ಜಾತಿ ನಿಂದನೆ ಮಾಡಿದ್ದಾರೆಂದು ವೈರಲ್ ಆಗಿದ್ದ ಆಡಿಯೋದಲ್ಲಿರುವ ಧ್ವನಿ ಬಿಜೆಪಿ ಶಾಸಕ ಮುನಿರತ್ನ ಅವರದ್ದೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್) ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮುನಿರತ್ನ ತಮಗೆ ಜಾತಿ ನಿಂದನೆ ಮಾಡಿದ್ದಾರೆಂದು ಬಿಬಿಎಂಪಿ ಗುತ್ತಿಗೆದಾರ ಮೇಲು ನಾಯ್ಕರ್ ಆರೋಪಿಸಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನೂ ಬಿಡುಗಡೆ ಮಾಡಿದ್ದರು. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆ ಆಡಿಯೋ ಮತ್ತು ದೂರು ಆಧರಿಸಿ ಪೊಲೀಸರು ಮುನಿರತ್ನ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ಡೆಯಡಿ ಸೆಪ್ಟೆಂಬರ್ 13ರಂದು ಎಫ್‌ಐಆರ್ ದಾಖಲಿಸಿದ್ದರು. ಆಡಿಯೋವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ, ಆಡಿಯೋದ ಎಫ್‌ಎಸ್‌ಎಲ್ ವರದಿ ಬಂದಿದ್ದು, ಆ ಆಡಿಯೋದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎನ್ನುವುದು ದೃಢಪಟ್ಟಿದೆ.
ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರನ್ನು ಸೆ.14ರಂದು ಪೊಲೀಸರು ಕೋಲಾರದ ಬಳಿ ಬಂದಿಸಿದ್ದರು. ಆ ಬಳಿಕ, ರಾಜಕೀಯ ಮುಖಂಡೆಯೊಬ್ಬರು ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ನಂತರದಲ್ಲಿ ಮುನಿರತ್ನ ತಮ್ಮ ಎದುರಾಳಿಗಳಿಗೆ, ರಾಜಕೀಯ ನಾಯಕರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಎಚ್‌ಐವಿ ಸೋಕಿಂತ ರಕ್ತವನ್ನೂ ಇಂಜೆಕ್ಟ್ ಮಾಡಲು ಸಂಚು ಹೂಡಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಎಲ್ಲ ಆರೋಪಗಳ ಆಧಾರದ ಮೇಲೆ ಮುನಿರತ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು. ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸಲಾಗಿತ್ತು.
ಎಲ್ಲ ಪ್ರಕರಣಗಳಲ್ಲಿಯೂ ಮುನಿರತ್ನ ಜಾಮೀನು ಪಡೆದಿದ್ದು, ಜೈಲಿನಿಂದ ಹೊರಬಂದಿದ್ದಾರೆ. ಇದೀಗ, ಜಾತಿನಿಂದನೆ ಪ್ರಕರಣದಲ್ಲಿ ಆಡಿಯೋದಲ್ಲಿರುವುದು ಮುನಿರತ್ನ ಅವರದ್ದೇ ಧ್ವನಿ ಎಂಬುದು ಸಾಬೀತಾಗಿದೆ. ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ರದ್ದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.