- ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಕರೆ
- ರಾಜ್ಯಾದ್ಯಂತ ನಾನಾ ಸಂಘಟನೆಗಳ ಬೆಂಬಲ
ಕಾವೇರಿ ವಿಚಾರವಾಗಿ ಪ್ರತಿಭಟನೆ ಮಾಡಲು ನಾವು ಯಾರಿಗೂ ಅಡ್ಡಿ ಮಾಡಲ್ಲ. ಆದರೆ ಕರ್ನಾಟಕ ಬಂದ್‌ಗೆ ಅವಕಾಶ ಕೊಡಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿ, “ನಾಳೆ ಸಾರ್ವಜನಿಕರಿಗೆ ರಕ್ಷಣೆ ಕೊಡುತ್ತೇವೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಕೂಡ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ, ಅವನ್ನು ಪಾಲಿಸಬೇಕು” ಎಂದರು.
“ಬಂದ್‌ಗೆ ಕರೆ ನೀಡಿರುವ ಸಂಘಟನಾಕಾರರು ದಯವಿಟ್ಟು ಕಾನೂನು ಪಾಲಿಸಲಿ. ಬಂದ್ ಮಾಡದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ಅಹಿತಕರ ಘಟನೆಗಳು ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.
“ನಾಳೆ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಗೆ ಆನ್‌ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಇದೇ ವೇಳೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಬಂದ್‌ಗೆ ಸಂಘಟನೆಗಳಿಂದ ಭಾರೀ ಬೆಂಬಲ; ರಸ್ತೆಗಿಳಿಯುವ ಮುನ್ನ ಇರಲಿ ಎಚ್ಚರ
ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಮಾಜಿ ಶಾಸಕರು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಬಹಳಷ್ಟು ಜನರಿಗೆ ಸಿಟ್ಟಿದೆ. ಈ ಬಗ್ಗೆ ಕೆಲವು ಕಡೆ ಕಾಂಗ್ರೆಸ್ ಸೇರುವ ಬಗ್ಗೆ ಕೆಲವು ನಾಯಕರು ಮುಂದೆ ಬಂದಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ” ಎಂದರು.
“ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶೀಘ್ರ ಆಯ್ಕೆ ಮಾಡಲು ಸಲಹೆ ಪಡೆಯಲಾಗುತ್ತಿದೆ. ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲ ಭಾಗದ ನಾಯಕರ ಜತೆ ಎಂಎಲ್‌ಸಿ ಚುನಾವಣೆ ಬಗ್ಗೆ ಚರ್ಚೆ ನಡಸಲಾಗುತ್ತಿದೆ” ಎಂದು ಹೇಳಿದರು.
ಹರಿಪ್ರಸಾದ್ ಹಾಗೂ ಮುನಿಯಪ್ಪ ಅವರ ಭೇಟಿ ಬಗ್ಗೆ ಕೇಳಿದಾಗ, ಬಿ.ಕೆ.ಹರಿಪ್ರಸಾದ್ ಮತ್ತು ಮುನಿಯಪ್ಪ ಅವರು ಲೋಕಸಭೆ ಚುನಾವಣೆಯ ವಿಚಾರವಾಗಿ ಚರ್ಚೆ ನಡೆಸಲು ಬಂದಿದ್ದರು. ಇದೇ ವೇಳೆ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಿ ಎಂದು ಮುನಿಯಪ್ಪ ಅವರು ಸಲಹೆ ನೀಡಿದ್ದಾರೆ” ಎಂದು ಸ್ಪಷ್ಟನೆ ನೀಡಿದರು.