- ಸಮಾಜದ ತಾರತಮ್ಯ ನಿವಾರಣೆಗೆ ಈ ಗಣತಿ, ಅಧ್ಯಯನಗಳು ಅಗತ್ಯ
- ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ
ಜಾತಿಗಣತಿಯನ್ನು ಪಡೆಯಬೇಡಿ ಎಂದು ಆಗ ಪುಟ್ಟರಂಗಶೆಟ್ಟಿಯವರಿಗೆ ಹೇಳಿದ್ದೇ ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಬೆಂಗಳೂರಿನ ಕೇತೋಹಳ್ಳಿ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, “ಈಗ ಜಾತಿಗಣತಿ ವರದಿ ಪಡೆಯಲು ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ. ಆದರೆ, ಜಾತಿಗಣತಿ ವರದಿಯನ್ನು ನಾವು ಪಡದೇ ಪಡೆಯುತ್ತೇವೆ” ಎಂದರು.
“ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿಗಣತಿಗೆ ಆದೇಶ ಮಾಡಿದ್ದೆ. ಆದರೆ, ಆಗ ಜಾತಿಗಣತಿ ಪೂರ್ಣಗೊಂಡಿರಲಿಲ್ಲ, ನಾವೇ ಆದೇಶ ಕೊಟ್ಟು ನಾವೇ ತೆಗೆದುಕೊಂಡಿಲ್ಲ ಅಂದರೆ ಹೇಗೆ. ಸುಮ್ಮನೆ ಸೋರಿಕೆ ಆಗಿದೆ ಅದು ಇದು ಅಂತ ಹೇಳಿದ್ರು. ಸೆಕ್ರೆಟರಿ ಸಹಿ ಆಗಿಲ್ಲ ಎಂದು ಏನೋ ಹೇಳುತ್ತಿದ್ದಾರೆ. ಏನು ತಾಂತ್ರಿಕ ಸಮಸ್ಯೆ ಎಂದು ನೋಡೋಣ. ಆದರೆ, ನಾವು ಖಂಡಿತ ಜಾತಿಗಣತಿ ವರದಿ ಪಡೆದೇ ಪಡೆದುಕೊಳ್ಳುತ್ತೇನೆ” ಎಂದು ಹೇಳಿದರು.
ಚಾಚೂ ತಪ್ಪದೇ ಜಾರಿ
“ನಾವು ಚುನಾವಣೆ ವೇಳೆ ನೀಡಿರುವ ಐದು ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ಯಾರೇ ಆಡಿಕೊಂಡರೂ ಈ ವರ್ಷದ ಬಜೆಟ್‌ನಲ್ಲೇ ಐದೂ ಘೋಷಣೆಗಳಿಗೂ ಹಣ ಕೊಡುತ್ತೇವೆ. ನಮ್ಮ ಐದೂ ಘೋಷಣೆಗಳು ಜಾತಿ-ಧರ್ಮ ಮೀರಿದವುಗಳು. ಸರ್ವ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಸಂಕಷ್ಟ ನಿವಾರಣೆಗೆ ಈ ಐದು ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ” ಎಂದರು.
“ನಾನು ಅಧಿಕಾರದಲ್ಲಿ ಇರುವವರೆಗೂ ಶೋಷಿತ ಜಾತಿಗಳಿಗೆ, ದಲಿತ ಸಮುದಾಯಗಳಿಗೆ, ಅಲ್ಪಸಂಖ್ಯಾತ ಸಮುದಾಯಗಳ, ಎಲ್ಲಾ ಜಾತಿಯ ಬಡವರ ಏಳಿಗೆಗೆ ಶ್ರಮಿಸುತ್ತೇನೆ. ಹೋರಾಟ ಮಾಡಿಯೇ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ, ಕೊನೆಯವರೆಗೂ ರಾಜಕಾರಣದಲ್ಲಿ ಕ್ರಿಯಾಶೀಲನಾಗಿರುತ್ತೇನೆ. ಬಡವರ ಪರ ರಾಜಕಾರಣ, ಹೋರಾಟ ಮುಂದುವರೆಸುತ್ತೇನೆ” ಎಂದರು.

ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ
“ಸಮಸ್ತ ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
“ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಕಾಗಿನೆಲೆ ಮಹಾಸಂಸ್ಥಾನಕ್ಕೆ ನಾಂದಿ ಹಾಡಲಾಯಿತು. ಮೊದಲ ಸ್ವಾಮೀಜಿ ತಾರಕಾನಂದಪುರಿ ಕಾಲದಿಂದ ಯಶಸ್ವಿಯಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ಪೀಠ ಈಗ ನಿರಂಜನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿಯಾಗಿ ನಡೆಯುತ್ತಿದೆ” ಎಂದರು.
‘ಸಿದ್ದರಾಮಯ್ಯರ ಸರ್ಕಾರದ ಅನುದಾನದಲ್ಲಿ ನಾನು ಮತ್ತೆ ಶಾಸಕನಾದೆ’
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತನಾಡಿ, “2013-18 ರ ಅವಧಿಯ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಅನುದಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದೆ. ಯಾವತ್ತೂ ದ್ವೇಷ ರಾಜಕಾರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯನಾಗಿ, ಅಭಿಮಾನಿಯಾಗಿ ಶಾಖಾಮಠದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲ ನೆರವನ್ನೂ ನೀಡುತ್ತೇನೆ” ಎಂದು ಘೋಷಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ವಿರುದ್ಧ ‘ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ’ ಹೋರಾಟ: ಡಾ. ಸಿ ಎನ್ ಅಶ್ವತ್ಥನಾರಾಯಣ
ಸರ್ಕಾರದ ಅನುದಾನ ಬೇಡ, ಸಮಾಜದ ಬೆವರು ಸಾಕು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, “ಶಾಖಾ ಮಠದ ನಿರ್ಮಾಣಕ್ಕೆ ನಾವು ಸರ್ಕಾರದ ಅನುದಾನ ಕೇಳುವುದಿಲ್ಲ, ಸಮಾಜದ ಬೆವರು ಮತ್ತು ಶ್ರಮ ಸಾಕು” ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಸುರೇಶ್ ಅವರು ಶ್ರೀಮಠದ ನಿರ್ಮಾಣಕ್ಕೆ ವೈಯಕ್ತಿಕವಾಗಿ 50 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಘೋಷಿಸಿದರು. ಬಳಿಕ ಹಲವರು ತಮ್ಮ ತಮ್ಮ ಶಕ್ತಿಯನುಸಾರ 50 ಸಾವಿರ ರೂಪಾಯಿಯಿಂದ 25 ಲಕ್ಷ ರೂಪಾಯಿವರೆಗೂ ತಮ್ಮ ನೆರವನ್ನು ಘೋಷಿಸಿದರು.