ಕರ್ನಾಟಕದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂದೇ ಪರಿಗಣಿತವಾಗಿರುವ ಜಾತಿ ಸಮೀಕ್ಷೆಯ ವರದಿಯನ್ನು ನಾಳೆ(ಫೆ.28) ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮವೊಂದಕ್ಕೆ ಮಾತನಾಡುತ್ತಿದ್ದ ಅವರು, “ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯನವರ ಭೇಟಿಗೆ ಸಮಯ ಕೇಳಿದ್ದೇವೆ. ಕೊಡುವುದಾಗಿ ತಿಳಿಸಿದ್ದಾರೆ. ಸ್ಥಳ ಇನ್ನೂ ನಿಗದಿಯಾಗಿಲ್ಲ. ಸ್ಥಳ ನಿಗದಿಯಾದ ಬಳಿಕ ಭೇಟಿ ಮಾಡಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
“ನಮ್ಮ ವರದಿಯನ್ನು ಈಗಾಗಲೇ ತಯಾರು ಮಾಡಿ ಆಗಿದೆ. ಮುದ್ರಣದ ಕೆಲಸ ಕೂಡ ಮುಗಿದಿದೆ. ಸರ್ಕಾರಕ್ಕೆ ಸಲ್ಲಿಸಲಷ್ಟೇ ಬಾಕಿ ಇದೆ. ಇದು ಹಿಂದುಳಿದ ವರ್ಗಗಳ ಆಯೋಗದ ವರದಿ” ಎಂದು ತಿಳಿಸಿದರು.
“ನಮ್ಮ ಯಾವುದೇ ದಾಖಲೆಗಳು ಕಳೆದು ಹೋಗಿರಲಿಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ನಮ್ಮ ವರದಿಯಲ್ಲಿ ಏನಿದೆ ಎಂಬ ಅಂಶವನ್ನು ನಾವು ಬಹಿರಂಗಪಡಿಸುವಂತಿಲ್ಲ. ಅದು ಸರ್ಕಾರದ ಕೆಲಸ. ನಮ್ಮ ಕೆಲಸ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವುದಷ್ಟೇ. ಆಯೋಗದ ಎಲ್ಲ ಸದಸ್ಯರು ಈ ಸಂದರ್ಭದಲ್ಲಿ ಜೊತೆಗಿರಲಿದ್ದಾರೆ” ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಗಗನಯಾತ್ರಿ ಪ್ರಶಾಂತ್ ನಾಯರ್ ನನ್ನ ಪತಿ: ಮದುವೆಯ ಗುಟ್ಟು ಬಿಟ್ಟುಕೊಟ್ಟ ಮಲಯಾಳಂ ನಟಿ ಲೀನಾ
ಪ್ರಸ್ತುತ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದ ಕಾರ್ಯಾವಧಿಯು ಫೆ.29ಕ್ಕೆ ಕೊನೆಗೊಳ್ಳಲಿದೆ. ಈ ಆಯೋಗವು ಎಚ್. ಕಾಂತರಾಜ್ ನೇತೃತ್ವದ ಆಯೋಗ ಸಿದ್ಧಪಡಿಸಿದ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಸಿದ್ಧಪಡಿಸಿದೆ. ಲೋಕಸಭೆ ಚುನಾವಣೆ ಇರುವುದರಿಂದ ಸರ್ಕಾರವು ವರದಿ ಸ್ವೀಕರಿಸಿದ ನಂತರ ಮುಂದೆ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮನೆ ಮೂಡಿಸಿದೆ.
