಾಗಿ ತಿಳಿಸಿದರು.
ಸಾರಿಗೆ ಒಕ್ಕೂಟದವರಿಗೆ ಸಂಸದರು ಲಿಖಿತವಾಗಿ ಕ್ಷಮೆಯಾಚನೆ ಭಾನುವಾರದೊಳಗೆ ಕೇಳದೆ ಇದ್ದರೆ ಬೆಂಗಳೂರು ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ಧಿಕ್ಕಾರದ ಪೋಸ್ಟರ್‌ಗಳನ್ನು ಹಚ್ಚಿ ಪ್ರತಿಭಟನೆ ನಡೆಸುತ್ತೇವೆ. ಅದಕ್ಕೂ ಜಗ್ಗದೆ ಹೋದರೆ ಅವರ ವಿರುದ್ಧ ಸಾರಿಗೆ ಸಂಘಟನೆಯ ಒಬ್ಬ ಸದಸ್ಯರನ್ನು ಲೋಕಸಭಾ ಚುನಾವಣೆ ಕಣಕ್ಕೆ ಇಳಿಸಲಾಗುವುದು ಎಂದು ಅಧ್ಯಕ್ಷ ನಟರಾಜ ಶರ್ಮಾ ಎಚ್ಚರಿಕೆ ನೀಡಿದರು.
ಒಕ್ಕೂಟದ ನಾರಾಯಣ ಸ್ವಾಮಿ, ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಕಾರ್ಪೊರೇಟ್ ಕಂಪನಿಗಳ ಏಜೆಂಟರಂತೆ ಹೇಳಿಕೆ ನೀಡಿದ್ದಾರೆ, ಹೇಳಿಕೆ ವಾಪಸ್ ಪಡೆಯದೆ ಇದ್ದರೆ ಚಾಲಕರ ಶಕ್ತಿಯನ್ನು ಪ್ರದರ್ಶಿಸಲಾಗುವುದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಒಕ್ಕೂಟದ ರಘು ನಾರಾಯಣ ಗೌಡ, ಜಯಣ್ಣ ಮತ್ತಿತರರು ಇದ್ದರು.