ಅನುರಾಗ್ ಅವರ ಹೇಳಿಕೆ ಮತ್ತು ಮೋದಿಯ ಸಂಭ್ರಮವನ್ನು ದೇಶದ ಜನರು ಅದರಲ್ಲೂ ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಜನರು ತೀವ್ರವಾಗಿ ಖಂಡಿಸಬೇಕು. ಮೋದಿ ಅವರು ಕೇವಲ ರಾಹುಲ್ ಅವರ ಬಳಿ ಮಾತ್ರವಲ್ಲದೆ, ದೇಶದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಬೇಕು.
ಭಾರತವನ್ನು ಬೆಂಬಿಡದೆ ಕಾಡುತ್ತಿರುವ ಪೆಡಂಭೂತ, ವಿಷಜಂತು ಜಾತಿ. ದೇಶದ ಇಡೀ ವ್ಯವಸ್ಥೆ, ರಾಜಕಾರಣ ಎಲ್ಲವೂ ಜಾತಿಯನ್ನು ಆಧರಿಸಿದೆ. ಜಾತಿಯ ಮೇಲೆಯೇ ಎಲ್ಲವೂ ನಿರ್ಧಾರವಾಗುತ್ತಿವೆ. ಜಾತಿ ಆಧಾರದ ಮೇಲೆ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವನ್ನು ಅಳೆಯಲಾಗುತ್ತಿದೆ. ಇದೇ ಜಾತಿ ಈಗ ಸಂಸತ್ತಿನಲ್ಲಿ ನಂಜು ಕಾರಲು ಕಾರಣವಾಗಿದೆ. ಲೋಕಸಭೆಯ ವಿಪಕ್ಷ ನಾಯಕನನ್ನು ನಿನ್ನ ಜಾತಿ ಯಾವುದು ಎಂದು ಕೇಳುವ ಮೂಲಕ ಬಿಜೆಪಿ ವಿಷ ಕಾರುತ್ತಿದೆ. ತನ್ನ ಶ್ರೇಣೀಕೃತ ಜಾತಿವಾದಿ ಸಿದ್ದಾಂತವನ್ನು ಹೊರ ಹಾಕುತ್ತಿದೆ.
ಹೌದು, ಕಳೆದ ಕೆಲವು ತಿಂಗಳುಗಳಿಗೆ ಜಾತಿ ಗಣತಿ ಭಾರೀ ಸದ್ದು ಮಾಡುತ್ತಿದೆ. ಹಲವಾರು ರಾಜ್ಯ ಸರ್ಕಾರಗಳು ಜಾತಿ ಗಣತಿ ನಡೆಸಲು ಮುಂದಾಗಿವೆ. ಬಿಜೆಪಿಯ ಮಿತ್ರ ಪಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸರ್ಕಾರ ಬಿಹಾರದಲ್ಲಿ ಈಗಾಗಲೇ ಜಾತಿಗಣತಿ ನಡೆಸಿದೆ. ಅಂಕಿಅಂಶಗಳುನ್ನು ಕೂಡ ಬಹಿರಂಗಪಡಿಸಿದೆ. ಆದರೆ, ಜಾತಿ ಗಣತಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸಲು ಎರಡು ಕಾರಣಗಳಿವೆ. ಒಂದು, ಬಿಜೆಪಿ ಪ್ರಬಲ ಜಾತಿಗಳ ಹಂಗಿನಲ್ಲಿದೆ. ಪ್ರಬಲ ಜಾತಿಗಳನ್ನು ತನ್ನ ಮತ ಬ್ಯಾಂಕ್ ಮಾಡಿಕೊಂಡಿದೆ. ಅವರನ್ನು ಓಲೈಸುವುದು ಕೇಸರಿ ಪಕ್ಷಕ್ಕೆ ಮುಖ್ಯವಾಗಿದೆ. ಎರಡನೆಯದು, ಮನುವಾದವನ್ನು ತನ್ನ ಸಿದ್ಧಾಂತ ಮಾಡಿಕೊಂಡಿರುವ ಬಿಜೆಪಿ, ದಲಿತ, ಹಿಂದುಳಿದವರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ ಎಂಬುದನ್ನು ಗ್ರಹಿಸಿದೆ.
ಜಾತಿಗಣತಿ ನಡೆದರೆ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರೂ ಸೇರಿದಂತೆ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ದಾಖಲೆಯ ಸಮೇತ ಬಹಿರಂಗವಾಗುತ್ತದೆ. ಈ ಸಮುದಾಯಗಳಿಗೆ ಹೆಚ್ಚಿನ ಸೌಲಭ್ಯ, ಮಹತ್ವ ನೀಡಬೇಕಾಗುತ್ತದೆ. ಇದು ಇಷ್ಟವಿಲ್ಲ. ಅದನ್ನು ಬಿಜೆಪಿ ಸಹಿಸುವುದೂ ಇಲ್ಲ. ಸದ್ಯ, ಜಾತಿ ಗಣತಿ ವಿಚಾರದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಬಲವಾಗಿ ನಿಂತಿದ್ದಾರೆ.
