ಶೀಘ್ರದಲ್ಲೇ ನಡೆಯಲಿರುವ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ದೇಶದ ಜಾತಿ ಗಣತಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದರು.
“ನಾವು ಸಂಸತ್ತಿನಲ್ಲಿ ಜಾತಿ ಜನಗಣತಿ ಮಾಡುತ್ತೇವೆ ಎಂದು ಹೇಳಿದ್ದೆವು. ಮೀಸಲಾತಿ ವಿಚಾರದಲ್ಲಿ ಗೋಡೆಯಾಗಿರುವ ಶೇ. 50ರ ಮಿತಿಯನ್ನು ಮುರಿಯುತ್ತೇವೆ ಎಂದು ಹೇಳಿದ್ದೆವು. ಅದರೆ, ಪ್ರಧಾನಿ ನರೇಂದ್ರ ಮೋದಿ ಕೇವಲ ನಾಲ್ಕು ಜಾತಿಗಳಿವೆ ಎಂದು ಹೇಳಿದ್ದರು. ಈಗ ಅವರೇ ನಮ್ಮ ಆಗ್ರಹವನ್ನು ಒಪ್ಪಿಕೊಂಡು ಜಾತಿ ಗಣತಿ ಮಾಡುವುದಾಗಿ ಘೋಷಿಸಿದ್ದಾರೆ. ಮೋದಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಮುಕ್ತವಾಗಿ ಸ್ವಾಗತಿಸುತ್ತದೆ” ಎಂದರು.
“ಜಾತಿ ಗಣತಿ ವಿಚಾರದಲ್ಲಿ ತೆಲಂಗಾಣ ಮಾದರಿ ಬಿಹಾರ ಮಾದರಿಗಿಂತ ಉತ್ತಮವಾಗಿದೆ. ತೆಲಂಗಾಣ ಒಂದು ಮಾದರಿಯಾಗಿದ್ದು, ದೇಶಕ್ಕೆ ನೀಲನಕ್ಷೆಯಾಗಬಹುದು. ಜಾತಿ ಗಣತಿ ಯಾವ ಅವಧಿಗೆ ಮುಗಿಯಲಿದೆ ಎಂಬುದನ್ನು ಪ್ರಧಾನಿ ಮೋದಿಯವರು ದೇಶಕ್ಕೆ ಖಾತ್ರಿ ಕೊಡಬೇಕು. ಕಾಲ ವಿಳಂಬವನ್ನು ನಾವು ಸಹಿಸುವುದಿಲ್ಲ. ನಿರ್ಧಿಷ್ಟ ಸಮಯ ನಿಗದಿ ಪಡಿಸಿ ಶೀಘ್ರವೇ ಕಾರ್ಯ ಆರಂಭವಾಗಬೇಕು. ಕಾಯ್ದೆಯಾಗಿ ಜಾರಿಯಾಗಬೇಕು” ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
“ಜಾತಿ ಜನಗಣತಿ ಇದು ಮೊದಲ ಹೆಜ್ಜೆ. ಕಾಂಗ್ರೆಸ್ ಪಕ್ಷ ಇದರ ಸುತ್ತ ಹೊಸ ದೃಷ್ಟಿಕೋನವನ್ನು ಹೊಂದಿದ್ದು, ನಮ್ಮ ದೃಷ್ಟಿಕೋನ, ಅವರು ಅಳವಡಿಸಿಕೊಂಡಿದ್ದಕ್ಕೆ ಸಂತೋಷವಿದೆ. ಜಾತಿ ಜನಗಣತಿಯ ಮೂಲಕ ಹೊಸ ಅಭಿವೃದ್ಧಿ ಮಾದರಿಯನ್ನು ತರುವುದು ನಮ್ಮ ಮುಂದಿನ ಗುರಿಯಾಗಿದೆ. ಈ ಗುರಿ ಕೇವಲ ಮೀಸಲಾತಿಗೆ ಸೀಮಿತವಾಗಿಲ್ಲ, ಈ ಸುತ್ತ ಪ್ರಮುಖ ಪ್ರಶ್ನೆಗಳನ್ನು ಎತ್ತುವುದರ ಬಗ್ಗೆಯೂ ನಾವು ಸ್ಪಷ್ಟತೆಯಲ್ಲಿದ್ದೇವೆ. ಅದು ಒಬಿಸಿಗಳು, ದಲಿತರು, ಆದಿವಾಸಿಗಳು – ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹೇಗೆ ಭಾಗಿಯಾಗಲಿದ್ದಾರೆ ಎನ್ನುವ ಬಗ್ಗೆ ನಮಗೆ ಪ್ರಶ್ನೆಗಳಿವೆ” ಎಂದು ಹೇಳಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಮತ್ತೊಂದು ಪ್ರಮುಖ ವಿಷಯವಿದೆ. ಅದು ಆರ್ಟಿಕಲ್ 15 (5) ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ. ಎನ್‌ಡಿಎ-ಬಿಜೆಪಿ ಸರ್ಕಾರವು ಇದನ್ನು ಜಾರಿಗೆ ತರಲು ಮುಂದಾಗಬೇಕು” ಎಂದು ಒತ್ತಾಯಿಸಿದರು.