ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಜಾತಿ ಗಣತಿ ವರದಿ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇನ್ನೂ ಜಾತಿ ಗಣತಿ ವರದಿ ಬಿಡುಗಡೆಯಾಗಿಲ್ಲ. ವರದಿ ಬಿಡುಗಡೆಗೂ ಮುನ್ನವೇ ಅದನ್ನು ವಿರೋಧಿಸುವುದು ಸರಿಯಲ್ಲ. ವರದಿಯ ಬಗ್ಗೆ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಆಕ್ಷೇಪಣೆ ಮಾಡಬಾರದು” ಎಂದಿದ್ದಾರೆ.
“ಅಧಿವೇಶನದ ವೇಳೆ ರಾಜ್ಯಮಟ್ಟದ ಎಲ್ಲ ನಾಯಕರು ಬೆಳಗಾವಿಯಲ್ಲಿರುತ್ತಾರೆ. ಆಗ, ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯ ಬಗ್ಗೆ ಚರ್ಚಿಸಲಾಗುತ್ತದೆ. ಸದ್ಯ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಮತ್ತು ಚಿಕ್ಕೋಡಿ ಕ್ಷೇತ್ರದಿಂದ ಕುರುಬ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಚಿಂತಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
“ಟಿಕೆಟ್ ಬಯಸುವವರಿಂದ ಅರ್ಜಿ ಆಹ್ವಾನಿಸುತ್ತೇವೆ. ಅವರಲ್ಲಿ ಗೆಲ್ಲಬಹುದಾದ, ಜನರಿಗೆ ಹತ್ತಿರವಿರುವ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ಹಂಚಿಕೆಯ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.