ಬಜೆಟ್‌ನಲ್ಲಿ ದಲಿತರು ಆದಿವಾಸಿಗಳು ಹಿಂದುಳಿದವರು ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಈ ಸಮುದಾಯದ ಜನರ ಅಭಿವೃದ್ಧಿಯಾಗಬೇಕೆಂದರೆ, ಅವರಿಗೆ ಬಜೆಟ್‌ನಲ್ಲಿ ಅಗತ್ಯ ಪಾಲು ದೊರೆಯಬೇಕೆಂದರೆ ಜಾತಿಗಣತಿ ಅಗತ್ಯ ಎಂದಿದ್ದ ರಾಹುಲ್ ಗಾಂಧಿ, ಜಾತಿಗಣತಿ ನಡೆಸುವ ವಿಚಾರದಲ್ಲಿ ಪ್ರಧಾನಿ ಮೋದಿಗೆ ಸವಾಲು ಹಾಕುತ್ತಿದ್ದಾರೆ. ಇದನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ.
ರಾಹುಲ್ ಅವರ ಬಾಯಿ ಮುಚ್ಚಿಸಲು ಹೆಣಗಾಡುತ್ತಿರುವ ಬಿಜೆಪಿ, ರಾಹುಲ್ ವಿರುದ್ಧ ಸಂಸತ್‌ನ ವೇದಿಕೆಯಲ್ಲಿಯೇ ವಿಷ ಕಾರುತ್ತಿದೆ. ಮಂಗಳವಾರ ಲೋಕಸಭೆಯಲ್ಲಿ ಜಾತಿಗಣತಿ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ನಂಜು ಕಾರಿಕೊಂಡ ಬಿಜೆಪಿ ಸಂಸದ ಅನುರಾಗ್ ಠಾಕೂರ್, “ಖುದ್ದು ತನ್ನ ಜಾತಿ ಯಾವುದು ಅಂತಾನೇ ಗೊತ್ತಿಲ್ಲದವನು ಜಾತಿ ಗಣತಿ ಬಗ್ಗೆ ಮಾತಾಡ್ತಾನೆ” ಎಂದು ಹೀಗಳೆದರು. ಅವರ ಈ ಹೇಳಿಕೆಗೆ ಬಿಜೆಪಿಯ ಎಲ್ಲ ಸಂಸದರು ಮೇಜು ಕುಟ್ಟಿ ಸಂಭ್ರಮಿಸಿದರು.
ಮಾತ್ರವಲ್ಲ, ಸ್ವತಃ ಪ್ರಧಾನಿ ಮೋದಿ ಅವರು ಕೂಡ ಅನುರಾಗ್ ಠಾಕೂರ್ ಅವರ ಭಾಷಣದ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು ಸಂಭ್ರಮ ಪಟ್ಟರು. ನನ್ನ ಯುವ ಮತ್ತು ಶಕ್ತಿಯುತ ಸಹೋದ್ಯೋಗಿ ಅನುರಾಗ್ ಠಾಕೂರ್ ಅವರ ಈ ಭಾಷಣವನ್ನು ಕೇಳಲೇಬೇಕು. ಸತ್ಯಗಳು ಮತ್ತು ಹಾಸ್ಯದ ಪರಿಪೂರ್ಣ ಮಿಶ್ರಣದ ಈ ಭಾಷಣ ‘ಇಂಡಿಯಾ’ ಮೈತ್ರಿಯ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದು ಗಹಗಹಿಸಿ ನಕ್ಕಿದ್ದಾರೆ. ಸಂಭ್ರಮಿಸಿದ್ದಾರೆ. ಪ್ರಧಾನಿಯ ಈ ಸಂಭ್ರಮ ವಿಪಕ್ಷ ನಾಯಕನ್ನು ನಿಂದಿಸಿದ್ದಕ್ಕೆ ಸೀಮಿತವಲ್ಲ. ಈ ಅಹಂಕಾರದ ಪೋಸ್ಟ್, ತಮ್ಮ ಹಕ್ಕುಗಳನ್ನು ಕೇಳುತ್ತಿರುವ ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳನ್ನು ಅಪಹಾಸ್ಯ ಮಾಡಿದೆ. ಅಪಮಾನಿಸಿದೆ. ನಿಂದಿಸಿದೆ.
