- ಶುಕ್ರವಾರದ ಸಭೆಯಲ್ಲಿ ಸಮಾಲೋಚಿಸಿ, ಸೂಕ್ತ ನಿರ್ಧಾರ
- ಸಿಡಬ್ಲ್ಯೂಎಂಎ ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ
ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ನಾಳೆ (ಸೆ.29) ಸುಪ್ರೀಂಕೋರ್ಟ್, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ, ವಕೀಲರ, ಜಲತಜ್ಞರ ಹಾಗೂ ಅನುಭವಿಗಳ ಸಭೆ ಕರೆದಿದ್ದಾರೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ತಜ್ಞರ ಸಭೆಯಲ್ಲಿ ಸಮಾಲೋಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದರು.
“ಕಾವೇರಿ ನದಿಯಲ್ಲಿ ನೀರು ಎಷ್ಟು ಹರಿಯುತ್ತಿದೆ, ಅಣೆಕಟ್ಟೆಯಲ್ಲಿ ಎಷ್ಟು ನೀರು ಕಡಿಮೆಯಾಗಿದೆ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಂಗಳೂರಿನ ಜನತೆಗೆ ಕುಡಿಯಲು ನಾವು ನೀರನ್ನು ಉಳಿಸಿಕೊಳ್ಳಬೇಕು. ಬರದ ಈ ಸನ್ನಿವೇಶದದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯೂಎಂಎ) ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಃಕರಣವಿರುವವರ ನಿದ್ದೆಗೆಡಿಸುವ ಮೂರು ಸುದ್ದಿಗಳು
“ಸಂಕಷ್ಟದ ಸೂತ್ರ ಕಂಡುಹಿಡಿಯಲು ಸುಪ್ರೀಂಕೋರ್ಟ್ ಮತ್ತು ಸಿಡಬ್ಲ್ಯೂಎಂಎಗೆ ನಾವು ಒತ್ತಾಯ ಮಾಡುತ್ತಲೇ ಇದ್ದೇವೆ. ಕಾವೇರಿ ನದಿ ನೀರು ಕಡಿಮೆಯಾಗುತ್ತಿರುವುದರಿಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕಾನೂನಾತ್ಮಕವಾಗಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ರಾಜ್ಯದ ಹಿತಕ್ಕೆ ಯಾವೆಲ್ಲ ಕ್ರಮಕೈಗೊಳ್ಳಬೇಕು ಅವೆಲ್ಲವನ್ನೂ ಮಾಡುತ್ತೇವೆ” ಎಂದು ತಿಳಿಸಿದರು.
“ಬರದಿಂದಾಗಿ ರಾಜ್ಯದ ಜನತೆ ಸಂಕಷ್ಟ ಎದುರಿಸುತ್ತಿದೆ. ಹತಾಶೆ, ಆಕ್ರೋಶ ವ್ಯಕ್ತಪಡಿಸಲು ರಾಜ್ಯ ಬಂದ್ ಕರೆ ನೀಡಿದ್ದಾರೆ. ಎಲ್ಲರೂ ಶಾಂತ ರೀತಿಯಿಂದ ಪ್ರತಿಭಟನೆ ನಡೆಸಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಅಹಿತಕರ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಬಾರದು” ಎಂದರು.
ಇಂಡಿಯಾ ಒಕ್ಕೂಟ ಬಲಗೊಳಿಸಿಕೊಳ್ಳಲು ಕಾಂಗ್ರೆಸ್ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿದೆ ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, “ಬಿಜೆಪಿಯವರು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಮೊದಲು ಬಿಡಬೇಕು. ಪ್ರಧಾನಿಗಳು ಎರಡೂ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು. ಇದು ರಾಜ್ಯಗಳ ನಡುವಿನ ವಿಶ್ವಾಸ ವೃದ್ಧಿಸಲು ಸಹಕಾರಿಯಾಗುತ್ತದೆ” ಎಂದರು.