ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸಂಬಂಧ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಳೆದೆರಡು ದಿನದ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಇಂದು (ಅ.13) ಎತ್ತಿಹಿಡಿದಿದೆ.
15 ದಿನಗಳವರೆಗೆ ಪ್ರತಿದಿನವೂ ಮೂರು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಬುಧವಾರ ಆದೇಶಿಸಿತ್ತು. ಈ ಸಂಬಂಧ ಇಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ನೀರು ಬಿಡುವ ಆದೇಶ ಎತ್ತಿ ಹಿಡಿಯಲಾಗಿದೆ.
ನವದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ಹಂಚಿಕೆ ವಿಚಾರದ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿಚಾರಣೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಕಳೆದೆರಡು ದಿನಗಳ ಹಿಂದೆ ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ವಾದ ಮಂಡನೆ ಮಾಡಿದ್ದ ಕರ್ನಾಟಕ ಪರ ಅಧಿಕಾರಿಗಳು, ರಾಜ್ಯದಲ್ಲಿ ಮಳೆ ಇಲ್ಲದಾಗಿದ್ದು, ಬರಗಾಲ ಆವರಿಸಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಕೊರತೆಯಿದೆ. ರಾಜ್ಯದಲ್ಲಿ ತೀವ್ರ ಬರದ ಪರಿಸ್ಥಿತಿಯಿದ್ದು, ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ ಎಂದು ಮನವರಿಕೆ ಮಾಡಿದ್ದರು. ಇಷ್ಟಾದರೂ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಅ.16ರಿಂದ 31ರ ವರೆಗೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿತ್ತು.