ಅನುರಾಗ್ ಮತ್ತು ಮೋದಿ ಅವರ ನಿಂದನೆ ಜಾತಿ ತಾರತಮ್ಯವನ್ನು ಪ್ರತಿಪಾದಿಸುವ ಮನುಸ್ಮೃತಿಯ ಬೇರಿನಿಂದ ಬಂದಿರುವ ವಿಷ. ಈ ವಿಷ ಭಾರತದ ಬಹುಸಂಖ್ಯಾತರನ್ನು ಅಣಕಿಸಿದೆ. ಅನುರಾಗ್ ಅವರ ಮಾತುಗಳಲ್ಲಿ ಸಂಸತ್ ಕಡತದಿಂದ ತೆಗೆಯಲಾದ ಪದಗಳನ್ನು ಒಳಗೊಂಡ ಹೇಳಿಕೆಗಳನ್ನು ಮೋದಿ ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ. ಮೋದಿ ನಡೆಯನ್ನು ಖಂಡಿಸಿ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಆದಾಗ್ಯೂ, ಬಿಜೆಪಿಗರು ಎಷ್ಟೇ ಅಪಮಾನ ಮಾಡಿದರೂ, ನಿಂದಿಸಿದರೂ ಜಾತಿಜನಗಣತಿಯನ್ನು ನಾವು ನಡೆಸಿಯೇ ನಡೆಸುತ್ತೇವೆ. ಅನುರಾಗ್ ಠಾಕೂರ್ ಅವರಿಂದ ನಾವು ಕ್ಷಮಾಪಣೆ ಕೇಳುವುದಿಲ್ಲ. ಅವರ ಕ್ಷಮಾಪಣೆ ನಮಗೆ ಬೇಕಿಲ್ಲ. ಹಿಂದೂಸ್ತಾನದ ಶೇ.95ರಷ್ಟು ಜನರಿಗೆ ಜಾತಿಜನಗಣತಿ ಬೇಕು. ದೇಶದ ಸಂಪತ್ತು ಅಂಚಿನಲ್ಲಿರುವ ಜನರಿಗೆ ದಕ್ಕಬೇಕು ಎಂದು ಕಾಂಗ್ರೆಸ್ ಹೇಳುತ್ತಿದೆ. ಇದೇ ಸಂದೇಶವನ್ನು ದೇಶದ ಜನರಿಗೆ ಸಾರುತ್ತಿದೆ. ಕಾಂಗ್ರೆಸ್‌ನ ಈ ನಿಲುವಿಗೆ ವಿಪಕ್ಷಗಳೂ ಬೆಂಬಲ ನೀಡುತ್ತಿವೆ.
ಜಾತಿಗಣತಿ ಮತ್ತು ರಾಹುಲ್ ವಿರುದ್ಧದ ಅಪಮಾನದ ಬಗ್ಗೆ ಮಾತನಾಡಿರುವ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ”ರಾಜಕೀಯ ಪಕ್ಷದ ಅನುಕೂಲಕ್ಕಾಗಿ ಜಾತಿಗಣತಿ ಕೆಲಸ ಮಾಡುತ್ತದೆ ಎಂಬ ಅಂಶವು ಅಪ್ರಸ್ತುತ ಅಥವಾ ತರ್ಕಬದ್ಧವಲ್ಲ. ಏಕೆಂದರೆ, ಯಾರಾದರೂ ಶಾಲೆಗಳಿಗೆ ಕೆಲಸ ಮಾಡಿದರೆ, ಶಿಕ್ಷಣಕ್ಕೆ ಒತ್ತು ನೀಡಿದರೆ, ಅದರ ಹಿಂದೆ ರಾಜಕೀಯ ಅನುಕೂಲ ಮಾತ್ರ ಇರುವುದಿಲ್ಲ. ಉತ್ತಮ ಗುಣಮಟ್ಟದ ಶಿಕ್ಷಣವು ಮೊದಲ ಆದ್ಯತೆಯಾಗಿರುತ್ತದೆ. ಅಂತಹ ಕೆಲಸಗಳ ಮೂಲಕ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಯಾರಾದರೂ ಹೆಚ್ಚಿನ ಬೆಂಬಲ ಮತ್ತು ಅವಕಾಶವನ್ನು ಹುಡುಕುತ್ತಿದ್ದಾರೆ ಎನ್ನುವುದಾದರೆ, ವಿಶೇಷವಾಗಿ ರಾಹುಲ್ ಗಾಂಧಿ ಅವರು, ಯಾರದ್ದಾದರೂ ಮತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬ ಆಧಾರದ ಮೇಲೆ ನಾವು ಅವರ ಜನಪರ ನೀತಿಯನ್ನು ತಿರಸ್ಕರಿಸಲು ಪ್ರಾರಂಭಿಸಿದರೆ, ನಾವು ನಮ್ಮ ಎಲ್ಲ ನೀತಿಗಳನ್ನು ತ್ಯಜಿಸಬೇಕಾಗುತ್ತದೆ. ಹೀಗಾಗಿ, ನಾವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂಬುದನ್ನು ಗ್ರಹಿಸಬೇಕು” ಎಂದು ಹೇಳಿದ್ದರು.
ಅಂದಹಾಗೆ, ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಜಾತಿಗಣತಿಯ ಅಂಕಿಅಂಶವನ್ನು ಪ್ರಕಟಿಸಿರುವ ರಾಜ್ಯ ಬಿಹಾರ. ಬಿಜೆಪಿ ಜೊತೆಗಿರುವ ನಿತೀಶ್ ಕುಮಾರ್ ಅವರೇ ಜಾತಿಗಣತಿ ನಡೆಸಿ, ದತ್ತಾಂಶಗಳು ಬಹಿರಂಗಪಡಿಸಿ, ಮೀಸಲಾತಿಯನ್ನು 65%ಗೆ ಹೆಚ್ಚಿಸಿದ್ದಾರೆ. ಆದರೂ, ನಿತೀಶ್ ಸರ್ಕಾರದ ತೀರ್ಮಾನಕ್ಕೆ ನ್ಯಾಯಾಂಗದ ಅನುಮೋದನೆ ದೊರೆತಿಲ್ಲ.
ಈ ಸುದ್ದಿ ಓದಿದ್ದೀರಾ? ನೀಟ್-ಯುಜಿ 2024 | ವಿವಾದ ನಡುವೆಯೇ ಆಗಸ್ಟ್ 14ರಿಂದ ಕೌನ್ಸೆಲಿಂಗ್
ಅದೇನೆ ಇರಲಿ, ಜಾತಿಗಣತಿಯ ಕಾರಣಕ್ಕೆ ತಮ್ಮ ಪಕ್ಷದ ಸಂಸದ ವಿಪಕ್ಷ ನಾಯಕನ ಜಾತಿಯನ್ನು ಕೇಳುವ, ಅಣಕಿಸುವ ಹೇಳಿಕೆಯನ್ನು ಪ್ರಧಾನಿ ಮೋದಿ ಸಂಭ್ರಮಿಸುವುದು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲಿನ ಆಪತ್ತನ್ನು ಸೂಚಿಸುತ್ತದೆ. ಬ್ರಾಹ್ಮಣರು ದೇಶವನ್ನು ಆಳಬೇಕು, ಶೂದ್ರರು ಅವರ ಸೇವೆ ಮಾಡಬೇಕೆಂಬ ಆರ್‌ಎಸ್‌ಎಸ್ ಅಜೆಂಡಾವನ್ನು ಪ್ರತಿಬಿಂಬಿಸುತ್ತದೆ.
ಅನುರಾಗ್ ಅವರ ಹೇಳಿಕೆ ಮತ್ತು ಮೋದಿಯ ಸಂಭ್ರಮವನ್ನು ದೇಶದ ಜನರು ಅದರಲ್ಲೂ ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಜನರು ತೀವ್ರವಾಗಿ ಖಂಡಿಸಬೇಕು. ಮೋದಿ ಅವರು ಕೇವಲ ರಾಹುಲ್ ಅವರ ಬಳಿ ಮಾತ್ರವಲ್ಲದೆ, ದೇಶದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಬೇಕು. ಮೋದಿಯ ಅಹಂಕಾರವನ್ನು ಅಡಗಿಸಬೇಕು. ಇಲ್ಲದಿದ್ದರೆ, ಜಾತಿ ದೌರ್ಜನ್ಯಗಳನ್ನೂ ಮೋದಿ ಸರ್ಕಾರ ಸಂಭ್ರಮಿಸುತ್ತದೆ. ತಳ ಸಮುದಾಯಗಳನ್ನು ಹಿಂಸಿಸಲು ಕುಮ್ಮಕ್ಕು ಕೊಡುತ್ತದೆ. ಹಿಂದುಳಿದ ಸಮುದಾಯಗಳನ್ನು ಮತ್ತಷ್ಟು ಹಿಂದಕ್ಕೆ ದೂಡುತ್ತದೆ. ಇದೆಲ್ಲವೂ ಆಗಬಾರದೆಂದರೆ, ದೇಶದ ಬಹುಸಂಖ್ಯಾತರಾದ ತಳ ಸಮುದಾಯಗಳ ಜನರು ಎಚ್ಚೆತ್ತುಕೊಳ್ಳಬೇಕಿದೆ.